ಕನ್ನಡಪ್ರಭ ವಾರ್ತೆ ಕುಶಾಲನಗರ
ಪ್ರಕೃತಿ ವಿಕೋಪ ಕಾರ್ಯಾಚರಣೆ ಸಂದರ್ಭ ಸ್ವಯಂಸೇವಕರು ಪ್ರಮುಖ ಪಾತ್ರ ವಹಿಸುವ ಮೂಲಕ ಸ್ಥಳೀಯ ಸಮಸ್ಯೆಗಳಿಗೆ ತಕ್ಷಣ ಪರಿಹಾರ ಒದಗಿಸುವಲ್ಲಿ ಯಶಸ್ವಿಯಾಗುತ್ತಾರೆ ಎಂದು ಕೊಡಗು ಜಿಲ್ಲಾ ವಿಪತ್ತು ನಿರ್ವಹಣಾಧಿಕಾರಿ ಅನನ್ಯ ವಾಸುದೇವ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಕುಶಾಲನಗರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಶ್ರಯದಲ್ಲಿ ನಡೆದ ಕೊಡಗು ಜಿಲ್ಲೆಯ ಶೌರ್ಯ ವಿಪತ್ತು ನಿರ್ವಹಣಾ ಕಾರ್ಯಕ್ರಮದ ಐದನೇ ವಾರ್ಷಿಕೋತ್ಸವ ಪ್ರಯುಕ್ತ ಶೌರ್ಯ ಸಮಿತಿಗಳ ಸ್ವಯಂಸೇವಕರಿಗೆ ಹಮ್ಮಿಕೊಳ್ಳಲಾದ ಕೌಶಲ್ಯಾಭಿವೃದ್ಧಿ ತರಬೇತಿ ಮತ್ತು ಸಮಿತಿ ಸಭೆಗೆ ಚಾಲನೆ ನೀಡಿ ಮಾತನಾಡಿದರು. ಪ್ರಕೃತಿ ವಿಕೋಪ ಸಂದರ್ಭ ಸ್ಥಳೀಯ ಸ್ವಯಂಸೇವಕರ ಸಹಾಯದ ತುರ್ತು ಅಗತ್ಯತೆ ಇರುತ್ತದೆ ಎಂದ ಅವರು ವಿಶೇಷ ಸಂದರ್ಭಗಳಲ್ಲಿ ತುರ್ತಾಗಿ ಸೇವೆ ಸಲ್ಲಿಸುವ ಮೂಲಕ ಸಂಭಾವ್ಯ ಅಪಾಯಗಳನ್ನು ತಪ್ಪಿಸಲು ಸಾಧ್ಯ ಎಂದರು. ಈ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಯೋಜನೆ ಮೂಲಕ ರೂಪುಗೊಂಡ ಶೌರ್ಯ ತಂಡದ ಸದಸ್ಯರ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಕೊಡಗು ಜಿಲ್ಲೆಯಲ್ಲಿ ಎನ್ ಡಿ ಆರ್ ಎಫ್ ಸಿಬ್ಬಂದಿಗಳು ಅಗತ್ಯ ಸಂದರ್ಭ ಸೇವೆ ಒದಗಿಸಲು ಸದಾ ಸಿದ್ಧರಾಗಿದ್ದಾರೆ ಎಂದು ಮಾಹಿತಿ ನೀಡಿದರು. ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದ ಎನ್ ಡಿ ಆರ್ ಎಫ್ ವಿಶೇಷ ಘಟಕ ಸ್ಥಾಪನೆ ಬಗ್ಗೆ ಆಶಯ ವ್ಯಕ್ತಪಡಿಸಿದರು.ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಆಶಯ ನುಡಿಗಳನ್ನಾಡಿದ ಜನಜಾಗೃತಿ ಪ್ರಾದೇಶಿಕ ವಿಭಾಗದ ನಿರ್ದೇಶಕರಾದ ವಿವೇಕ್ ವಿ ಪಾಯಸ್, ರಾಜ್ಯದಲ್ಲಿ ಒಟ್ಟು 91 ತಾಲೂಕುಗಳಲ್ಲಿ 10,500 ಜನ ವಿಪತ್ತು ನಿರ್ವಹಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.