ನೂತನ ಏಳು ವಿವಿಗಳಲ್ಲಿ ಕೌಶಲ್ಯಾಧಾರಿತ ಕೋರ್ಸ್‌ ಆರಂಭ

KannadaprabhaNewsNetwork | Published : Oct 21, 2023 12:30 AM

ಸಾರಾಂಶ

ರಾಜ್ಯದ ಏಳು ಹೊಸ ವಿಶ್ವವಿದ್ಯಾಲಯಗಳಲ್ಲಿ ಸಾಂಪ್ರದಾಯಿಕ ಪದವಿ, ಸ್ನಾತಕೋತ್ತರ ಪದವಿ ಕೋರ್ಸ್‌ಗಳ ಬದಲಾಗಿ ಜ್ಞಾನ, ಆಧುನಿಕ ತಂತ್ರಜ್ಞಾನ, ಉದ್ಯೋಗ ಕೇಂದ್ರೀತ ಕೌಶಲ್ಯಾಧಾರಿತ ಮಾನವೀಯ ಮೌಲ್ಯಗಳ ಪಠ್ಯಕ್ರಮ ಅಳವಡಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಸುರೇಶ ಜಂಗಮಶೆಟ್ಟಿ ತಿಳಿಸಿದರು.

ಹೊಸ ವಿವಿಗಳ ಕುಲಪತಿಗಳಿಂದ ಹೇಳಿಕೆ

ಕನ್ನಡಪ್ರಭ ವಾರ್ತೆ ಹಾವೇರಿ

ರಾಜ್ಯದ ಏಳು ಹೊಸ ವಿಶ್ವವಿದ್ಯಾಲಯಗಳಲ್ಲಿ ಸಾಂಪ್ರದಾಯಿಕ ಪದವಿ, ಸ್ನಾತಕೋತ್ತರ ಪದವಿ ಕೋರ್ಸ್‌ಗಳ ಬದಲಾಗಿ ಜ್ಞಾನ, ಆಧುನಿಕ ತಂತ್ರಜ್ಞಾನ, ಉದ್ಯೋಗ ಕೇಂದ್ರೀತ ಕೌಶಲ್ಯಾಧಾರಿತ ಮಾನವೀಯ ಮೌಲ್ಯಗಳ ಪಠ್ಯಕ್ರಮ ಅಳವಡಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಸುರೇಶ ಜಂಗಮಶೆಟ್ಟಿ ತಿಳಿಸಿದರು.

ಕೆರೆಮತ್ತಿಹಳ್ಳಿಯಲ್ಲಿರುವ ಹಾವೇರಿ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಶುಕ್ರವಾರ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಹಾವೇರಿ, ಬಾಗಲಕೋಟೆ, ಹಾಸನ, ಕೊಡಗು, ಕೊಪ್ಪಳ, ಬೀದರ, ಚಾಮರಾಜನಗರ ವಿಶ್ವವಿದ್ಯಾಲಯದ ಕುಲಪತಿಗಳು ಹಾವೇರಿಯಲ್ಲಿ ಸಮಾವೇಶಗೊಂಡು ಭವಿಷ್ಯದ ವಿಶ್ವವಿದ್ಯಾಲಯಗಳ ಬೆಳವಣಿಗೆ, ಆರ್ಥಿಕ ಸ್ವಾವಲಂಬನೆ, ನೂತನ ಪಠ್ಯಕ್ರಮ ಅಳವಡಿಕೆ ಕುರಿತಂತೆ ಚರ್ಚಿಸಲಿದ್ದೇವೆ. ಕೌಶಲ್ಯಾಧಾರಿತ ಪಠ್ಯಕ್ರಮಗಳ ಅಳವಡಿಕೆ ನಿಟ್ಟಿನಲ್ಲಿ ಹೊಸ ಕೋರ್ಸ್‌ಗಳನ್ನು ಪರಿಚಯಿಸಲಾಗುವುದು. ಪದವಿ, ಸ್ನಾತಕೋತ್ತರ ಪದವಿ ಪಡೆಯುವ ವಿದ್ಯಾರ್ಥಿಗಳಿಗೆ ಕೌಶಲ್ಯ ಕೇಂದ್ರಿತ ಪಠ್ಯಕ್ರಮ, ತರಬೇತಿ ನೀಡುವ ನಿಟ್ಟಿನಲ್ಲಿ ಸಾರ್ವಜನಿಕ ಹಾಗೂ ಖಾಸಗಿ ವಲಯಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುವುದು. ಖಾಸಗಿ ಕಂಪನಿಗಳ ಸಿಎಸ್‌ಆರ್ ಫಂಡ್‌ಗಳನ್ನು ಬಡ ವಿದ್ಯಾರ್ಥಿಗಳ ಕೌಶಲ್ಯಾಧಾರಿತ ಉನ್ನತ ಶಿಕ್ಷಣಕ್ಕೆ ನೆರವು ಒದಗಿಸಲು ಒಡಂಬಡಿಕೆ ಮಾಡಿಕೊಳ್ಳಲು ಉದ್ದೇಶಿಸಲಾಗಿದೆ. ಆ ಮೂಲಕ ಅಸ್ತಿತ್ವದಲ್ಲಿರುವ ಸಾಂಪ್ರದಾಯಿಕ ಶಿಕ್ಷಣ ಕೋರ್ಸ್‌ಗಳಲ್ಲಿ ಹೊಸ ಬದಲಾವಣೆ ತರಲಾಗುವುದು. ವಿಶ್ವವಿದ್ಯಾಲಯ ನಿರ್ವಹಣೆಯಲ್ಲಿ ಆರ್ಥಿಕ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.

