ಖಾಜು ಸಿಂಗೆಗೋಳ
ಕನ್ನಡಪ್ರಭ ವಾರ್ತೆ ಇಂಡಿಇಂಡಿ-ಚಡಚಣ ಸೇರಿದಂತೆ ಜಿಲ್ಲೆಯ ವಿವಿಧೆಡೆ ಕಳೆದ ಮೂರು ದಿನಗಳಿಂದ ಬಿಟ್ಟೂ ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಭೀಮಾ ನದಿ ಬೋರ್ಗರೆದಿದ್ದು, ಇದೀಗ ಸ್ವಲ್ಪ ಇಳಿಮುಖವಾಗಿದೆ. ಇದೀಗ ಭೀಮಾ ತೀರದ ಜನಜೀವನ ಅಸ್ತವ್ಯಸ್ತವಾಗಿದೆ. ಇದಲ್ಲದೇ ಮಹಾರಾಷ್ಟ್ರದಲ್ಲಿನ ವರುಣನ ಅರ್ಭಟದಿಂದಾಗಿ ಇಂಡಿ ತಾಲೂಕಿನಲ್ಲಿ ಅವಾಂತರಗಳು ಸೃಷ್ಟಿಯಾಗಿದೆ. ಇನ್ನು ಎರಡು ದಿನ ಮಳೆಯಾಗುವ ಸಂಭವ ಹಿನ್ನಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ಪ್ರಕಟಿಸಿದೆ. ತಾಲೂಕಿನಲ್ಲಿ ಧಾರಾಕಾರ ಮಳೆಯಿಂದ ಎಲ್ಲೆಡೆ ಪ್ರವಾಹ ಉಂಟಾಗಿದೆ. ಹಲವು ಸೇತುವೆಗಳು ಜಲಾವೃತಗೊಂಡಿವೆ. ಇದರಿಂದ ಹಲವು ಗ್ರಾಮಗಳ ಸಂಪರ್ಕ ಕಡಿತಗೊಂಡಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ಒಂದೆಡೆ ಭೀಮಾನದಿ ಪಾತ್ರದ ಇಂಡಿ ತಾಲೂಕಿನ ಸುಮಾರು 12ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಪ್ರವಾಹದ ಭೀತಿಯುಂಟಾಗಿದೆ. ಜನ-ಜಾನುವಾರುಗಳ ಸುರಕ್ಷತೆಗೆ ಕಾಳಜಿ ಕೇಂದ್ರಗಳ ನಿರ್ಮಾಣಕ್ಕೆ ಮುಂದಾಗಿರುವ ಜಿಲ್ಲಾಡಳಿತ, ತಾಲೂಕು ಆಡಳಿತದ ಅವಿರತ ಯತ್ನದ ಮಧ್ಯೆಯೂ ಸತತ ಮಳೆ ಜನರನ್ನು ಹೈರಾಣಾಗಿಸಿದೆ. ಕೆರೆಕಟ್ಟೆಗಳು, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದರೆ, ಹೊಲಗದ್ದೆಗಳು ಸಂಪೂರ್ಣ ಜಲಾವೃತವಾಗಿವೆ. ರೈತರ ಬೆಳೆಗಳು ಮತ್ತೆ ಹಾನಿಯಾಗಿವೆ. ಒಂದು ಅಂದಾಜಿನ ಪ್ರಕಾರ ಇಂಡಿಯಲ್ಲಿ 35 ಸಾವಿರ ಹೆಕ್ಟೇರ್ ಸೇರಿದಂತೆ ಜಿಲ್ಲೆಯಲ್ಲಿ ಅಂದಾಜು 1 ಲಕ್ಷ ಹೆಕ್ಟೇರ್‌ಗೂ ಹೆಚ್ಚಿನ ಪ್ರದೇಶದಲ್ಲಿನ ಬೆಳೆಗಳು ಹಾನಿಯಾಗಿದೆ. ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಹತ್ತಿ ಹಾಗೂ ತೊಗರಿ, ಮೆಕ್ಕೆಜೋಳ ಹಾಗೂ ಇರುಳ್ಳಿ, ದ್ರಾಕ್ಷಿ, ದಾಳಿಂಬೆ, ಕಬ್ಬು ಬೆಳೆಗಾರರು ಭಾರಿ ನಷ್ಟ ಅನುಭವಿಸಿದ್ದಾರೆ. ಹತ್ತಿ ಬೆಳೆಗಾರರಂತೂ ಕಂಗಾಲಾಗಿದ್ದು, ಮಳೆ ಯಾವಾಗ ಕಡಿಮೆಯಾಗುತ್ತದೆ ಎಂದು ಆಕಾಶ ನೋಡುತ್ತಿದ್ದಾರೆ.