ಚಾಮರಾಜನಗರದ ಲೋಕ್ ಅದಾಲತ್‌ನಲ್ಲಿ 61,962 ಪ್ರಕರಣಗಳು ಇತ್ಯರ್ಥ

KannadaprabhaNewsNetwork | Published : Dec 19, 2024 12:30 AM

ಸಾರಾಂಶ

ಸರ್ವರಿಗೂ ನ್ಯಾಯ ಎಂಬ ಪರಿಕಲ್ಪನೆಯಡಿಯಲ್ಲಿ ಜನ ಸಾಮಾನ್ಯರ ಅನುಕೂಲಕ್ಕಾಗಿ ತ್ವರಿತವಾಗಿ ಪ್ರಕರಣಗಳು ಇತ್ಯರ್ಥವಾಗಬೇಕೆಂಬ ಉದ್ದೇಶದಿಂದ ಕಳೆದ ಡಿ.14ರಂದು ಚಾಮರಾಜನಗರ ಜಿಲ್ಲಾದ್ಯಂತ ಹಮ್ಮಿಕೊಳ್ಳಲಾಗಿದ್ದ ಮೆಗಾ ಲೋಕ್ ಅದಾಲತ್‌ನಲ್ಲಿ ಒಟ್ಟು 61,962 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಸರ್ವರಿಗೂ ನ್ಯಾಯ ಎಂಬ ಪರಿಕಲ್ಪನೆಯಡಿಯಲ್ಲಿ ಜನ ಸಾಮಾನ್ಯರ ಅನುಕೂಲಕ್ಕಾಗಿ ತ್ವರಿತವಾಗಿ ಪ್ರಕರಣಗಳು ಇತ್ಯರ್ಥವಾಗಬೇಕೆಂಬ ಉದ್ದೇಶದಿಂದ ಕಳೆದ ಡಿ.14ರಂದು ಜಿಲ್ಲಾದ್ಯಂತ ಹಮ್ಮಿಕೊಳ್ಳಲಾಗಿದ್ದ ಮೆಗಾ ಲೋಕ್ ಅದಾಲತ್‌ನಲ್ಲಿ ಒಟ್ಟು 61,962 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ಜಿಲ್ಲಾ ನ್ಯಾಯಾಲಯದ ಆವರಣದ ವ್ಯಾಜ್ಯ ಪೂರ್ವ ಪರಿಹಾರ ಕೇಂದ್ರದಲ್ಲಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಬಿ.ಎಸ್.ಭಾರತಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಷ್ಟ್ರೀಯ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಜಿಲ್ಲೆಯ ನಾಲ್ಕು ತಾಲೂಕಿನ ನ್ಯಾಯಾಲಯಗಳಲ್ಲಿ ಮೆಗಾಲೋಕ್ ಅದಾಲತ್ ಅನ್ನು ನಡೆಸಲಾಗಿದೆ. ಎಲ್ಲ ರೀತಿಯ ಸಿವಿಲ್ ಹಾಗೂ ರಾಜಿಯಾಗಬಲ್ಲ ಕ್ರಿಮಿನಲ್ ಪ್ರಕರಣಗಳು ಮತ್ತು ಇನ್ನಿತರ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಗೊಳಿಸಲು ಲೋಕ್ ಅದಾಲತ್ ಏರ್ಪಡಿಸಲಾಗಿತ್ತು ಎಂದರು.