ಚಾಮರಾಜನಗರ ವಿಶ್ವವಿದ್ಯಾಲಯದ ಡಾ. ಗಂಗಾಧರ, ಬಾಗಲಕೋಟೆಯ ವಿಶ್ವವಿದ್ಯಾಲಯದ ಕುಲಪತಿ ಬಿ.ಎಸ್. ದೇಶಪಾಂಡೆ, ಹಾಸನ ವಿಶ್ವವಿದ್ಯಾಲಯದ ಕುಲಪತಿ ಟಿ.ಸಿ. ತಾರಾನಾಥ, ಕೊಡಗು ವಿಶ್ವವಿದ್ಯಾಲಯದ ಕುಲಪತಿ ಡಾ. ಅಶೋಕ ನೂತನ ವಿಶ್ವವಿದ್ಯಾಲಯಗಳ ಭವಿಷ್ಯದ ನಡಿಗೆ ಕುರಿತಂತೆ ಮಾತನಾಡಿ, ನೂತನ ವಿಶ್ವವಿದ್ಯಾಲಯಗಳಿಗೆ ಈಗಾಗಲೇ ಯುಜಿಸಿಯಿಂದ ೨ ಎಫ್ ಮಾನ್ಯತೆ ಸಿಕ್ಕಿದೆ. ೧೨ಡಿ ನೋಂದಣಿ ಪ್ರಕ್ರಿಯೆಯೂ ಶುರುವಾಗಿದೆ. ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳ ಬೋಧನೆ, ಸಂಶೋಧನೆ, ವಿಸ್ತರಣಾ ಚಟುವಟಿಕೆಗಳ ಬದಲಾಗಿ ವೈಜ್ಞಾನಿಕ, ತಾಂತ್ರಿಕ, ಕೌಶಲ್ಯಾಧಾರಿತ, ಮಾನವೀಯ ಶಿಕ್ಷಣವನ್ನು ಮಕ್ಕಳಿಗೆ ನೀಡಲು ಈ ಏಳು ವಿಶ್ವವಿದ್ಯಾಲಯಗಳು ಪಠ್ಯಕ್ರಮ ಅಳವಡಿಸಲಿವೆ. ಆಧುನಿಕ ತಾಂತ್ರಿಕ ಡಿಜಿಟಿಯಲ್ ಮಾದರಿಯ ಶಿಕ್ಷಣ ಪರಿಚಯಿಸಲಿವೆ. ಆಧುನಿಕ ಉದ್ಯೋಗದಾತ ಕಂಪನಿಗಳು ಅಪೇಕ್ಷಿಸುವ ಕೌಶಲ್ಯಾಧಾರಿತ ತರಬೇತಿಯನ್ನು ಮಕ್ಕಳಿಗೆ ನೀಡಲು ಉದ್ದೇಶಿಸಲಾಗಿದೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಶಿಕ್ಷಣ ತಜ್ಞರನ್ನು ಆಹ್ವಾನಿಸಿ ಪಠ್ಯಕ್ರಮಗಳ ರೂಪರೇಷೆ ತಯಾರಿಸಲಾಗುವುದು. ಕೌಶಲ್ಯಾಧಾರಿತ ಮಾನವೀಯ ಮೌಲ್ಯಯುಳ್ಳ ಕೋರ್ಸ್‌ಗಳನ್ನು ಪರಿಚಯಿಸಲಾಗುವುದು. ಉನ್ನತ ಸಂಶೋಧನೆಗೆ ಒತ್ತು ನೀಡಲಾಗುವುದು. ಭವಿಷ್ಯದಲ್ಲಿ ಸ್ವತಂತ್ರವಾಗಿ ಸ್ವಪೋಷಣೆ ಮಾಡಿಕೊಳ್ಳುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯಗಳು ಜಾಗತಿಕ ಮಟ್ಟದಲ್ಲಿ ಬೆಳವಣಿಗೆ ನಿಟ್ಟಿನಲ್ಲಿ ಕಾರ್ಯ ಯೋಜನೆ ತಯಾರಿಸಲಾಗುವುದು ಎಂದರು.

