ಕನ್ನಡಪ್ರಭ ವಾರ್ತೆ ಚಾಮರಾಜನಗರ
ಶೈಕ್ಷಣಿಕ ವ್ಯಾಸಂಗದಲ್ಲಿ ಕೌಶಲ ತರಬೇತಿಯನ್ನು ನೀಡುವುದರಿಂದ ಉದ್ಯೋಗ ಪಡೆಯಲು ಅನುಕೂಲವಾಗಲಿದೆ. ಹೀಗಾಗಿ ಕೌಶಲ ನೈಪುಣ್ಯ ವಿಷಯಗಳಿಗೂ ಒತ್ತು ನೀಡಬೇಕಾದ ಅಗತ್ಯವಿದೆ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ತಿಳಿಸಿದರು. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಜಿಲ್ಲಾಡಳಿತ ಮತ್ತು ಜಿಪಂ, ಕೌಶಲ್ಯಾಭಿವೃದ್ಧಿ, ಉದ್ದಿಮೆಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಮತ್ತು ಕರ್ನಾಟಕ ಕೌಶಲ್ಯ ಅಭಿವೃದ್ದಿ ನಿಗಮ ಸಹಯೋಗದೊಂದಿಗೆ ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ (ಡಿಡಿಯು-ಜಿಕೆವೈ)ಯಡಿ ಹಮ್ಮಿಕೊಳ್ಳಲಾಗಿದ್ದ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.ಪ್ರಸ್ತುತ ಸಂದರ್ಭದಲ್ಲಿ ಯಾವುದೇ ವಿದ್ಯಾರ್ಹತೆಯಿರಲಿ ಜೊತೆಗೆ ಕೌಶಲವೂ ಉದ್ಯೋಗಕ್ಕೆ ಅವಶ್ಯಕವಾಗಿದೆ. ಉದ್ಯೋಗ ನೀಡುವ ಸಂಸ್ಥೆಗಳು, ಉದ್ಯಮಗಳು, ಕೌಶಲ ನೈಪುಣ್ಯ ತರಬೇತಿ ಹೊಂದಿದ ಅಭ್ಯರ್ಥಿಗಳಿಗೆ ಆದ್ಯತೆ ನೀಡಿ ಆಯ್ಕೆ ನೀಡಿ ಆಯ್ಕೆ ಮಾಡಿಕೊಳ್ಳಲಿದ್ದಾರೆ. ಇಂದು ಕೌಶಲ ವಿಷಯವನ್ನು ಬೋಧಿಸಲಾಗುತ್ತಿದೆ. ಎಲ್ಲ ಹಂತಗಳಲ್ಲಿಯೂ ಇದು ಹೆಚ್ಚಾಗಬೇಕಿದೆ ಎಂದು ಹೇಳಿದರು. ಉದ್ಯೋಗ ಮೇಳದಲ್ಲಿ ಉದ್ಯೋಗ ಹಾಗೂ ತರಬೇತಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅಭ್ಯರ್ಥಿಗಳು ಯಾವ ಸ್ಥಳಕ್ಕೆ ನಿಯೋಜನೆಯಾದರು ವರದಿ ಮಾಡಿಕೊಳ್ಳಬೇಕು. ತರಬೇತಿ ಅನುಭವ ಪಡೆಯುವುದರಿಂದ ಮುಂದೆ ಇನ್ನ ಉತ್ತಮ ಉದ್ಯೋಗ ದೊರಕಲು ನೆರವಾಗಲಿದೆ ಎಂದು ಶಾಸಕರು ಅಭಿಪ್ರಾಯಪಟ್ಟರು.
ನಗರಕ್ಕೆ ಸಮೀಪದ ಬದನಗುಪ್ಪೆ-ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ಅವಕಾಶ ನೀಡಬೇಕೆಂದು ತಿಳಿಸಲಾಗಿದೆ. ಅನುಭವ ಇಲ್ಲದವರಿಗು ಸಾಕಷ್ಟು ಉದ್ಯೋಗಗಳನ್ನು ಕೈಗಾರಿಕಾ ಪ್ರದೇಶಗಳಲ್ಲಿ ನೀಡಲು ಅವಕಾಶವಿದೆ ಎಂದು ತಿಳಿಸಿದರು. ಉದ್ಯೋಗದಾತ ಕಂಪನಿಗಳ ಸ್ಟಾಲ್‌ಗಳನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಎ.ಆರ್.ಕೃಷ್ಣಮೂರ್ತಿ, ಡಾ.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಜಾರಿಯಾದ ಮೇಲೆ ಎಲ್ಲರಿಗೂ ಶಿಕ್ಷಣ, ಉದ್ಯೋಗ, ಸ್ವಾವಲಂಬಿ ಬದುಕಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಪಡೆಯಲು ಅವಕಾಶ ಮಾಡಿಕೊಟ್ಟಿರುವ ಉದ್ಯೋಗ ಮೇಳ ಆಯೋಜನೆಯಾಗಿರುವುದು ಉಪಯುಕ್ತ ಕಾರ್ಯವಾಗಿದೆ ಎಂದರು.ಬದನಗುಪ್ಪೆ-ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶವು ಸಿಎಂ ಸಿದ್ದರಾಮಯ್ಯ ಅವರ ಅವಧಿಯಲ್ಲಿಯೇ ಆರಂಭವಾಯಿತು. ಇಲ್ಲಿನ ಕೈಗಾರಿಕೆಗಳಿಗೆ ಭೂಮಿ, ನೀರು, ವಿದ್ಯುತ್ ಎಲ್ಲವೂ ಸ್ಥಳೀಯವಾಗಿ ಪೂರೈಕೆಯಾಗುತ್ತಿದೆ. ಹೀಗಾಗಿ ಸ್ಥಳೀಯ ನಿರುದ್ಯೋಗಿಗಳಿಗೆ ಹೆಚ್ಚಿನ ಅವಕಾಶ ಕೊಡಬೇಕು. ಇದರಿಂದ ನಿರುದ್ಯೋಗ ಸಮಸ್ಯೆ ನಿವಾರಣೆಯಾಗಲಿದೆ. ಜಿಲ್ಲೆಯ ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ಉನ್ನತ ಹುದ್ದೆಗಳನ್ನು ಪಡೆಯಬೇಕು ಎಂದು ತಿಳಿಸಿದರು.
