ಕನ್ನಡಪ್ರಭ ವಾರ್ತೆ ಕೋಲಾರಕೋಲಾರ, ಚಿಕ್ಕಬಳ್ಳಾಪುರ ಸಹಕಾರ ಕೇಂದ್ರ ಬ್ಯಾಂಕಿಗೆ ಮೂವರು ಶಾಸಕರು ಸೇರಿದಂತೆ ಒಟ್ಟು ಆರು ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ ೧೨ ಸ್ಥಾನಗಳಿಗೆ ಭಾನುವಾರ ನಡೆಯಲಿರುವ ಚುನಾವಣೆಯಲ್ಲಿ ೨೯ ಮಂದಿ ಹಣಾಹಣಿ ನಡೆಸಲಿದ್ದಾರೆ.
ಶಿಡ್ಲಘಟ್ಟ ತಾಲೂಕಿನ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರಕ್ಕೆ ಶಿಡ್ಲಘಟ್ಟ ಕಸಬಾದ ಎ.ನಾಗರಾಜ್ ಮತ್ತು ಜೆಡಿಎಸ್ ಪಕ್ಷದ ದಿಬ್ಬೂರಹಳ್ಳಿ ಸೊಸೈಟಿಯ ಡಿ.ಎಚ್.ನಾಗರಾಜ್ ಅರ್ಜಿ ಸಲ್ಲಿಸಿದ್ದರು. ಆದರೆ ಜೆಡಿಎಸ್ ಮುಖಂಡರ ಕಡೆಯಿಂದಲೇ ಬಂದ ಸೂಚನೆ ಮೇಲೆ ಡಿ.ಎಚ್.ನಾಗರಾಜ್ ಕಣದಿಂದ ಹಿಂದೆ ಸರಿದರು. ಇದರಿಂದಾಗಿ ಕಳೆದ ಬಾರಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾಗಿದ್ದ ಎ.ನಾಗರಾಜ್ ಅವಿರೋಧ ಆಯ್ಕೆಯಾದರು.
ಬ್ಯಾಂಕಿನ ಒಟ್ಟು ೧೮ ಸ್ಥಾನಗಳಿಗೆ ೫೪ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ೧೯ ಜನ ಉಮೇದುವಾರಿಕೆ ವಾಪಸ್ ಪಡೆದಿದ್ದರಿಂದ ೬ ಮಂದಿ ಅವಿರೋಧವಾಗಿ ಆಯ್ಕೆಗೊಂಡರು. ಉಳಿದ ೧೨ ಕ್ಷೇತ್ರಗಳಿಗೆ ನಡೆಯಲಿರುವ ಚುನಾವಣೆಗೆ ೨೯ ಮಂದಿ ಅಂತಿಮ ಕಣದಲ್ಲಿ ಉಳಿದಿದ್ದಾರೆ.ಅವಿರೋಧ ಆಯ್ಕೆಯಾದವರು:ಕೆಜಿಎಫ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಶಾಸಕಿ ರೂಪಕಲಾ, ಬಾಗೇಪಲ್ಲಿ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ, ಮಾಲೂರು ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಡಿ.ಎನ್.ರಮೇಶ್, ಶಿಡ್ಲಘಟ್ಟ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಎ.ನಾಗರಾಜ್, ಮಂಚೇನಹಳ್ಳಿ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಜೆ.ವಿ.ಹನುಮೇಗೌಡ ಹಾಗೂ ಕೋಲಾರ ಚಿಕ್ಕಬಳ್ಳಾಪುರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಗಳ ಕ್ಷೇತ್ರದಿಂದ ಶಾಸಕ ಕೊತ್ತೂರು ಜಿ.ಮಂಜುನಾಥ್.