ನೂತನ ವಿವಿಗಳ ವ್ಯಾಪ್ತಿಯಲ್ಲಿ ಬರುವ ಕಾಲೇಜುಗಳು ಆಯಾ ವಿವಿಗಳಲ್ಲೇ ಸಂಯೋಜನೆ ಹೊಂದಬೇಕಾಗಿದೆ. ಈ ನಿಟ್ಟಿನಲ್ಲಿ ಕಾರ್ಯಪೂರ್ಣಗೊಂಡಿದೆ. ವಿವಿ ಸಂಯೋಜಿತ ಸ್ವತಂತ್ರ ಕಾಲೇಜ್‌ಗಳನ್ನು ಶೀಘ್ರವೇ ಗುರುತಿಸಲಾಗುವುದು. ನೂತನ ವಿವಿಗಳಲ್ಲೇ ಪಿಎಚ್‌ಡಿ ವಿಭಾಗಕ್ಕೆ ಪ್ರವೇಶ ಪಡೆಯಲು ಅಧಿಸೂಚನೆ ಹೊರಡಿಸಲಾಗಿದೆ. ಮಾತೃ ವಿವಿಗಳಿಂದ ಈಗಾಗಲೇ ಹುದ್ದೆಗಳ ಬೇರ್ಪಡಿಸುವಿಕೆ ಆಗಿದೆ ಎಂದು ತಿಳಿಸಿದರು.

ಸರ್ಕಾರದಿಂದ ಅಗತ್ಯ ಸಹಕಾರ:

ಹೊಸ ವಿಶ್ವವಿದ್ಯಾಲಯಗಳನ್ನು ರದ್ದುಪಡಿಸುವುದಿಲ್ಲ ಎಂಬ ಭರವಸೆ ಸಿಕ್ಕಿದೆ. ಸರ್ಕಾರದಿಂದ ಅಗತ್ಯ ಸಹಕಾರ ಸಿಗುತ್ತಿದೆ. ಅನುದಾನವೂ ಶೀಘ್ರದಲ್ಲಿ ಸಿಗಲಿದ್ದು, ಆ ನಿಟ್ಟಿನಲ್ಲಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಆರಂಭಿಕವಾಗಿ ಇರುವ ಕೆಲವು ಸಮಸ್ಯೆಗಳನ್ನು ನಿವಾರಿಸಿಕೊಂಡು ಶೈಕ್ಷಣಿಕ ದೃಷ್ಟಿಯಿಂದ ಮುಂದಡಿ ಇಡುತ್ತಿದ್ದೇವೆ. ಹುದ್ದೆಗಳ ಕೊರತೆ ಎಲ್ಲ ವಿವಿಗಳಲ್ಲೂ ಸಾಮಾನ್ಯ ಎಂದು ಕುಲಪತಿಗಳು ಸಮರ್ಥಿಸಿಕೊಂಡರು.

Share this article