ಕನ್ನಡಪ್ರಭ ವಾರ್ತೆ ಮೈಸೂರು
ನಗರ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2019ರಲ್ಲಿ ಬಿಜೆಪಿ ಸರ್ಕಾರ ಸ್ಮಾರ್ಟ್ ಮೀಟರ್ ಯೋಜನೆಯನ್ನು ದೇಶಾದ್ಯಂತ ಜಾರಿ ಮಾಡಿತು. ಸ್ಮಾರ್ಟ್ ಮೀಟರ್ ಹಗರಣದ ಕೀರ್ತಿ ಬಿಜೆಪಿ ನಾಯಕರಿಗೆ ಸಲ್ಲುತ್ತದೆ ಎಂದು ತಿರುಗೇಟು ನೀಡಿದರು.
ಸ್ಮಾರ್ಟ್ ಮೀಟರ್ ನಿಂದ ವಿದ್ಯುತ್ ಸೋರಿಕೆ, ವಿದ್ಯುತ್ ಕಳ್ಳತನ, ಅಧಿಕ ಬಿಲ್ ತಡೆಯುವುದು ಉದ್ದೇಶವಾಗಿದೆ. ದೇಶದಲ್ಲಿ 28 ರಾಜ್ಯಗಳು ಹಾಗೂ 9 ಕೇಂದ್ರಾಡಳಿತ ಪ್ರದೇಶಗಳಲ್ಲಿ ಕರ್ನಾಟಕ ಮತ್ತು ತೆಲಂಗಾಣ ಬಿಟ್ಟು ಎಲ್ಲಾ ರಾಜ್ಯಗಳು ಈಗಾಗಲೇ ಸ್ಮಾರ್ಟ್ ಮೀಟರ್ ಗಳನ್ನು ಅಳವಡಿಸಿಕೊಂಡಿವೆ ಎಂದರು.ರಾಜ್ಯದಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆಗೆ ಗುತ್ತಿಗೆ ಕರೆದು ಮೂರು ಕಂಪನಿಗಳನ್ನು ತಿರಸ್ಕರಿಸಿ ರಾಜಶ್ರೀ ಎಲೆಕ್ಟ್ರಿಕಲ್ಸ್ ಅವರಿಗೆ ನೀಡಲಾಗಿದೆ. ಸಹ್ಯಾದ್ರಿ ಎಲೆಕ್ಟ್ರಿಕಲ್ಸ್ ಕಂಪನಿಗೆ ಗುತ್ತಿಗೆ ತಿರಸ್ಕಾರವಾಗುತ್ತಿದ್ದಂತೆಯೇ ಬಿಜೆಪಿ ಶಾಸಕ ಅಶ್ವತ್ಥನಾರಾಯಣ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಹ್ಯಾದ್ರಿ ಕಂಪನಿಯೊಂದಿಗೆ ತಮ್ಮ ಸಂಬಂಧವನ್ನು ಬಹಿರಂಗಪಡಿಸುವಂತೆ ಅವರು ಒತ್ತಾಯಿಸಿದರು.
ಬಿಜೆಪಿಗೆ ಕೋಮುವಾದ ಬೇಕು
ರಾಜ್ಯದಲ್ಲಿ ಶಾಂತಿ ಕಾಪಾಡಲು ಕರಾವಳಿ ಭಾಗದಲ್ಲಿರುವ 6 ಬಿಜೆಪಿ ಶಾಸಕರನ್ನು ದೇಶದ್ರೋಹ ಕಾಯ್ದೆಯಡಿ ಬಂಧಿಸಬೇಕು ಅಥವಾ ಗಡಿಪಾರು ಮಾಡಬೇಕು. ವಿಪಕ್ಷ ನಾಯಕ ಆರ್. ಅಶೋಕ, ಸಿ.ಟಿ. ರವಿ ಅವರನ್ನು ಬಂಧಿಸಬೇಕು. ಕಲ್ಲಡ್ಕ ಪ್ರಭಾಕರ್ ಕಲ್ಲು ಹಾಕುವ ಬುದ್ಧಿಯವರು. ಅವರ ವಿರುದ್ಧ ದೂರು ದಾಖಲಿಸಿದರೆ ನ್ಯಾಯಾಲಯದಿಂದ ಸ್ಟೇ ತರುತ್ತಾರೆ. ಶಾಂತಿ ಕಾಪಾಡುವುದು ಹೇಗೆ? ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂಗಳಿಗೆ ಸಮಸ್ಯೆಯಾಗಿಲ್ಲ. ಬಿಜೆಪಿಯವರಿಗೆ ಸಮಸ್ಯೆಯಾಗಿದೆ ಎಂದು ಅವರು ದೂರಿದರು.
ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಪ್ರಧಾನ ಕಾರ್ಯದರ್ಶಿ ಎಂ. ಶಿವಣ್ಣ, ಮಾಧ್ಯಮ ವಕ್ತಾರ ಕೆ.ಮಹೇಶ್, ಸೇವಾದಳ ಗಿರೀಶ್ ಮೊದಲಾದವರು ಇದ್ದರು.