ಕೊಡಗು ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳಿಂದ ಶೌರ್ಯ ತಂಡ ಕಾರ್ಯನಿರ್ವಹಿಸುತ್ತಿದ್ದು ಸೋಮವಾರಪೇಟೆ, ವಿರಾಜಪೇಟೆ, ಮಡಿಕೇರಿ ತಾಲೂಕುಗಳಲ್ಲಿ ಒಟ್ಟು 255 ಮಂದಿ ಸ್ವಯಂಸೇವಕರು ವಿಪತ್ತು ನಿರ್ವಹಣೆ ತಂಡದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು. ಈ ತಂಡದ ಸದಸ್ಯರಿಗೆ ಕ್ಷೇತ್ರದ ಯೋಜನೆ ಮೂಲಕ ಆರೋಗ್ಯ ಸಹಕಾರ, ಆರೋಗ್ಯ ರಕ್ಷೆ , ಕ್ರಿಟಿಕಲ್ ಫಂಡ್ ಸೇರಿದಂತೆ ತಲಾ ಒಟ್ಟು 95 ಸಾವಿರ ರು. ಮೊತ್ತದ ಅನುದಾನ ಕಲ್ಪಿಸಲಾಗುತ್ತದೆ. ರಾಜ್ಯದಾದ್ಯಂತ ಇದುವರೆಗೆ ಒಟ್ಟು 64,000ಕ್ಕೂ ಅಧಿಕ ಘಟನೆಗಳಲ್ಲಿ ತಂಡದ ಸದಸ್ಯರು ಸೇವೆ ಸಲ್ಲಿಸಿದ್ದಾರೆ ಎಂದು ಮಾಹಿತಿ ನೀಡಿದರು. ಮುಂದಿನ ದಿನಗಳಲ್ಲಿ ಈ ತಂಡದ ಸದಸ್ಯರು ಸ್ಥಳೀಯರ ಯೋಧರಂತೆ ಕೆಲಸ ನಿರ್ವಹಿಸಲಿದ್ದಾರೆ ಎಂದು ಹೇಳಿದರು. ಕೊಡಗು ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಎ ಟಿ ರಂಗಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಸೈನಿಕರ ಸಂಘದ ಅಧ್ಯಕ್ಷರಾದ ಕ್ಯಾಪ್ಟನ್ ದೇವಜನ ಚಿನ್ನಪ್ಪ, ಯೋಜನೆಯ ಜಿಲ್ಲಾ ನಿರ್ದೇಶಕರಾದ ಲೀಲಾವತಿ, ಜನಜಾಗೃತಿ ವೇದಿಕೆಯ ಜಿಲ್ಲಾ ಸದಸ್ಯರಾದ ಷಣ್ಮುಖ ರಾವ್, ಎಂ ಎನ್ ಚಂದ್ರಮೋಹನ್ ಮತ್ತು ವಿಪತ್ತು ನಿರ್ವಹಣಾ ತಂಡದ ಪ್ರಮುಖರಾದ ಜಯವಂತ ಪಟದಾರ, ಕಿಶೋರ್, ಯೋಜನಾಧಿಕಾರಿ ಹನುಮಂತಪ್ಪ ಅಂಗಡಿ ಮೇಲ್ವಿಚಾರಕ ನಾಗರಾಜ್ ಮತ್ತಿತರರು ಇದ್ದರು. ಜಿಲ್ಲೆಯ ಸೋಮವಾರಪೇಟೆ, ವಿರಾಜಪೇಟೆ, ಮಡಿಕೇರಿ ತಾಲೂಕುಗಳ ಸುಮಾರು 200ಕ್ಕೂ ಅಧಿಕ ಶೌರ್ಯ ಸ್ವಯಂಸೇವಕರು ಪಾಲ್ಗೊಂಡಿದ್ದರು. ಈ ಸಂದರ್ಭ ವಿಪತ್ತು ನಿರ್ವಹಣಾ ತಂಡದ ಮೂಲಕ ಶೌರ್ಯ ತಂಡದ ಸ್ವಯಂಸೇವಕರಿಗೆ ವಿಶೇಷ ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಾಗಾರ ನಡೆಯಿತು.