ಡಿಸಿಸಿ ಬ್ಯಾಂಕಿಗೆ ಶತಾಯಗತಾಯ ಶಾಸಕ ಕೊತ್ತೂರು ಮಂಜುನಾಥರನ್ನು ಎಂಟ್ರಿ ಮಾಡಿಸಿ ಅಧ್ಯಕ್ಷ ಸ್ಥಾನದಲ್ಲಿ ಪ್ರತಿಷ್ಠಾಪಿಸಬೇಕು ಎಂಬುದು ಅನಿಲ್ ಕುಮಾರ್ ಲೆಕ್ಕಾಚಾರ. ಈ ಮುಂದಾಲೋಚನೆಯಿಂದಲೇ ಮುಳಬಾಗಿಲು ಟಿಎಪಿಸಿಎಂಎಸ್ ಅಧ್ಯಕ್ಷ ಸ್ಥಾನದಲ್ಲಿ ಕೊತ್ತೂರನ್ನು ಹಿಂದೆಯೇ ಕೂರಿಸಲಾಗಿತ್ತು.
ನಾಮಪತ್ರ ಸಲ್ಲಿಕೆಯ ಕೊನೆಯ ಘಳಿಗೆಯಲ್ಲಿ ಜಿಲ್ಲಾ ಕುರುಬ ಸಂಘದ ಮಾಜಿ ಅಧ್ಯಕ್ಷ ತಂಬಿಹಳ್ಳಿ ಮುನಿಯಪ್ಪರನ್ನು ಕಣಕ್ಕಿಳಿಸಲು ಮಾಜಿ ಸಚಿವ ವರ್ತೂರು ಪ್ರಕಾಶ್ ಮುಂದಾಗಿದ್ದರು. ಆದರೆ ಸೂಚಕರು ಸಿಗದ ಕಾರಣ ಅವರ ನಾಮಪತ್ರ ಸಲ್ಲಿಕೆಯೇ ಆಗಲಿಲ್ಲ. ಹಾಗಾಗಿ ಕೊತ್ತೂರು ಮಂಜುನಾಥ್ ಮತ್ತು ಪ್ರವೀಣ್ ಕುಮಾರ್ ನಡುವೆ ಜಿದ್ದಾಜಿದ್ದಿ ಏರ್ಪಡಬಹುದು ಎಂಬ ನಿರೀಕ್ಷೆ ಎಲ್ಲರದ್ದೂ ಆಗಿತ್ತು.
ಗೋವಿಂದಗೌಡರನ್ನು ಮಣಿಸಬೇಕೆಂಬ ಸಮಾನ ಕಾರ್ಯ ತಂತ್ರದಲ್ಲಿ ಅನಿಲ್ ಕುಮಾರ್ ಮತ್ತು ಸಂಪಂಗಿ ಕೈಜೋಡಿಸಿದರು. ಅದಕ್ಕೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮತ್ತು ಶಾಸಕ ನಂಜೇಗೌಡ ಸಾಥ್ ನೀಡಿದ್ದರು. ಉದ್ದೇಶ ಸಾಧನೆಗೆ ಯಾವುದೇ ರೀತಿಯ ತಂತ್ರಕ್ಕೂ ಕೊತ್ತೂರು ಮಂಜುನಾಥ ಸನ್ನದ್ಧರಾಗಿದ್ದರು. ಇವೆಲ್ಲದರ ಪರಿಣಾಮ ಎಂಬಂತೆ ಗೋವಿಂದಗೌಡ ವಿರುದ್ಧ ಮುನಿಸಿಕೊಂಡು ಕತ್ತಿ ಮಸೆಯುತ್ತಿರುವ ಕೆಲವು ಬಿಜೆಪಿ ಮುಖಂಡರನ್ನು ಬಳಸಿಕೊಂಡು ಸಂಪಂಗಿ ಮತ್ತು ಅವರ ಪುತ್ರನ ಮನವೊಲಿಸಿ ಕಣದಿಂದ ವಾಪಸ್ ಆಗುವಂತೆ ಮಾಡಿ ಉದ್ದೇಶ ಸಾಧನೆ ಮಾಡಿಕೊಳ್ಳಲಾಯಿತು ಎಂದು ಸ್ವತಃ ಕಾಂಗ್ರೆಸ್ ಎ-ಟೀಂನ ಮೂಲಗಳೇ ಹೇಳಿಕೊಂಡಿವೆ.ಕಾಂಗ್ರೆಸ್ ಎ ಟೀಂ ಕಡೆಯಿಂದಲೇ ಬಹಿರಂಗಗೊಂಡಿರುವ ಈ ವಿದ್ಯಮಾನ ಕುರಿತು ಸ್ವತಹ ಸಂಪಂಗಿ ಅಥವಾ ಅವರ ಪುತ್ರ ಪ್ರವೀಣ್ ಕುಮಾರ್ ಅವರೇ ಸ್ಪಷ್ಟನೆ ನೀಡುವವರೆಗೆ ಚರ್ಚೆಗಳಂತೂ ಓತಪ್ರೋತವಾಗಿ ಮುಂದುವರಿಯುತ್ತದೆ.