ಸ್ಮಯೋರ್ ಸಂಸ್ಥೆಗೆ ಗಣಿ ಸಚಿವಾಲಯದ ೭ ಸ್ಟಾರ್ ರೇಟಿಂಗ್ ಪ್ರಶಸ್ತಿ

KannadaprabhaNewsNetwork |  
Published : Jul 07, 2025, 11:48 PM IST
 ಸ್ಮಯೋರ್ ಗಣಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಬಹಿರ್ಜಿ ಅಜಯ್ ಘೋರ್ಪಡೆ ಪ್ರಶಸ್ತಿ ಸ್ವೀಕರಿಸಿದರು.  | Kannada Prabha

ಸಾರಾಂಶ

ಸಂಡೂರು ಮ್ಯಾಂಗನೀಸ್ ಮತ್ತು ಐರನ್ ಓರ್ಸ್‌ ಲಿಮಿಟೆಡ್‌ನ ಕಮತೂರು ಐರನ್ ಓರ್ಸ್‌ ಮೈನಿಂಗ್ ಲೀಜ್ ಸಂಖ್ಯೆ ೨೬೭೮ ಭಾರತ ಸರ್ಕಾರದ ಗಣಿ ಸಚಿವಾಲಯದ ೨೦೨೩-೨೪ರ ಪ್ರತಿಷ್ಠಿತ ೭ ಸ್ಟಾರ್ ರೇಟಿಂಗ್ ಪ್ರಶಸ್ತಿಗೆ ಭಾಜನವಾಗಿದೆ.

ಕನ್ನಡಪ್ರಭ ವಾರ್ತೆ ಸಂಡೂರುಸಂಡೂರು ಮ್ಯಾಂಗನೀಸ್ ಮತ್ತು ಐರನ್ ಓರ್ಸ್‌ ಲಿಮಿಟೆಡ್‌ನ ಕಮತೂರು ಐರನ್ ಓರ್ಸ್‌ ಮೈನಿಂಗ್ ಲೀಜ್ ಸಂಖ್ಯೆ ೨೬೭೮ ಭಾರತ ಸರ್ಕಾರದ ಗಣಿ ಸಚಿವಾಲಯದ ೨೦೨೩-೨೪ರ ಪ್ರತಿಷ್ಠಿತ ೭ ಸ್ಟಾರ್ ರೇಟಿಂಗ್ ಪ್ರಶಸ್ತಿಗೆ ಭಾಜನವಾಗಿದೆ.ಜು.೭ರಂದು ಜೈಪುರದ ರಾಜಸ್ಥಾನ ಇಂಟರ್‌ ನ್ಯಾಷನಲ್‌ ಸೆಂಟರ್‌ನಲ್ಲಿ ಇಂಡಿಯನ್ ಬ್ಯೂರೋ ಆಫ್ ಮೈನ್ಸ್‌ನವರು (ಐಬಿಎಂ) ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ರಾಜಸ್ಥಾನದ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಕಿಶನ್ ರೆಡ್ಡಿ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು. ಸ್ಮಯೋರ್ ಗಣಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಬಹಿರ್ಜಿ ಅಜಯ್ ಘೋರ್ಪಡೆ ಪ್ರಶಸ್ತಿ ಸ್ವೀಕರಿಸಿದರು.

ಈ ಸಂದರ್ಭ ಸ್ಮಯೋರ್ ಸಂಸ್ಥೆಯ ಉಪಾಧ್ಯಕ್ಷ (ಗಣಿ) ಕೃಷ್ಣ ರೆಡ್ಡಿ ಎಂ. (ಗಣಿ ಉಪಾಧ್ಯಕ್ಷ) ಮತ್ತು ಉಪ ಪ್ರಧಾನ ವ್ಯವಸ್ಥಾಪಕ ದೀಪಕ್ ಕುಕ್ಕೆ ಅನಿಲ್‌ಕುಮಾರ್ ಉಪಸ್ಥಿತರಿದ್ದರು.

೨೦೧೪-೧೫ ಸಾಲಿನಿಂದ ಗಣಿ ಸಚಿವಾಲಯವು ಉತ್ತಮವಾಗಿ ಕಾರ್ಯನಿರ್ವಹಿಸುವ ಗಣಿ ಸಂಸ್ಥೆಗಳಿಗೆ ಪ್ರತಿಷ್ಠಿತ ೫ ಸ್ಟಾರ್ ರೇಟಿಂಗ್ ಪ್ರಶಸ್ತಿ ನೀಡಲು ಪ್ರರಾಂಭಿಸಿತು. ಅಂದಿನಿಂದ ಇಂದಿನವರೆಗೂ ಸತತವಾಗಿ ಹತ್ತು ವರ್ಷಗಳಿಂದ ಸ್ಮಯೋರ್ ಸಂಸ್ಥೆಯು ೫ ಸ್ಟಾರ್ ರೇಟಿಂಗ್ ಪಡೆಯುತ್ತಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಡೀ ದೇಶದಲ್ಲಿ ಕೇವಲ 3 ಗಣಿ ಕಂಪನಿಗಳು ಮಾತ್ರ ಈ ೭ ಸ್ಟಾರ್ ಪ್ರಶಸ್ತಿಗೆ ಆಯ್ಕೆಗೊಂಡಿವೆ. ಈ ಪ್ರತಿಷ್ಠಿತ ೭ ಸ್ಟಾರ್ ಪ್ರಶಸ್ತಿಗೆ ದಕ್ಷಿಣ ಭಾರತದಿಂದ ಸ್ಮಯೋರ್ ಗಣಿ ಸಂಸ್ಥೆಯೊಂದೇ ಆಯ್ಕೆಗೊಂಡ ಏಕೈಕ ಸಂಸ್ಥೆಯಾಗಿದೆ.ಕೇಂದ್ರ ಗಣಿ ಸಚಿವಾಲಯವು ಸ್ಮಯೋರ್ ಸಂಸ್ಥೆಯ ಕಾರ್ಯಾಡಳಿತ, ವೈಜ್ಞಾನಿಕ ಗಣಿಗಾರಿಕೆ, ಸಾಮಾಜಿಕ ಕಾಳಜಿ, ಪರಿಸರ ಸ್ನೇಹಿ, ಅಭಿವೃದ್ಧಿ ಕಾರ್ಯಗಳು, ಉದ್ಯೋಗ, ಸಂಸ್ಥೆಯು ಉತ್ತಮ ಮಟ್ಟದಲ್ಲಿ ಗಣಿಯನ್ನು ನಡೆಸಿಕೊಂಡು ಹೋಗುತ್ತಿರುವುದನ್ನು ಗಮನಿಸಿ ಈ ಬಾರಿ ೭ ಸ್ಟಾರ್ ರೇಟಿಂಗ್ ನೀಡಿದೆ. ಈ ಬಾರಿಯೂ ಕೂಡ ಸ್ಮಯೋರ್ ಗಣಿ ಸಂಸ್ಥೆಯು ಈ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನವಾಗಿರುವುದು ಒಂದು ವಿಶೇಷ ಮತ್ತು ಇಂತಹ ಪ್ರಶಸ್ತಿಗಳು ಸಂಸ್ಥೆಯ ಜವಾಬ್ದಾರಿಯನ್ನು ಹೆಚ್ಚಿಸುತ್ತವೆ ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

PREV