ಮಂಗಳೂರು: ಎಸ್.ಕೆ.ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ.ನ ನವೀಕೃತ ವಿಶ್ವಸೌಧ ಕಟ್ಟಡ ಉದ್ಘಾಟನೆ ಮತ್ತು ವಜ್ರಮಹೋತ್ಸವದ ಸಮಾರೋಪ ಸಮಾರಂಭ ಭಾನುವಾರ ಕೊಟ್ಟಾರಚೌಕಿಯಲ್ಲಿರುವ ಸೊಸೈಟಿಯ ಆಡಳಿತ ಕಚೇರಿ ಬಳಿ ನೆರವೇರಿತು.ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಜಗದ್ಗುರು ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ ಆಶೀರ್ವಚನದಲ್ಲಿ, 1963 ರಲ್ಲಿ ಸರ್ಕಾರದಿಂದ ಚಿನ್ನ ನಿಯಂತ್ರಣ ಕಾಯಿದೆ ಜಾರಿಯಾದ ಸಂದರ್ಭದಲ್ಲಿ ಈ ವೃತ್ತಿ ಅವಲಂಬಿಸಿ ಬದುಕುತ್ತಿದ್ದವರು. ಅವರು ಅತಂತ್ರರಾದಾಗ ಪಾಲ್ಕೆ ಬಾಬುರಾಯ ಆಚಾರ್ಯ ಅವರು 1964ರಲ್ಲಿ ಈ ಸೊಸೈಟಿ ಆರಂಭಿಸಿ ಸಮಾಜದ ಜನರಿಗೆ ಆರ್ಥಿಕವಾಗಿ ಬಲ ನೀಡಿದರು. ಅವರಿಗೆ ದುಡಿದು ಬದುಕಲು ಮಾರ್ಗ ತೋರಿಸಿಕೊಟ್ಟರು. ಇಂದು ಸೊಸೈಟಿ ಮಾದರಿಯಾಗಿ ಬೆಳದು ನಿಂತಿದೆ. ಉತ್ತಮ ವ್ಯವಹಾರದ ಜತೆಗೆ ಸಮಾಜಮುಖಿ ಕಾರ್ಯಗಳಿಂದಾಗಿ ಮಾದರಿಯಾಗಿದೆ. 18 ಶಾಖೆಗಳು 180 ಆಗಲಿ ಎಂದು ಹೇಳಿದರು.
ಸಂಸದ ಕ್ಯಾ. ಬ್ರಿಜೇಶ್ ಚೌಟ ಮಾತನಾಡಿ, ಸಹಕಾರ ಕರಾವಳಿಯ ಸಹಜ ಗುಣ. ಇಲ್ಲಿ ಹಲವು ಸಹಕಾರಿ ಸಂಸ್ಥೆಗಳು ಮಾದರಿಯಾಗಿದ್ದು ಇದರಲ್ಲಿ ಎಸ್.ಕೆ.ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಕೂಡ ಒಂದು ಎಂದು ಹೇಳಿದರು.
ಪಾಲ್ಕೆ ಬಾಬುರಾಯ ಆಚಾರ್ಯ ಅವರ ಪುತ್ಥಳಿ ಅನಾವುಣಗೊಳಿಸಿದ ಅಯೋಧ್ಯ ಶ್ರೀ ರಾಮಲಲ್ಲಾ ವಿಗ್ರಹದ ನಿರ್ಮಾತೃ ಶಿಲ್ಪಿ ಡಾ. ಅರುಣ್ ಯೋಗಿರಾಜ್ ಮಾತನಾಡಿ, ಬ್ಯಾಂಕ್ ಗಳಿಗಿಂತ ಸಹಕಾರಿ ಸಂಸ್ಥೆಗಳು ಜನರಿಗೆ ಉತ್ತಮವಾಗಿ ಸ್ಪಂದಿಸುತ್ತಿದೆ. ನನ್ನ ಮೊದಲ ಕೆತ್ತನೆಗೆ ಮಾರ್ಬಲ್ ಖರೀದಿಸಲು ಸಹಕಾರಿ ಸಂಸ್ಥೆಯೇ ನೆರವಾಗಿತ್ತು ಎಂದು ಹೇಳಿದರು.ಶಾಸಕರಾದ ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ ಶುಭ ಹಾರೈಸಿದರು. ಸೊಸೈಟಿಯ ಅಧ್ಯಕ್ಷ ಪಿ.ಉಪೇಂದ್ರ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಕೆನರಾ ಜ್ಯುವೆಲ್ಲರ್ಸ್‌ನ ಧನಂಜಯ ಪಾಲ್ಕೆ, ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆಡಳಿತಾಧಿಕಾರಿ ಕೆ. ಉಮೇಶ್ ಆಚಾರ್ಯ, ದ.ಕ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಪಾಲಿಕೆ ಮಾಜಿ ಸದಸ್ಯ ಕಿರಣ್ ಕುಮಾರ್ ಕೋಡಿಕಲ್, ಆಡಳಿತ ಮಂಡಳಿಯ ನಿರ್ದೇಶಕರು ಇದ್ದರು.ಪ್ರಧಾನ ವ್ಯವಸ್ಥಾಪಕ ಯಜ್ಞೇಶ್ವರ ಸ್ವಾಗತಿಸಿದರು. ಎನ್.ಆರ್. ದಾಮೋದರ ಆಚಾರ್ಯ, ವಾರುಣಿ ನಾಗರಾಜ್ ಕಾರ್ಯಕ್ರಮ ನಿರ್ವಹಿಸಿದರು. ಉಪಾಧ್ಯಕ್ಷ ಎ.ಆನಂದ ಆಚಾರ್ಯ ವಂದಿಸಿದರು. ವಿವಿಧ ಕ್ಷೇತ್ರಗಳ ಸಾಧಕರಿಗೆ ಸಮ್ಮಾನ, ಸಹಾಯಧನ ವಿತರಣೆ ನಡೆಯಿತು.