ತಮ್ಮ ತಂತ್ರಗಾರಿಕೆ ಯಶಸ್ವಿಯಾದ ಖುಷಿಯಲ್ಲಿ ಸ್ವತಹ ಕೊತ್ತೂರು ಮಂಜುನಾಥ್ ಶುಕ್ರವಾರ ಬೆಳಗ್ಗೆ ತಮ್ಮ ಅತಿಥಿಗೃಹದಲ್ಲಿ ವಾಸ್ತವ್ಯ ಹೂಡಿದ್ದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕಾಲಿಗೆ ನಮಸ್ಕರಿಸಿ "ಎಲ್ಲವೂ ಸುಸೂತ್ರವಾಯಿತು " ಎಂದು ಹೇಳಿದುದು ಗಮನಾರ್ಹವಾಗಿತ್ತು.
ಕೆ.ಜಿ.ಎಫ್ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಗಳಿಂದ ಶಾಸಕ ಕೊತ್ತೂರು ಮಂಜುನಾಥ್ ವಿರುದ್ಧ ಕೆ.ಜಿ.ಎಫ್.ಮಾಜಿ ಶಾಸಕ ವೈ.ಸಂಪಂಗಿ ಪುತ್ರ ಎಸ್.ಪ್ರವೀಣ್ ಕುಮಾರ್ ಸ್ಪರ್ಧೆಗೆ ನಾಮಪತ್ರ ಸಲ್ಲಿಸಿದ್ದ. ಶುಕ್ರವಾರ ಎಸ್.ಪ್ರವೀಣ್‌ಕುಮಾರ್ ನಾಮಪತ್ರ ವಾಪಸ್ ಪಡೆಯುವ ಮೂಲಕ ಕೊತ್ತೂರು ಮಂಜುನಾಥ್ ಅವಿರೋಧವಾಗಿ ಆಯ್ಕೆ ಆಗಲು ಸಹಕಾರಿಯಾಗಿದೆ. ಪ್ರವೀಣ್ ಕುಮಾರ್ ನಾಮಪತ್ರ ವಾಪಸ್ ಪಡೆಯದಂತೆ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಕಡೆಯಿಂದ ಒತ್ತಡವು ಬಂದಿತ್ತು ಎನ್ನಲಾಗಿದೆ. ಆದರೆ ಪ್ರವೀಣ್‌ಕುಮಾರ್ ಬಿಜೆಪಿ ಮುಖಂಡರ ಕೈಗೆ ಸಿಗದೆ ನಾಮಪತ್ರ ವಾಪಸ್ ಪಡೆದಿದ್ದಾರೆ. ಕಾಂಗ್ರೆಸ್‌ನ ಒಂದು ಗುಂಪು ಮತ್ತು ಜೆಡಿಎಸ್ ಮತ್ತು ಬಿಜೆಪಿಯವರು ಕೊತ್ತೂರು ಮಂಜುನಾಥ್ ಅವಿರೋಧವಾಗಿ ಆಯ್ಕೆ ಆಗಲು ಬಿಡಬಾರದು ಹಾಗೂ ಚುನಾವಣೆ ನಡೆದರೆ ಕೊತ್ತೂರು ಮಂಜುನಾಥ್‌ರನ್ನು ಸೋಲಿಸಬೇಕೆಂದು ಸಿದ್ಧತೆಯಲ್ಲಿದ್ದರು. ನಾಮಪತ್ರ ವಾಪಸ್ ಪಡೆದು ಅವಿರೋಧ ಆಯ್ಕೆ ಘೋಷಣೆ ಆಗುತ್ತಿದ್ದಂತೆ ಬಿಜೆಪಿ ಜೆಡಿಎಸ್ ಮೈತ್ರಿಗಿಂತ ಕಾಂಗ್ರೆಸ್‌ನ ಒಂದು ಗುಂಪಿಗೆ ಮರ್ಮಾಪಘಾತ ಉಂಟಾಗಿದೆ.
