ಕೌಶಲ್ಯಯುಕ್ತ ಶಿಕ್ಷಣ ಭವಿಷ್ಯದ ಭದ್ರ ಬುನಾದಿ: ಸಿ.ವಿ. ಚಂದ್ರಶೇಖರ

KannadaprabhaNewsNetwork | Published : Mar 20, 2025 1:16 AM

ಸಾರಾಂಶ

ಮಾನವ ಸಂಪನ್ಮೂಲ ದೇಶದ ಬಹುದೊಡ್ಡ ಆಸ್ತಿಯಾಗಿದ್ದು ಭಾರತ 65% ಯುವಕರನ್ನು ಹೊಂದಿದೆ. ಮಾನವ ಸಂಪನ್ಮೂಲ ಕೌಶಲ್ಯಯುಕ್ತವಾದಾಗ ಮಾತ್ರ ಸದುಪಯೋಗವಾಗುತ್ತದೆ. ದೇಶದ ಯುವಕರಿಗೆ ಶಿಕ್ಷಣ, ಜ್ಞಾನ ಹಾಗೂ ಕೌಶಲ್ಯ ಅನಿವಾರ್ಯವಾಗಿದೆ. ಇದು ಸಿಕ್ಕರೆ ಭಾರತ ವಿಶ್ವದ ಅತ್ಯಂತ ಬಲಾಢ್ಯ ರಾಷ್ಟ್ರವಾಗಲಿದೆ.

ಕೊಪ್ಪಳ:

ವಿಶ್ವದಲ್ಲಿಯೇ ಭಾರತ ಅತ್ಯಂತ ಹೆಚ್ಚು ಯುವಕರನ್ನು ಹೊಂದಿದ ದೇಶವಾಗಿದ್ದು ಕೌಶಲ್ಯಯುಕ್ತ ಶಿಕ್ಷಣ ಮಾತ್ರ ಯುವಕರಿಗೆ ಭವಿಷ್ಯದ ಭದ್ರ ಬುನಾದಿ ನಿರ್ಮಿಸಬಲ್ಲದು ಎಂದು ಜೆಡಿಎಸ್‌ ರಾಜ್ಯ ಕೋರ್‌ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ ಹೇಳಿದರು.

ಸಿವಿಸಿ ಫೌಂಡೇಶನ್ ಹಾಗೂ ಎಸ್‌ವಿಸಿ ಶೈಕ್ಷಣಿಕ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಕುಷ್ಟಗಿ, ಎಸ್‌ಎಸ್‌ಐ ಟೆಕ್ನಾಲಜೀಸ್ ಸಹಯೋಗದಲ್ಲಿ ಯುವಕರಿಗೆ ಆಯೋಜಿಸಿರುವ ಎರಡು ತಿಂಗಳ ಉಚಿತ ಡಿಜಿಟಲ್ ಲಿಟರಸಿ ಮತ್ತು ಸ್ಪೋಕನ್ ಇಂಗ್ಲಿಷ್‌ ತರಬೇತಿ ಕಾರ್ಯಕ್ರಮವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.

ಮಾನವ ಸಂಪನ್ಮೂಲ ದೇಶದ ಬಹುದೊಡ್ಡ ಆಸ್ತಿಯಾಗಿದ್ದು ಭಾರತ 65% ಯುವಕರನ್ನು ಹೊಂದಿದೆ. ಮಾನವ ಸಂಪನ್ಮೂಲ ಕೌಶಲ್ಯಯುಕ್ತವಾದಾಗ ಮಾತ್ರ ಸದುಪಯೋಗವಾಗುತ್ತದೆ. ದೇಶದ ಯುವಕರಿಗೆ ಶಿಕ್ಷಣ, ಜ್ಞಾನ ಹಾಗೂ ಕೌಶಲ್ಯ ಅನಿವಾರ್ಯವಾಗಿದೆ. ಇದು ಸಿಕ್ಕರೆ ಭಾರತ ವಿಶ್ವದ ಅತ್ಯಂತ ಬಲಾಢ್ಯ ರಾಷ್ಟ್ರವಾಗಲಿದೆ ಎಂದರು.

ಪಾಶ್ಚಿಮಾತ್ಯದಿಂದ ಬರುವ ಜ್ಞಾನ ಇಂಗ್ಲಿಷ್ ಭಾಷೆಯಲ್ಲಿಯೇ ಹುಟ್ಟುತ್ತದೆ. ಆ ಜ್ಞಾನ ಅರ್ಥೈಸಿಕೊಳ್ಳಲು ಇಂಗ್ಲಿಷ್‌ ಭಾಷಾ ಪ್ರೌಢಿಮೆ ಅಗತ್ಯ. ಬಹುತೇಕ ಯುವಕರಿಗೆ ಡಿಜಿಟಲ್ ಕೌಶಲ್ಯ ಇಲ್ಲದಿರುವುದು ನಿರುದ್ಯೋಗಕ್ಕೆ ಕಾರಣವಾಗಿ ಅಭಿವೃದ್ಧಿಗೆ ಅಡ್ಡಿಯಾಗುತ್ತಿದೆ. ಇಂಗ್ಲಿಷ್‌ ಭಾಷೆ ಹಾಗೂ ಡಿಜಿಟಲ್ ಕೌಶಲ್ಯವಿರುವವರಿಗೆ ಅವಕಾಶಗಳು ಮುಕ್ತವಾಗಿವೆ.‌ ಹೀಗಾಗಿ ಉಚಿತ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.

