ಕನ್ನಡಪ್ರಭ ವಾರ್ತೆ ಸಕಲೇಶಪುರ
ಮಂಗಳೂರಿನಿಂದ ಸರಕು ತುಂಬಿಕೊಂಡು ಬೆಂಗಳೂರಿನೆಡೆಗೆ ಸಾಗುತ್ತಿದ್ದ ಲಾರಿ ದೋಣಿಗಾಲ್ ಗ್ರಾಮ ಸಮೀಪ ಕಿರಿದಾದ ಹೆದ್ದಾರಿಯಲ್ಲಿ ಸೃಷ್ಟಿಯಾಗಿರುವ ಭಾರಿ ಪ್ರಮಾಣದ ಹೊಂಡದಲ್ಲಿ ಮುಂದೆ ಚಲಿಸಲಾಗದೆ ಸಿಲುಕಿದ್ದರಿಂದ ಇತರೆ ವಾಹನಗಳು ಸಾಗಲಾಗದ ಕಾರಣ ಬೆಳಿಗ್ಗೆ ೧೧ ಗಂಟೆಯಿಂದ ೧೨ವರೆಗೂ ಹೆದ್ದಾರಿ ಸಂಚಾರ ಬಂದ್ ಆಗಿತ್ತು.
ಸ್ಥಳಕ್ಕೆ ಧಾವಿಸಿದ ಪೊಲೀಸರು, ಮಂಗಳೂರಿನಿಂದ ಬೆಂಗಳೂರಿನೆಡೆಗೆ ಸಾಗುತ್ತಿದ್ದ ವಾಹನಗಳನ್ನು ಕಪ್ಪಳಿ ಗ್ರಾಮದ ಮೂಲಕ ಹಾಗೂ ಬೆಂಗಳೂರಿನಿಂದ ಮಂಗಳೂರಿನೆಡೆಗೆ ಸಾಗುತ್ತಿದ್ದ ವಾಹನಗಳನ್ನು ಸುಬ್ರಮಣ್ಯ ರಸ್ತೆ ಮೂಲಕ ಸಂಚರಿಸಲು ಅವಕಾಶ ಕಲ್ಪಿಸಿದ ಪರಿಣಾಮ ವಾಹನ ದಟ್ಟಣೆ ನಿಯಂತ್ರಣಕ್ಕೆ ಬಂದಿತ್ತು. ಅಂತಿಮವಾಗಿ ಕ್ರೇನ್ ಬಳಸಿ ಲಾರಿಯನ್ನು ಹೊಂಡದಿಂದ ಹೊರತಂದು ಸಂಚಾರ ಸುಗಮಗೊಳಿಸಲಾಯಿತು. ಸದ್ಯ ರಾಷ್ಟ್ರೀಯ ಹೆದ್ದಾರಿ 75ರ ಚತುಷ್ಪಥ ಕಾಮಗಾರಿ ತಾಲೂಕಿನ ದೊಡ್ಡತಪ್ಪಲೆ ಹಾಗೂ ದೋಣಿಗಾಲ್ ಗ್ರಾಮ ಸಮೀಪ ಸುಮಾರು ಒಂದು ಕಿ.ಮೀ. ನಷ್ಟು ಬಾಕಿ ಉಳಿದಿದ್ದು ಕಾಮಗಾರಿ ಬಾಕಿ ಉಳಿದಿರುವ ರಸ್ತೆ ವಾಹನಗಳು ಸಾಗಲಾಗದಷ್ಟು ಹದಗೆಟ್ಟಿದೆ.ಭಾರಿ ಪ್ರಮಾಣದಲ್ಲಿ ಮೇಲೆದ್ದಿರುವ ಕಲ್ಲುಗಳು ವಾಹನಗಳ ತಳಭಾಗಕ್ಕೆ ಹೊಡೆಯುತ್ತಿರುವುದರಿಂದ ಹಲವು ವಾಹನಗಳು ಈ ಎರಡು ಪ್ರದೇಶದಲ್ಲಿ ಕೆಟ್ಟು ನಿಲ್ಲುತ್ತಿವೆ. ಕಾಮಗಾರಿ ಮುಗಿಯುವವರೆಗೂ ಹೆದ್ದಾರಿ ದುರಸ್ತಿ ಮಾಡಿ ಎಂಬ ಕೂಗಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕಿಮ್ಮತ್ತು ನೀಡುತ್ತಿಲ್ಲ ಎಂಬ ಆರೋಪ ದಟ್ಟವಾಗಿ ಕೇಳಿ ಬರುತ್ತಿದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಂಡರು ದೋಣಿಗಾಲ್ ಗ್ರಾಮ ಸಮೀಪದ ೧೦೦ ಮೀಟರ್ ಹೆದ್ದಾರಿ ಒಂದು ಬದಿ ಭಾರಿ ಪ್ರಮಾಣದಲ್ಲಿ ಕುಸಿದಿರುವುದರಿಂದ ಇಲ್ಲಿ ಏಕಪಥ ರಸ್ತೆಯೆ ಇರಲಿದೆ ಎಂಬುದು ಹೆದ್ದಾರಿ ಅಧಿಕಾರಿಗಳ ಮಾತು.