ಕನ್ನಡಪ್ರಭ ವಾರ್ತೆ ಮದ್ದೂರು
ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ಮತ್ತು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿ, ತಿಂಗಳಿಗೆ ರಾಜ್ಯದ 3 ಜಿಲ್ಲೆಗಳಲ್ಲಿ ಪ್ರಗತಿ ಪರಿಶೀಲನೆ ಮಾಡಲಾಗುವುದು. ಅದಾಲತ್ ಮಾದರಿಯಲ್ಲಿ ಸಣ್ಣ ಪುಟ್ಟ ವ್ಯಾಜ್ಯಗಳನ್ನು ಜಿಲ್ಲಾ ಹಂತದಲ್ಲಿಯೇ ಪರಿಹರಿಸಲು ಕೆಲಸ ಮಾಡಲಾಗುತ್ತಿದೆ ಎಂದರು.
ಆಯೋಗಕ್ಕೆ ಬಂದು ಅರ್ಜಿ ಸಲ್ಲಿಸಿರುವವರು ಮತ್ತೆ ಭೇಟಿ ನೀಡುವ ಅಗತ್ಯವಿಲ್ಲ. ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲೆ ನಿಮ್ಮ ಸಮಸ್ಯೆ ಬಗೆಹರಿಸಲಾಗುವುದು. ರಾಜ್ಯದಲ್ಲಿ ದೌರ್ಜನ್ಯಕ್ಕೆ ಒಳಗಾದವರು ಯಾರೇ ಆಗಿರಲಿ ಆಯೋಗಕ್ಕೆ ಬಂದು ಪ್ರಕರಣ ದಾಖಲಿಸಬಹುದು. ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಅಯೋಗ ಸದಾ ನಿಮ್ಮೊಂದಿಗೆ ಇರಲಿದ್ದು, ನೊಂದವರಿಗೆ ತ್ವರಿತವಾಗಿ ನ್ಯಾಯ ದೊರಕಿಸಿಕೊಡಲಾಗುವುದು ಎಂದರು.ಮಂಡ್ಯ ಜಿಲ್ಲೆಯಲ್ಲಿ ಹೆಚ್ಚಾಗಿ ಕಂದಾಯ, ದೌರ್ಜನ್ಯ, ಖಾತೆ, ಪಹಣಿ, ಸ್ಮಶಾನದ ವಿಚಾರಗಳ ಕುರಿತಾಗಿ ಪ್ರಕರಣಗಳು ದಾಖಲಾಗಿವೆ. ಈಗಾಗಲೇ ಜಿಲ್ಲಾ ಮಟ್ಟದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸಮಸ್ಯೆ ಬಗೆಹರಿಸುವ ಕ್ರಮ ಕೈಗೊಳ್ಳಬೇಕು ಎಂದು ಕಟ್ಟು ನಿಟ್ಟಿನ ಸೂಚನೆ ನೀಡಲಾಗಿತ್ತು. ಹೀಗಾಗಿ ಹಲವು ಪ್ರಕರಣಗಳು ಇತ್ಯರ್ಥವಾಗಿವೆ ಎಂದರು.
ಮದ್ದೂರು ತಾಲೂಕಿನ ಬಾಕಿ ಉಳಿದ ಅರ್ಜಿಗಳನ್ನು ಒಂದು ತಿಂಗಳೊಳಗೆ ಬಗೆಹರಿಸಲು ಅಧಿಕಾರಿಗಳಿಗೆ ಗಡುವು ನೀಡಲಾಗಿದೆ. ಮುಖ್ಯವಾಗಿ ವಿವಿಧ ಇಲಾಖೆಗಳಿಗೆ ಮೀಸಲಾಗಿರುವ ಎಸ್‌ಸಿಪಿ, ಟಿಎಸ್‌ಪಿ ಹಣ ಸರಿಯಾಗಿ ಬಳಕೆಯಾಗಬೇಕು. ಆದರೆ, ಕೆಲವು ಅಧಿಕಾರಿಗಳು ಸಮರ್ಪಕವಾಗಿ ಬಳಕೆ ಮಾಡುತ್ತಿಲ್ಲ ಎಂದು ದೂರು ಕೇಳಿ ಬರುತ್ತಿವೆ. ಅಂತಹ ಅಧಿಕಾರಿಗಳ ವಿರುದ್ಧ ಆಯೋಗ ಯಾವುದೇ ಮುಲಾಜಿಲ್ಲದೆ ಶಿಸ್ತು ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ನಾನು ಆಯೋಗದಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ಆಯೋಗದಲ್ಲಿ 4800 ಪ್ರಕರಣಗಳು ಬಾಕಿ ಉಳಿದಿವೆ. ಈಗಾಗಲೇ ಒಂದುವರೇ ತಿಂಗಳಲ್ಲಿ 206 ಪ್ರಕರಣಗಳು ದಾಖಲಾಗಿ 6 ಬಾರಿ ನ್ಯಾಯಾಲಯದ ಕಲಾಪ ನಡೆಸಿ 70 ಪ್ರಕರಣ ವಿಲೇವಾರಿ ಮಾಡಲಾಗಿದೆ ಎಂದರು.
ಇಂದು ತಾಲೂಕಿನಿಂದ 26 ಅರ್ಜಿಗಳು ಬಂದಿದೆ. ಒಂದು ತಿಂಗಳೊಳಗೆ ಸಂಬಂಧ ಪಟ್ಟ ಅಧಿಕಾರಿಗಳು ಕಾರ್ಯೋನ್ಮುಖವಾಗಿ ಕೆಲಸ ಮಾಡಿ ವರದಿ ಸಲ್ಲಿಸಬೇಕು. ಮತ್ತೆ ಒಂದು ತಿಂಗಳ ಬಳಿಕ ಮದ್ದೂರು ತಾಲೂಕಿಗೆ ಭೇಟಿ ನೀಡಲಿದ್ದು, ಅಷ್ಟರಲ್ಲಿ ಸಮಸ್ಯೆ ಬಗೆಹರಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.ಸಭೆಯಲ್ಲಿ ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ, ತಾಪಂ ಇಒ ರಾಮಲಿಂಗಯ್ಯ, ಡಿವೈಎಸ್ಪಿ ಯಶವಂತ್ ಕುಮಾರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ್, ಬಿಇಒ ಧನಂಜಯ, ಸರ್ಕಲ್ ಇನ್ಸ್ ಪೆಕ್ಟರ್ ನವೀನ್, ಪ್ರಭಾರ ಟಿಎಚ್‌ಒ ಡಾ.ರವಿಶಂಕರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳುಭಾಗವಹಿಸಿದ್ದರು.