ಒಟ್ಟು 1,229 ನ್ಯಾಯಾಲಯದ ಪ್ರಕರಣಗಳು, 60,463 ವ್ಯಾಜ್ಯ ಪೂರ್ವ ಪ್ರಕರಣಗಳು ಸೇರಿದಂತೆ ಒಟ್ಟಾರೆ 61,692 ಪ್ರಕರಣಗಳು ಶನಿವಾರ ನಡೆದ ಲೋಕ್ ಅದಾಲತ್ ನಲ್ಲಿ ಬಗೆಹರಿದಿವೆ. ಒಟ್ಟು 11,89,33,373 ರು.ಗಳಷ್ಟು ಮೌಲ್ಯದ ಪ್ರಕರಣಗಳು ಇತ್ಯರ್ಥಗೊಂಡಿವೆ ಎಂದು ತಿಳಿಸಿದರು. ಚಾಮರಾಜನಗರ ತಾಲೂಕಿನಲ್ಲಿ 346 ನ್ಯಾಯಾಲಯದ ಪ್ರಕರಣಗಳು, 40,342 ವ್ಯಾಜ್ಯ ಪೂರ್ವ ಪ್ರಕರಣಗಳು ಸೇರಿ 40,688 ಪ್ರಕರಣಗಳು, ಯಳಂದೂರು ತಾಲೂಕಿನಲ್ಲಿ 187 ನ್ಯಾಯಾಲಯದ ಪ್ರಕರಣಗಳು, 3,677 ವ್ಯಾಜ್ಯ ಪೂರ್ವ ಪ್ರಕರಣಗಳು ಸೇರಿ 3,864 ಪ್ರಕರಣಗಳು, ಕೊಳ್ಳೇಗಾಲ ತಾಲೂಕಿನಲ್ಲಿ 521 ನ್ಯಾಯಾಲಯದ ಪ್ರಕರಣಗಳು, 10,585 ವ್ಯಾಜ್ಯ ಪೂರ್ವ ಪ್ರಕರಣಗಳು ಸೇರಿ 10,106 ಪ್ರಕರಣಗಳು, ಗುಂಡ್ಲುಪೇಟೆ ತಾಲೂಕಿನಲ್ಲಿ 175 ನ್ಯಾಯಾಲಯದ ಪ್ರಕರಣಗಳು, 5,859 ವ್ಯಾಜ್ಯ ಪೂರ್ವ ಪ್ರಕರಣಗಳು ಸೇರಿ 60,034 ಪ್ರಕರಣಗಳು ಬಗೆಹರಿದಿವೆ ಎಂದರು.

ಈ ವರ್ಷದಲ್ಲಿ ಮಾರ್ಚ್ 13, ಜುಲೈ 13, ಸೆಪ್ಟೆಂಬರ್ 14 ಹಾಗೂ ಡಿಸೆಂಬರ್ 14ರಂದು ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ನಡೆದ ಲೋಕ್ ಅದಾಲತ್‌ಗಳಲ್ಲಿ ರಾಜೀ ಯೋಗ್ಯ ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳ ಪಕ್ಷಕಾರರು ಲೋಕ್ ಅದಾಲತ್ ಬಗ್ಗೆ ಅರಿವು ಪಡೆದುಕೊಂಡು ನ್ಯಾಯಾಧೀಶರು, ವಕೀಲರು ಮತ್ತು ವಕೀಲ ಸಂಧಾನಕಾರರ ಸಲಹೆ ಪಡೆದು 10 ರಿಂದ 15 ವರ್ಷಗಳಿಂದ ಬಾಕಿ ಇದ್ದಂತಹ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಂಡಿದ್ದಾರೆ ಎಂದರು.

85 ವರ್ಷದ ಮಹಾದೇವಮ್ಮ ಎಂಬ ವಯೋವೃದ್ದೆಯೋರ್ವರು ಆಸ್ತಿ ವಿಭಾಗಕ್ಕೆ ಸಂಬಂಧಿಸಿದಂತೆ ಎರಡು ವರ್ಷಗಳ ಹಿಂದೆಯಷ್ಟೇ ಹೂಡಲಾಗಿದ್ದ ಮೂಲ ದಾವೆ ಪ್ರಕರಣ ಒಮ್ಮತದಿಂದ ಲೋಕ್ ಅದಾಲತ್‌ನಲ್ಲಿ ತೀರ್ಮಾನವಾಗಿದೆ. ಇದು ಈ ಬಾರಿಯ ಲೋಕ್ ಅದಾಲತ್‌ನ ವಿಶೇಷತೆಗಳಲ್ಲಿ ಒಂದಾಗಿದೆ ಎಂದು ತಿಳಿಸಿದರು.