ಬ್ಯಾಲಹಳ್ಳಿಗೆ ಬಾಳಿಗನಹಳ್ಳಿ ಅಡ್ಡಗಾಲು ಶ್ರೀನಿವಾಸಗೌಡ ಸಲಹೆಗೂ ಸಿಗದ ಕಿಮ್ಮತ್ತು:೧೫ ವರ್ಷಗಳ ಹಿಂದೆ ನಷ್ಟದ ಪ್ರಪಾತಕ್ಕೆ ಬಿದ್ದು ಬೀಗ ಹಾಕಿಕೊಳ್ಳುವ ದುಸ್ಥಿತಿ ತಲುಪಿದ್ದ ಬ್ಯಾಂಕ್ ಅನ್ನು ಕಳೆದ ಹತ್ತು ವರ್ಷಗಳಿಂದ ಆಹರ್ನಿಶಿ ದುಡಿದು ನಂಬರ್ ಒನ್ ಸ್ಥಾನಕ್ಕೆ ತಂದಿದ್ದ ಮಾಜಿ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದ ಗೌಡರಿಗೆ ಕಾಂಗ್ರೆಸ್ ಎ-ಟೀಂ ಬಾರಿ ತುರುಸಿನ ಸ್ಪರ್ಧೆ ಒಡ್ಡುವ ಪ್ರಯತ್ನ ಮಾಡಿದೆ.ಒಂದು ಕಾಲಕ್ಕೆ ಬ್ಯಾಲಹಳ್ಳಿ ಜೊತೆ ಅವಿನಾಭಾವ ಸಂಬಂಧ ಹೊಂದಿದ್ದು ಇದೀಗ ’ನಾನೊಂದು ತೀರ ನೀನೊಂದು ತೀರ’ ಎಂಬಂತಾಗಿರುವ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಎಂ.ಎಲ್.ಸಿಗಳಾದ ಅನಿಲ್ ಕುಮಾರ್ ಮತ್ತು ನಸೀರ್ ಅಹ್ಮದ್ ಹಾಗೂ ಮಾಲೂರು ಶಾಸಕ ಕೆ.ವೈ. ನಂಜೇಗೌಡ ಇದೀಗ ಬ್ಯಾಲಹಳ್ಳಿ ಬ್ಯಾಂಕ್ ಮೆಟ್ಟಿಲು ಏರದಂತೆ ತಡೆಯುವ ಪ್ರಯತ್ನದಲ್ಲಿದ್ದಾರೆ.ಎರಡು ಜಿಲ್ಲೆಯಿಂದ ೪೮ ಮತಗಳನ್ನು ಹೊಂದಿರುವ ಇತರೆ ಸಹಕಾರ ಸಂಘಗಳ ಕ್ಷೇತ್ರಕ್ಕೆ ಬ್ಯಾಲಹಳ್ಳಿ ಅರ್ಜಿ ಸಲ್ಲಿಸುತ್ತಿದ್ದಂತೆ ಅವರ ವಿರುದ್ಧ ಪ್ರಬಲ ಪ್ರತಿಸ್ಪರ್ಧಿ ಕೂಡಲು ಮಾಲೂರು ತಾಲೂಕು ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಬಾಳಿಗನಹಳ್ಳಿ ಶ್ರೀನಿವಾಸ್‌ರನ್ನು ಕಣಕ್ಕೆ ಇಳಿಸಿದೆ. ಶ್ರೀನಿವಾಸ್ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ಎಂದು ಹೇಳುವ ಮೂಲಕ ಬ್ಯಾಲಹಳ್ಳಿ ವಿರುದ್ಧ ಕಾಂಗ್ರೆಸ್ಸಿಗರ ಎ-ಟೀಂ ಕಾರ್ಯತಂತ್ರ ರೂಪಿಸಿದೆ.