ಭೀಮಾನದಿ ದಂಡೆಯ ಮೇಲಿನ ಗ್ರಾಮಗಳ ಜಮೀನುಗಳಲ್ಲಿ ಪ್ರವಾಹ, ಕೆಲವು ಕಡೆಗಳಲ್ಲಿ ಮಳೆ ನೀರು ಕೆಲವೊಂದು ಕಡೆಗೆ ಭೀಮಾ ನದಿಯ ಹಿನ್ನೀರು ನಿಂದಾಗಿ ಕಬ್ಬು, ಹತ್ತಿ, ದ್ರಾಕ್ಷಿ, ತೊಗರಿ, ಮೆಕ್ಕೆಜೋಳ, ಇರುಳ್ಳಿ ಬೆಳೆ ನಾಶವಾಗಿದೆ. 15-20 ದಿನಗಳ ಹಿಂದೆ ಕೃಷಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ತಂಡ ಒಂದು ಹಂತದ ಸಮೀಕ್ಷೆಗೆಂದು ತೆರಳಿ, ಹಾನಿ ಎಂದು ಅಂದಾಜಿಸಿ, ಅಂತಿಮ ವರದಿಗೆ ಸಿದ್ಧತೆ ನಡೆಸಿದ್ದರು. ವರದಿ ಅಂತಿಮಗೊಳ್ಳುವ ಮುಂಚೆಯೇ ಮತ್ತೆ ಸತತ ಈ ಮೂರು ದಿನಗಳಲ್ಲಿ ಮಳೆ ಶುರುವಾಗಿದ್ದು, ಎಲ್ಲ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿದೆ. ಜಿಲ್ಲೆಯಲ್ಲಿ ಲಕ್ಷ ಹೆಕ್ಟೇರ್‌ಗೂ ಹೆಚ್ಚು ಪ್ರಮಾಣದಲ್ಲಿ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಆದರೂ, ಮುಂದುವರೆದಿರುವ ಮಳೆಯ ಪರಿಣಾಮವಾಗಿ ಇನ್ನಷ್ಟು ಹೆಚ್ಚಿನ ಅನಾಹುತ ಸಂಭವಿಸುವ ಸಾದ್ಯತೆ ಇದೆ. ಇದು ರೈತರಲ್ಲಿ ಆತಂಕ ಮೂಡಿಸಿದೆ.ಇಂಡಿ ತಾಲೂಕಿನಲ್ಲಿ ಸೆ.27ರಂದು ಒಂದೇ ದಿನದಲ್ಲಿ 49.8 ಎಂಎಂ, ನಾದ ಬಿಕೆ 22 ಎಂಎಂ, ಅಗರಖೇಡ 49.3 ಎಂಎಂ, ಹೊರ್ತಿ 40.2 ಎಂಎಂ, ಝಳಕಿ 38.8 ಎಂಎಂ, ಹಲಸಂಗಿ 44 ಎಂಎಂ, ಚಡಚಣ 45 ಎಂಎಂ ಮಳೆ ದಾಖಲಾಗಿದೆ. ಆರಂಭದ ಮಳೆ ಸುರಿದಾಗ ಖುಷಿಪಟ್ಟಿದ್ದ ರೈತಾಪಿ ವರ್ಗ, ಸತತ ಮಳೆಯಿಂದ ಕಂಗಾಲಾಗಿ ಹೋಗಿದ್ದಾರೆ.ಧಾರಾಕಾರ ಮಳೆ ಇಂಡಿ ತಾಲೂಕು ಸೇರಿದಂತೆ ಜಿಲ್ಲಾದ್ಯಂತ ಸುರಿಯುತ್ತಿದೆ. ಭೀಮಾ ಪ್ರವಾಹ ಯತಾಸ್ಥಿತಿ ಮುಂದುವರಿದಿದೆ. ಹೀಗಾಗಿ ನದಿನೀರು ಹೊಲಗದ್ದೆ ಹೊಕ್ಕಿದ್ದು ಹಾಗೆಯೇ ತಟಸ್ಥವಾಗಿ ಉಳಿದುಕೊಂಡಿದೆ. ಇದರಿಂದಾಗಿ ನದಿ ತೀರದಲ್ಲಿ ಐದು ಸಾವಿರ ಹೆಚ್ಚು ಹೆಕ್ಟೇರ್ ರೈತರ ಬೆಳೆ ನಷ್ಟವಾಗಿದೆ.