ಕಾಡಾ ಅಧ್ಯಕ್ಷ ಪಿ. ಮರಿಸ್ವಾಮಿ ಮಾತನಾಡಿ, ಜಿಲ್ಲಾ ಕೇಂದ್ರದಲ್ಲಿ ಉದ್ಯೋಗ ಮೇಳ ಆಯೋಜನೆ ಮಾಡಿರುವುದು ಔಚಿತ್ಯಪೂರ್ಣ. ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿರುವ ಯುವ ಜನರಿಗೆ ಉದ್ಯೋಗ ಪಡೆದುಕೊಳ್ಳಲು ಈ ಉದ್ಯೋಗ ಮೇಳ ಹೆಚ್ಚು ಅನುಕೂಲಕರವಾಗಿದೆ ಎಂದರು.ಚೂಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನಾ ಮಾತನಾಡಿ ಅಧಿಕಾರಿಗಳು, ವಿವಿಧ ಉದ್ಯಮ ಸಂಸ್ಥೆಗಳು ಕಂಪನಿಗಳೊಂದಿಗೆ ಸಮಾಲೋಚಿಸಿ ಉದ್ಯೋಗ ಮೇಳ ಆಯೋಜನೆ ಮಾಡಿದ್ದಾರೆ. ಇದರ ಸದುಪಯೋಗ ಪಡೆದು ಉತ್ತಮ ಜೀವನ ರೂಪಿಸಿಕೊಳ್ಳಬೇಕೆಂದು ಸಲಹೆ ನೀಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಜಿಪಂ ಸಿಇಒ ಮೋನಾರೋತ್, ಇಂದಿನ ಉದ್ಯೋಗ ಮೇಳದಲ್ಲಿ 30ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಭಾಗವಹಿಸಿವೆ. 18 ರಿಂದ 40 ವರ್ಷದೊಳಗಿನ ಎಲ್ಲ ನಿರುದ್ಯೋಗಿ ಅಭ್ಯರ್ಥಿಗಳು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಎಸ್ಪಿ ಡಾ.ಬಿ.ಟಿ.ಕವಿತಾ ಮಾತನಾಡಿ, ಶೈಕ್ಷಣಿಕ ಹಿನ್ನೆಲೆ ಕೆಲಸ ಮಾಡುವ ಮನೋಭಾವ ಇದ್ದರೆ ಯಾರಿಗೂ ಉದ್ಯೋಗಕ್ಕೆ ಕೊರತೆ ಇರುವುದಿಲ್ಲ. ಶ್ರದ್ದೆ ಬದ್ದತೆಯಿಂದ ಕೆಲಸ ಮಾಡಿದರೆ ಬೆಳವಣಿಗೆ ಸಾಧ್ಯ ವರ್ಕ್ ಕಲ್ಚರ್ ಬೆಳೆಸಿಕೊಂಡರೆ ಉದ್ಯೋಗದಲ್ಲಿ ಉನ್ನತ ಸ್ಥಾನ ಪಡೆಯಬಹುದು ಎಂದು ಹೇಳಿದರು. ನಗರಸಭಾ ಸದಸ್ಯರಾದ ಎಂ.ಮಹೇಶ್ ಮಾತನಾಡಿ, ಜಿಲ್ಲೆಯ ನಿರುದ್ಯೋಗಿಗಳಿಗೆ ಉದ್ಯೋಗ ಲಭಿಸಲು ಉದ್ಯೋಗ ಮೇಳ ಏರ್ಪಡಿಸಿರುವುದು ಒಳ್ಳೆಯ ಕಾರ್ಯವಾಗಿದೆ. ಪ್ರತಿ ಆರು ತಿಂಗಳಿಗೊಮ್ಮೆ ಇಂತಹ ಉದ್ಯೋಗ ಮೇಳಗಳು ಜಿಲ್ಲೆಯಲ್ಲಿ ಆಯೋಜನೆಯಾದರೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ. ಚಂದ್ರು, ನಗರಸಭೆ ಅಧ್ಯಕ್ಷ ಎಸ್. ಸುರೇಶ್, ಉಪಾಧ್ಯಕ್ಷೆ ಮಮತ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಲಕ್ಷ್ಮೀ, ಯೋಜನಾ ನಿರ್ದೇಶಕ ಕಿರಣ್ ಪಡ್ನೇಕರ್, ಕಾಲೇಜಿನ ಪ್ರಾಂಶುಪಾಲ ಗುರುಪ್ರಸಾದ್, ಇತರರು ಉಪಸ್ಥಿತರಿದ್ದರು.