ಈ ನಡುವೆ ಜಿಲ್ಲೆಯ ಹಿರಿಯ ಸಹಕಾರಿ ಎನಿಸಿರುವ ಮಾಜಿ ಸಚಿವ ಕೆ ಶ್ರೀನಿವಾಸಗೌಡ ಇತರೆ ಸಹಕಾರ ಸಂಘಗಳು ಮತ್ತು ಎರಡು ಜಿಲ್ಲೆಯ ಹಾಲು ಉತ್ಪಾದಕರ ಸಹಕಾರ ಸಂಘಗಳ ಕ್ಷೇತ್ರದಿಂದ ಸ್ಪರ್ಧಿಸಿರುವ ತಮ್ಮ ಸಹೋದರ ಕುಡುವನಹಳ್ಳಿ ಶಿವಾನಂದಗೆ ತೊಂದರೆ ಕೊಡದಂತೆ ಕಾಂಗ್ರೆಸ್ ಮುಖಂಡರಿಗೆ ಮಾಡಿಕೊಂಡ ಮನವಿಯು ಫಲಕಾರಿಯಾಗಿಲ್ಲ. ಬ್ಯಾಂಕ್‌ನ್ನು ಸುಸ್ತಿಯಿಂದ ಸುಸ್ಥಿತಿಗೆ ತರಲು ಕಾರಣರಾದ ಗೋವಿಂದ ಗೌಡ ಮತ್ತು ತಮ್ಮ ಸಹೋದರ ಶಿವಾನಂದ ದಾರಿಗೆ ಅಡ್ಡಗಾಲು ಹಾಕದಂತೆ ಶ್ರೀನಿವಾಸಗೌಡ ಹಲವರಿಗೆ ಸಲಹೆ ಮಾಡಿದರಾದರೂ ಕಾಂಗ್ರೆಸ್ ಮುಖಂಡರು ಒಬ್ಬರ ಮೇಲೊಬ್ಬರು ಜವಾಬ್ದಾರಿ ಹೊರೆಸಿಕೊಳ್ಳುವ ಮೂಲಕ ಎರಡು ಕ್ಷೇತ್ರಗಳಲ್ಲಿ ಚುನಾವಣೆ ಅನಿವಾರ್ಯಗೊಳಿಸಿದರು.
ಅಂತಿಮ ಕಣದಲ್ಲಿ ಉಳಿದಿರುವ ೧೨ ಕ್ಷೇತ್ರದ ೨೯ ಅಭ್ಯರ್ಥಿಗಳು:ಕೋಲಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕ್ಷೇತ್ರದಿಂದ ವಕ್ಕಲೇರಿ ಎಂ.ಆನಂದ್‌ಕುಮಾರ್ ಮತ್ತು ಖಾಜಿಕಲ್ಲಹಳ್ಳಿ ಕೆ.ಎಂ.ಮುನಿರಾಜು. ಒಟ್ಟು ಮತಗಳು-೧೨. ಬಂಗಾರಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಕ್ಷೇತ್ರದಿಂದ ಬೂದಿಕೋಟೆ ಮಾರ್ಕಂಡೇಗೌಡ ಮತ್ತು ಕಾಮಸಮುದ್ರ ಕೆ.ಎಸ್.ರಂಗನಾಥಚಾರಿ ಒಟ್ಟು ಮತಗಳು-೧೩. ಮುಳಬಾಗಿಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಕ್ಷೇತ್ರದಿಂದ ಆರ್.ಅಮರನಾರಾಯಣಪ್ಪ, ಜೆಡಿಎಸ್ ನ ವಿ.ರಘುಪತಿರೆಡ್ಡಿ ಮತ್ತು ಕಾಂಗ್ರೆಸ್ಸಿನ ಎಂ.ಸಿ.ಸರ್ವಜ್ಞಗೌಡ ಒಟ್ಟು ಮತಗಳು-೧೯.ಶ್ರೀನಿವಾಸಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಕ್ಷೇತ್ರದಿಂದ ಕಾಂಗ್ರೆಸಿನ ಎ.ಸಿ.ನಾಗರತ್ನಮ್ಮ, ಬಿ.