ದಾಂಡೇಲಿ: ಕಾಳಿ ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 6 ಜನ ಸಾವು

KannadaprabhaNewsNetwork |  
Published : Apr 22, 2024, 02:04 AM ISTUpdated : Apr 22, 2024, 07:23 AM IST
River

ಸಾರಾಂಶ

ದಾಂಡೇಲಿಗೆ ಸಮೀಪದ ಅಕೋಡಾದಲ್ಲಿ ಕಾಳಿ ನದಿ ಹಿನ್ನೀರಿನಲ್ಲಿ ಮುಳುಗುತ್ತಿದ್ದ ಮಕ್ಕಳ ರಕ್ಷಣೆಗೆ ಹೋದ ಪಾಲಕರೂ ಸೇರಿ ಒಂದೇ ಕುಟುಂಬದ ಆರು ಮಂದಿ ಭಾನುವಾರ ನೀರುಪಾಲಾದ ಘಟನೆ ನಡೆದಿದೆ.

 ದಾಂಡೇಲಿ :  ಇಲ್ಲಿಗೆ ಸಮೀಪದ ಅಕೋಡಾದಲ್ಲಿ ಕಾಳಿ ನದಿ ಹಿನ್ನೀರಿನಲ್ಲಿ ಮುಳುಗುತ್ತಿದ್ದ ಮಕ್ಕಳ ರಕ್ಷಣೆಗೆ ಹೋದ ಪಾಲಕರೂ ಸೇರಿ ಒಂದೇ ಕುಟುಂಬದ ಆರು ಮಂದಿ ಭಾನುವಾರ ನೀರುಪಾಲಾದ ಘಟನೆ ನಡೆದಿದೆ.

ಹುಬ್ಬಳ್ಳಿ ಈಶ್ವರನಗರ ಎಪಿಎಂಸಿ ನಿವಾಸಿಗಳಾದ ನಜೀರ್‌ ಅಹಮ್ಮದ್‌ ಚಮನ್‌ ಸಾಬ್‌ ಹೊಂಬಾಳ (40) ಅಲ್ಫಿಯಾ ನಜೀರ್‌ ಅಹಮ್ಮದ್‌ ಹೊಂಬಾಳ(10), ಮೋಹಿನ್‌ ನಜೀರ್‌ ಅಹಮದ್‌ ಹೊಂಬಾಳ (6), ಬೆಂಗಳೂರು ನಿವಾಸಿಗಳಾದ ರೇಷ್ಮಾ ಯುನೀಸ್ ತೌಷಿಫ್ ಅಹ್ಮದ್‌ (38) ಇರ್ಫಾ ತೌಷಿಫ್‌ ಅಹಮದ್‌ (15) ಅಬೀದ್‌ ತೌಷಿಫ್‌ ಅಹಮದ್‌ (12) ಮೃತಪಟ್ಟಿದ್ದಾರೆ.

ಹುಬ್ಬಳ್ಳಿ ಮೂಲದ ಒಂದೇ ಕುಟುಂಬದ 8 ಮಂದಿ ತಾಲೂಕಿನ ಬಿರಂಪಾಲಿ ಗ್ರಾಮದ ಅಕೋಡಾದ ಕಾಳಿ ನದಿ ಹಿನ್ನೀರಿನಲ್ಲಿ ಪ್ರವಾಸಕ್ಕೆ ಬಂದಿದ್ದರು. ಇಲ್ಲಿನ ಚಿಕ್ಕ ಜಲಪಾತದ ಬಳಿ ಸುಮಾರು 15 ಅಡಿಯಷ್ಟು ಆಳ ನೀರಿದೆ. ಮಧ್ಯಾಹ್ನ 1 ಗಂಟೆ ವೇಳೆಗೆ ಬಾಲಕಿಯೊಬ್ಬಳು ಆಯತಪ್ಪಿ ನೀರಿಗೆ ಜಾರಿ ಬಿದ್ದಿದ್ದಾಳೆ. ತಕ್ಷಣ ಮತ್ತಿಬ್ಬರು ಮಕ್ಕಳು ಆಕೆಯ ರಕ್ಷಣೆಗೆಂದು ಹೋಗಿದ್ದು ಅವರೂ ನೀರಿನಲ್ಲಿ ಮುಳುಗಿದ್ದಾರೆ. ಇದನ್ನು ಗಮನಿಸಿದ ತಂದೆ ಕೂಡಲೇ ಮಕ್ಕಳ ರಕ್ಷಣೆಗೆ ನದಿಗಿಳಿದಿದ್ದು, ಅವರ ಜತೆ ಇನ್ನೂ ಇಬ್ಬರು ನದಿಗಿಳಿದರು. ನೀರಿಗಿಳಿದ ಆರೂ ಮಂದಿ ಮೇಲಕ್ಕೆ ಬಾರದಾದಾಗ ಅಲ್ಲೇ ಇದ್ದ ಇಬ್ಬರು ಮಹಿಳೆಯರು ಕಂಗೆಟ್ಟು ಸಮೀಪದ ಗೌಳಿಗರಿಗೆ ಮಾಹಿತಿ ನೀಡಿದರು. ಅವರು ಜಂಗಲ್ ಲಾಡ್ಜ್‌ನವರಿಗೆ ಕರೆ ಮಾಡಿ ತಿಳಿಸಿದರು. ಜಂಗಲ್ ಲಾಡ್ಜ್‌ನವರ ರ‍್ಯಾಫ್ಟಿಂಗ್ ತಂಡ ಆಗಮಿಸಿ ಮೃತದೇಹಗಳನ್ನು ಪತ್ತೆ ಹಚ್ಚಿತು.

ಆಳ ತುಂಬಾ ಇತ್ತು: ಅಕೋಡಾ ಜಲಪಾತದ ಬಳಿ ಪ್ರವಾಸಿಗರು ಹೋಗುವುದು ಕಡಿಮೆ. ಈ ಹಿಂದೆ ಇಲ್ಲಿ ಇಂತಹ ದುರ್ಘಟನೆ ನಡೆದಿಲ್ಲ. ಹೆಚ್ಚು ಆಳ ಇರುವ ಕಾರಣ ಜಲಪಾತದ ಬಳಿ ಈಜಾಡಲು ಯಾರೂ ತೆರಳುವುದಿಲ್ಲ. ಆದರೆ ಈ ಬಗ್ಗೆ ಪ್ರವಾಸಿಗರಿಗೆ ಮಾಹಿತಿ ಇಲ್ಲದೆ ಯಡವಟ್ಟು ಸಂಭವಿಸಿದೆ. ದಾಂಡೇಲಿ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV

Recommended Stories

15 ವರ್ಷ ಮೇಲ್ಪಟ್ಟ ಸರ್ಕಾರಿ ವಾಹನ ಗುಜರಿಗೆ: ಆದೇಶ
ಹಾಸಿಗೆ, ದಿಂಬಿಗಾಗಿ ಮತ್ತೆ ಕೋರ್ಟಲ್ಲಿ ಅಂಗಲಾಚಿದ ಕೊಲೆ ಆರೋಪಿ ದರ್ಶನ್‌