ರಾಜ್ಯ ಶಿಕ್ಷಣ ಸಂಪನ್ಮೂಲ ವ್ಯಕ್ತಿ ಮತ್ತು ಇಂಗ್ಲಿಷ್‌ ಭಾಷಾ ತಜ್ಞ ಸಿ.ವಿ. ಪಾಟೀಲ ಮಾತನಾಡಿ, ಭಾಷೆಯ ನಿರಂತರ ಬಳಕೆ ಆ ಭಾಷೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇಂಗ್ಲಿಷ್ ಭಾಷಾ ಜ್ಞಾನ ಹೊಂದಿರುವ ವ್ಯಕ್ತಿ ಪ್ರಪಂಚದಲ್ಲೆಡೆ ವ್ಯವಹರಿಸಬಹುದು.‌ ಪೂರ್ವ ಭಾಗದ ಕೆಲವು ದೇಶಗಳಲ್ಲಿ ಇಂಗ್ಲಿಷ್ ಭಾಷೆ ಕಲಿಸುವವರಿಗೆ ಭಾರಿ ಬೇಡಿಕೆ ಇದೆ. ಈ ಭಾಷಾ ಸಂವಹನ ಕಲೆ ಯುವಕರಿಗೆ ಯಶಸ್ಸು ತಂದು ಕೊಡಲಿದೆ. ಕಲ್ಯಾಣ ಕರ್ನಾಟಕ ಭಾಗದ ಯುವಶಕ್ತಿಗೆ ಇಂಗ್ಲಿಷ್‌ ಭಾಷಾ ಪ್ರೌಢಿಮೆ ಅಗತ್ಯವಾಗಿದೆ ಎಂದು ಹೇಳಿದರು.

ಎಸ್‌ಎಸ್‌ಐ ಟೆಕ್ನಾಲಜಿಸ್ ಮುಖ್ಯಸ್ಥ ಮಂಜುನಾಥ್ ಉಲ್ಲತ್ತಿ ಮಾತನಾಡಿ, ಇಂದು ಜಗತ್ತು ತಂತ್ರಜ್ಞಾನದ ಮೇಲೆ ಅವಲಂಬಿತವಾಗಿದೆ. ಎಲ್ಲ ವೃತ್ತಿಗಳಿಗೂ ತಂತ್ರಜ್ಞಾನವೇ ಆಧಾರ. ಈ ಭಾಗದ ಯುವಕರಿಗೆ ತಂತ್ರಜ್ಞಾನದ ಅರಿವಿನ ಕೊರತೆ ಇದೆ. ಇಂತಹ ತರಬೇತಿ ಶಿಬಿರಗಳು ಅವರಿಗೆ ನೆರವಾಗಲಿದೆ‌. ಈ ಉಚಿತ ತರಬೇತಿ ಶಿಬಿರಕ್ಕೆ ಹತ್ತನೇ ತರಗತಿ, ಐಟಿಐ, ಪಿಯುಸಿ ಹಾಗೂ ಪದವಿ ಪೂರೈಸಿರುವ ಒಟ್ಟು 264 ಯುವಕರು ದಾಖಲಾಗಿದ್ದಾರೆ ಎಂದು ಮಾಹಿತಿ ನೀಡಿದರು.

ಎಸ್‌ವಿಸಿ ಶಿಕ್ಷಣ ಸಂಸ್ಥೆಗಳ ಸಿಇಒ ಜಗದೀಶ್ ಅಂಗಡಿ ಮಾತನಾಡಿ, ಯುವಶಕ್ತಿ ಹಾಗೂ ಶಿಕ್ಷಣ ಕ್ಷೇತ್ರಗಳನ್ನು ಗಮನದಲ್ಲಿಟ್ಟುಕೊಂಡು ಸಿವಿಸಿ ಫೌಂಡೇಶನ್ ಕೆಲಸ ಮಾಡುತ್ತಿದೆ. ಕೊಪ್ಪಳದ ಯುವಶಕ್ತಿಗೆ ವೇದಿಕೆಯಾಗಲು ಹಾಗೂ ಅವಕಾಶ ಒದಗಿಸಲು ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದೆ. ಮುಂದಿನ ದಿನಗಳಲ್ಲಿ ಬೃಹತ್ ಪ್ರಮಾಣದ ಉದ್ಯೋಗ ಮೇಳ ಏರ್ಪಡಿಸಲು ಚಿಂತನೆ ನಡೆದಿದೆ ಎಂದು ಹೇಳಿದರು.

ಸಿವಿಸಿ ಫೌಂಡೇಶನ್ ಸಂಚಾಲಕ ಮೌನೇಶ ಕಿನ್ನಾಳ, ಉಪನ್ಯಾಸಕರಾದ ಶಿವಯ್ಯ ಎಚ್. ಹಿರೇಮಠ ಹಾಗೂ ಸಂಗನಗೌಡರ, ಮೋನಿಕಾ ಇಟಗಿ ಇದ್ದರು.

Share this article