ಎನ್.ಶಶಿಕುಮಾರ್ ಮತ್ತು ಮಣಿಗಾನಹಳ್ಳಿ ಬಿ.ವಿ.ಸುರೇಶ್‌ರೆಡ್ಡಿ. ಒಟ್ಟು ಮತಗಳು-೫. ಚಿಂತಾಮಣಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಕ್ಷೇತ್ರದಿಂದ ಜಿ.ಚಂದ್ರಾರೆಡ್ಡಿ, ಎನ್.ನಾಗಿರೆಡ್ಡಿ. ಒಟ್ಟು ಮತಗಳು-೧೫. ಚಿಕ್ಕಬಳ್ಳಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಕ್ಷೇತ್ರದಿಂದ ಎ.ವಿ.ಅಕ್ಕಲರೆಡ್ಡಿ, ಎಂ.ಎನ್.ಕೃಷ್ಣಮೂರ್ತಿ, ಪಿ.ಎನ್.ಮುನೇಗೌಡ, ಎನ್.ಮಂಜುನಾಥರೆಡ್ಡಿ. ಒಟ್ಟು ಮತಗಳು-೧೬. ಗುಡಿಬಂಡೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಕ್ಷೇತ್ರದಿಂದ ಕೆ.ಜೆ.ಆನಂದರೆಡ್ಡಿ ಮತ್ತು ಹೆಚ್.ಎನ್.ಮಂಜುನಾಥರೆಡ್ಡಿ. ಒಟ್ಟು ಮತಗಳು-೮.
ಗೌರಿಬಿದನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಕ್ಷೇತ್ರದಿಂದ ಕೆ.ಎನ್.ವೆಂಕಟರಾಮರೆಡ್ಡಿ ಮತ್ತು ಹನುಮಂತರೆಡ್ಡಿ. ಒಟ್ಟು ಮತಗಳು-೨೬. ಚೇಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಕ್ಷೇತ್ರದಿಂದ ಕೆ.ವಿ.ಭಾಸ್ಕರರೆಡ್ಡಿ, ಪಿ.ಎನ್.ಮಂಜುನಾಥರೆಡ್ಡಿ ಮತ್ತು ಬಿ.ಶೇಖರ್. ಮುತ್ತು ಮತಗಳು-೯. ಕೋಲಾರ ಜಿಲ್ಲೆ ಹಾಲು ಒಕ್ಕೂಟದ ಸಹಕಾರ ಸಂಘಗಳಿಂದ ಟೇಕಲ್ ಹೆಚ್.ವಿ.ವಿನೋದ್‌ಕುಮಾರ್ ಮತ್ತು ಕುಡುವನಹಳ್ಳಿ ಕೆ.ಶಿವಾನಂದ. ಒಟ್ಟು ಮತಗಳು-೧೨೬. ಚಿಕ್ಕಬಳ್ಳಾಪುರ ಜಿಲ್ಲೆ ಹಾಲು ಒಕ್ಕೂಟದ ಸಹಕಾರ ಸಂಘಗಳಿಂದ ಹೆಚ್.ಎಸ್.ಮೋಹನ್‌ರೆಡ್ಡಿ ಮತ್ತು ಎಂ.ರಾಮಯ್ಯ. ಒಟ್ಟು ಮತಗಳು-೧೪೭. ಎರಡು ಜಿಲ್ಲೆ ಇತರೆ ಸಹಕಾರ ಸಂಘಗಳಿಂದ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಮತ್ತು ಬಿ.ಆರ್.ಶ್ರೀನಿವಾಸ್. ಒಟ್ಟು ಮತಗಳು-೪೮.