ಸಿವಿಲ್ ನ್ಯಾಯಾಧೀಶ ಈಶ್ವರ ಮಾತನಾಡಿ, ನ್ಯಾಯಾಲಯದಲ್ಲಿ ದಾಖಲಾದ ಪ್ರಕರಣಗಳಿಗೆ ಶೀಘ್ರಗತಿಯಲ್ಲಿ ನ್ಯಾಯ ಒದಗಿಸಿಕೊಡುವುದು, ಸಮಯ, ಕೋರ್ಟ್ ಫೀ ಉಳಿತಾಯವಾಗುವಂತೆ ಮಾಡುವುದು ಲೋಕ್ ಅದಾಲತ್‌ನ ಉದ್ದೇಶವಾಗಿದೆ. ಲೋಕ್ ಅದಾಲತ್ ಯಶಸ್ಸಿಗೆ ನ್ಯಾಯಾಧೀಶರು, ವಕೀಲರು, ನ್ಯಾಯಾಲಯದ ಸಿಬ್ಬಂದಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ, ಕಾರ್ಮಿಕ, ಅಬಕಾರಿ, ಕಂದಾಯ ಇಲಾಖೆ, ಬ್ಯಾಂಕುಗಳು, ಮಾಧ್ಯಮ ಪ್ರತಿನಿಧಿಗಳು ನೀಡಿದ ಸಹಕಾರ ಕಾರಣವಾಗಿದೆ ಎಂದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಸ್.ನಂಜಯ್ಯ ಮಾತನಾಡಿ, ಲೋಕ್ ಅದಾಲತ್‌ನಲ್ಲಿ ರಾಜೀ ಸಂಧಾನದ ಮೂಲಕ ವ್ಯಾಜ್ಯ ಬಗೆಹರಿಸಲು ವಕೀಲರು ಶ್ರಮವಹಿಸಿದ್ದಾರೆ. ಲೋಕ್ ಅದಾಲತ್‌ನಲ್ಲಿ ಪ್ರಕರಣಗಳು ಇತ್ಯರ್ಥಗೊಳ್ಳುವುದರಿಂದ ಕಕ್ಷಿದಾರರಲ್ಲಿ ಬಾಂಧವ್ಯ ಉಂಟಾಗಿ ಪ್ರೀತಿ, ವಿಶ್ವಾಸ, ನಂಬಿಕೆ ಉಳಿಯುತ್ತದೆ. ದ್ವೇಷ ಭಾವನೆ ಹೋಗುತ್ತದೆ ಎಂದರು. ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ರಂಗಸ್ವಾಮಿ, ಜಂಟಿ ಕಾರ್ಯದರ್ಶಿ ಮೋಹನ್ ಜಗದೀಶ್ ಇದ್ದರು.

ಅಂಬೇಡ್ಕರ್‌, ಗಾಂಧಿಜೀ ಭಾವಚಿತ್ರ

ದುರ್ಬಳಕೆಯಾದ್ರೆ ಎಫ್‌ಐಆರ್ ದಾಖಲಿಸಿ

ಚಾಮರಾಜನಗರ: ಸಂವಿಧಾನ ಶಿಲ್ಪಿ ಡಾ.ಬಿ.ಆರ್‌ ಅಂಬೇಡ್ಕರ್‌ ಹಾಗೂ ಮಹಾತ್ಮ ಗಾಂಧಿ ಭಾವಚಿತ್ರವನ್ನು ಅನಾವಶ್ಯಕವಾಗಿ ಸ್ವಂತಕ್ಕೆ ದುರ್ಬಳಕ್ಕೆ ಮಾಡಿಕೊಂಡರೇ ಪೊಲೀಸರು ಎಫ್‌ಐಆರ್‌ ದಾಖಲಿಸಲು ಮುಂದಾಗಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಬಿ.ಎಸ್. ಭಾರತಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಯಕ್ತಿಕ ಸಮಸ್ಯೆಗೆ ಡಾ.ಅಂಬೇಡ್ಕರ್‌ ಹಾಗೂ ಮಹಾತ್ಮ ಗಾಂಧಿ ಅವರ ಭಾವಚಿತ್ರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಸರಿಯಲ್ಲ, ಡಾ.ಅಂಬೇಡ್ಕರ್‌ ಹಾಗೂ ಗಾಂಧಿಜೀ ಭಾವಚಿತ್ರವನ್ನು ಪ್ರತಿಭಟನೆಗೆ ಬಳಸಿಕೊಂಡಾಗ ಭಾವಚಿತ್ರಕ್ಕೆ ಹಾನಿಯಾಗುತ್ತಿರುತ್ತದೆ ಇದರಿಂದ ಅವಮಾನವಾಗುತ್ತದೆ.ಈ ರೀತಿ ಮಹನೀಯರ ಭಾವಚಿತ್ರವನ್ನು ದುರ್ಬಳಕೆ ಮಾಡಿ ಅಗೌರವ ತೋರುವುದು ತಪ್ಪು ಎಂದರು. ಈ ವಿಚಾರವನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಚ್ಚ ನ್ಯಾಯಾಲಯಕ್ಕೆ ಪತ್ರಬರೆಯುತ್ತಿದ್ದೇವೆ ಎಂದರು.

Share this article