ಜೀತಪದ್ಧತಿ ಮಾನವೀಯತೆಗೆ ಕಳಂಕ: ನ್ಯಾಯಾಧೀಶ ಸತೀಶ ಎಂ.

KannadaprabhaNewsNetwork |  
Published : Feb 14, 2026, 02:45 AM IST
ಪೋಟೊ-೧೩ ಎಸ್.ಎಚ್.ಟಿ. ೧ಕೆ-ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಸತೀಶ ಎಂ. ಅವರು ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿದರು. | Kannada Prabha

ಸಾರಾಂಶ

ಜೀತ ಪದ್ಧತಿ ರದ್ದತಿ ಕಾಯ್ದೆಯನ್ನು ೧೯೭೬ರಲ್ಲಿ ದೇಶದಾದ್ಯಂತ ಜಾರಿ ಮಾಡಲಾಯಿತು. ಜೀತ ಪದ್ಧತಿ ಕಂಡುಬಂದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಇಂತಹ ಪ್ರಕರಣಗಳು ಕಂಡುಬಂದರೆ ಜೀತಕ್ಕೊಳಗಾದವರಿಗೆ ಪುನರ್ವಸತಿ ಕಲ್ಪಿಸಬೇಕು.

ಶಿರಹಟ್ಟಿ: ಜೀತಪದ್ಧತಿ ಮಾನವೀಯತೆಗೆ ಕಳಂಕ, ಶಾಪವಾಗಿ ಪರಿಣಮಿಸಿದೆ ಎಂದು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಸತೀಶ ಎಂ. ಹೇಳಿದರು.

ಲಕ್ಷೇಶ್ವರ ತಾಲೂಕು ಕಾನೂನು ಸೇವೆಗಳ ಸಮಿತಿ, ಶಿರಹಟ್ಟಿ ಮತ್ತು ಲಕ್ಷೇಶ್ವರದ ವಕೀಲರ ಸಂಘ, ಪೊಲೀಸ್ ಇಲಾಖೆ, ತಾಲೂಕು ಆಡಳಿತ, ತಾಪಂ, ಶಾಲಾ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಪಟ್ಟಣದ ಎಫ್.ಎಂ. ಡಬಾಲಿ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಜೀತ ಪದ್ಧತಿ ನಿರ್ಮೂಲನಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಜೀತ ಪದ್ಧತಿ ನಿರ್ಮೂಲನೆಗೆ ಕಾಯ್ದೆ ರೂಪಿಸಲಾಗಿದ್ದರೂ ಅಲ್ಲಲ್ಲಿ ವರದಿಯಾಗುತ್ತಿದೆ. ಇದನ್ನು ಬುಡ ಸಮೇತ ಕಿತ್ತೊಗೆಯಲು ಎಲ್ಲರೂ ಸಹಕಾರ ನೀಡಬೇಕು ಎಂದು ಕೋರಿದರು.

ಜೀತ ಪದ್ಧತಿ ರದ್ದತಿ ಕಾಯ್ದೆಯನ್ನು ೧೯೭೬ರಲ್ಲಿ ದೇಶದಾದ್ಯಂತ ಜಾರಿ ಮಾಡಲಾಯಿತು. ಜೀತ ಪದ್ಧತಿ ಕಂಡುಬಂದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಇಂತಹ ಪ್ರಕರಣಗಳು ಕಂಡುಬಂದರೆ ಜೀತಕ್ಕೊಳಗಾದವರಿಗೆ ಪುನರ್ವಸತಿ ಕಲ್ಪಿಸಬೇಕು ಎಂದು ಸಲಹೆ ನೀಡಿದರು.

ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಇರಬೇಕು. ಜೀತಪದ್ಧತಿ ಸಂಪೂರ್ಣ ನಿರ್ಮೂಲನೆ ಆಗಬೇಕು ಎಂಬುದು ಪ್ರತಿಯೊಬ್ಬರ ಧ್ಯೇಯ ಆಗಬೇಕು. ಜೀತ ಪದ್ಧತಿ ನಿರ್ಮೂಲನೆ ಬಗ್ಗೆ ಗ್ರಾಮೀಣ ಪ್ರದೇಶದಲ್ಲಿ ಜಾಗೃತಿ ಮೂಡಿಸುವುದು ಅಗತ್ಯ. ಜೀತ ಪದ್ಧತಿ ನಿರ್ಮೂಲನೆ ಒಂದು ಸಾಮೂಹಿಕ ಪ್ರಯತ್ನ. ಎಲ್ಲರೂ ಒಗ್ಗೂಡಿ ಕೆಲಸ ಮಾಡಿದರೆ ಈ ಅನಿಷ್ಟ ಪದ್ಧತಿ ತೊಡೆದುಹಾಕಲು ಸಾಧ್ಯವಿದೆ ಎಂದು ಹೇಳಿದರು.ಮಾನವ ಕಳ್ಳ ಸಾಗಾಣಿಕೆ ಮತ್ತು ಜೀತ ಕಾರ್ಮಿಕ ಪದ್ಧತಿ ಅಪರಾಧವಾಗಿದೆ. ಜೀತ ಕಾರ್ಮಿಕ ಪದ್ಧತಿ ಮಾನವ ಕಳ್ಳಸಾಗಣೆಯ ಒಂದು ಬಲವಂತದ ರೂಪವಾಗಿದೆ. ಇದರಲ್ಲಿ ಸಾಲ ಅಥವಾ ಅನಿವಾರ್ಯತೆ ಕಾರಣದಿಂದಾಗಿ, ಕಾರ್ಮಿಕರು ಭಾರತೀಯ ಸಂವಿಧಾನದಲ್ಲಿ ನೀಡಿರುವ ತಮ್ಮ ಸ್ವಾತಂತ್ರ‍್ಯ ಮತ್ತು ಹಕ್ಕುಗಳನ್ನು ಕಳೆದು ಕೊಳ್ಳುವಂತೆ ಮಾಡುವುದು ಆಗಿದೆ ಎಂದು ಹೇಳಿದರು.

ಮುಖ್ಯೋಪಾಧ್ಯಾಯ ಆರ್.ಎಫ್. ಬಟಗುರಕಿ ಅಧ್ಯಕ್ಷತೆ ವಹಿಸಿದ್ದರು. ಲಕ್ಷೇಶ್ವರದ ಸಹಾಯಕ ಸರ್ಕಾರಿ ಅಭಿಯೋಜಕರಾದ ಹೀನಾಕೌಸರ್ ಗಂಜಿಹಾಳ, ಪಿಎಸ್‌ಐ ಈರಪ್ಪ ರಿತ್ತಿ, ವಕೀಲರ ಸಂಘದ ಅಧ್ಯಕ್ಷ ಎಸ್.ವೈ. ಗೊಬ್ಬರಗುಂಪಿ ಉಪಸ್ಥಿತರಿದ್ದರು. ಪ್ಯಾನಲ್ ವಕೀಲ ಎಂ.ಕೆ. ಚೌಡಿ ಅವರು ಜೀತ ಪದ್ಧತಿ ಅಂದು ಮತ್ತು ಇಂದು ಕುರಿತು ಉಪನ್ಯಾಸ ನೀಡಿದರು. ರೇಣುಕಾ ಜಗಂಡಬಾವಿ, ಎನ್.ಆರ್. ಉಡಚಗೊಂಡ, ಬಿ.ಕೆ. ಕರಕಣ್ಣನವರ, ಸುನೀಲ್ ಲಮಾಣ, ನೌಶಾದ ಶಿಗ್ಲಿ ಹಾಗೂ ಶಾಲಾ ಸಿಬ್ಬಂದಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಂಗಾಪುರದಲ್ಲಿ ನೀರಿನ ಸಮಸ್ಯೆ: ಖಾಲಿ ಕೊಡ ಹಿಡಿದು ಪ್ರತಿಭಟನೆ
ಶುಖಮುನಿ ತಾತನ ಮಠಕ್ಕೆ ಸೇವೆಯ ಮಹಾಪೂರ