ವಿದ್ಯಾರ್ಥಿಗಳ ಮುಖದ ಮಂದಹಾಸಕ್ಕೆ ಬೆಲೆ ಕಟ್ಟಲಾಗದು: ಶಾಸಕ ಪ್ರದೀಪ್ ಈಶ್ವರ್

KannadaprabhaNewsNetwork |  
Published : Oct 17, 2024, 12:48 AM IST
ಸಿಕೆಬಿ-1 ನಗರ ಹೊರವಲಯದ ತಮ್ಮ ಗೃಹಕಚೇರಿಯಲ್ಲಿ ಶಾಸಕ ಪ್ರದೀಪ್ ಈಶ್ವರ್ ಸುದ್ದಿಗೋಷ್ಟಿಯಲ್ಲಿ ವೈಯಕ್ತಿಕ ಸ್ಕಾಲರ್ಶಿಪ್ ಸ್ಕೀಂ ಕರಪತ್ರ ಬಿಡುಗಡೆ ಮಾಡಿದರು | Kannada Prabha

ಸಾರಾಂಶ

ಚನ್ನಪಟ್ಟಣ ಉಪಚುನಾವಣೆಗೆ ನನ್ನನ್ನೂ ಉಸ್ತುವಾರಿಯನ್ನಾಗಿ ನೇಮಿಸಿದ್ದಾರೆ. ಈ ಬಾರಿ ಚನ್ನಪಟ್ಟಣದಲ್ಲಿ ಡಿ.ಕೆ.ಸುರೇಶ್ ಗೆಲ್ಲಲಿದ್ದಾರೆ. ಅವರೇ ನಮ್ಮ ಪಕ್ಷದ ಅಧಿಕೃತ ಅಭ್ಯರ್ಥಿ ಆಗುವ ಎಲ್ಲಾ ಸಾಧ್ಯತೆಗಳಿವೆ. ಡಿ.ಕೆ. ಸುರೇಶಣ್ಣ ನಮ್ಮ ಜೊತೆ ವಿಧಾನಸೌಧಕ್ಕೆ ಬರುತ್ತಾರೆ ಎಂಬ ವಿಶ್ವಾಸವಿದೆ. ಅವರೇ ಅಭ್ಯರ್ಥಿಯಾದರೆ ಸೂಕ್ತ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಎಲ್ಲಾ ಖಾಸಗಿ ಹಾಗೂ ಸರ್ಕಾರಿ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳಿಗೆ ವೈಯಕ್ತಿಕ ಸ್ಕಾಲರ್‌ಶಿಪ್ ಸ್ಕೀಂ (ವಿದ್ಯಾರ್ಥಿವೇತನ ಯೋಜನೆ)ಯನ್ನು ಶಾಸಕ ಪ್ರದೀಪ್ ಈಶ್ವರ್ ಘೋಷಣೆ ಮಾಡಿದರು.

ನಗರ ಹೊರವಲಯದ ತಮ್ಮ ಗೃಹ ಕಚೇರಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ, ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳು, ಅಂತಿಮ ವರ್ಷದ ಪಿಜಿ, ಐಟಿಐ, ಡಿಪ್ಲೋಮಾ,ಡಿಎಡ್, ಬಿಎಡ್, ಇಂಜನಿಯರಿಂಗ್ ಮತ್ತು ವೈದ್ಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು ಮುಂದಾಗಿರುವುದಾಗಿ ತಿಳಿಸಿದರು.

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ತಲಾ 1,000 ರು., ಡಿಪ್ಲೋಮೋ- ಐಟಿಐ ವಿದ್ಯಾರ್ಥಿಗಳಿಗೆ ತಲಾ 1,500 ರು., ದ್ವಿತೀಯ ಪಿಯುಸಿ, ಡಿಎಡ್ ವಿದ್ಯಾರ್ಥಿಗಳಿಗೆ ತಲಾ 2,000ರು., ಪದವಿ, ಬಿಎಡ್, ಪಿಜಿ, ಇಂಜನಿಯರಿಂಗ್ ಮತ್ತು ವೈದ್ಯ ವಿದ್ಯಾರ್ಥಿಗಳಿಗೆ ತಲಾ 3,000 ರು. ವಿದ್ಯಾರ್ಥಿವೇತನ ನೀಡಲು ತೀರ್ಮಾನಿಸಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳು ಶಾಸಕ ಪ್ರದೀಪ್ ಈಶ್ವರ್ ವೆಬ್ ಸೈಟ್‌ನಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಇದಕ್ಕಾಗಿ ಕ್ಯೂಆರ್ ಕೋಡ್ ಇರುವ ಸ್ಕ್ಯಾನರ್ ಸಿದ್ಧಪಡಿಸಲಾಗಿದೆ, ವಿದ್ಯಾರ್ಥಿಗಳು ತಮ್ಮ ಮೊಬೈಲ್ ಮೂಲಕವೇ ಸ್ಕ್ಯಾನ್ ಮಾಡಿ ನೋಂದಣಿ ಮಾಡಿಕೊಳ್ಳಿ, ಯಾವುದೇ ಭೌತಿಕ ದಾಖಲಾತಿಗಳನ್ನು ನೀಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಅ. 15 ರಿಂದ ನ. 15ರವರೆಗೂ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. 10 ಸಾವಿರಕ್ಕೂ ಹೆಚ್ಚು ವಿಧ್ಯಾರ್ಥಿಗಳಿಗೆ ಈ ಸೌಲಭ್ಯ ಸಿಗಲಿದೆ ಎಂದು ಮಾಹಿತಿ ಹಂಚಿಕೊಂಡರು.

ಸೂಕ್ತ ಸಮಯಕ್ಕೆ ಆಸ್ಪತ್ರೆಗೆ ತಲುಪದೆ ಜೀವ ಕಳೆದುಕೊಂಡವರು ನನ್ನ ತಂದೆ ಈಶ್ವರ್ ಮತ್ತು ನನ್ನ ಹೆತ್ತ ತಾಯಿ ಮಂಜುಳ. ನನ್ನ ಕುಟುಂಬಕ್ಕೆ ಬಂದ ಸ್ಥಿತಿ, ಯಾರಿಗೂ ಬರಬಾರದೆಂದು ಹತ್ತು ಅಮ್ಮ ಆ್ಯಂಬುಲೆನ್ಸ್ ಗಳು ಕ್ಷೇತ್ರದಲ್ಲಿ ಉಚಿತವಾಗಿ ಕಾರ್ಯನಿರ್ವಹಿಸುತ್ತಿವೆ. ಕಳೆದ ಎರಡು ವರ್ಷಗಳಿಂದ ವರಮಹಾಲಕ್ಷ್ಮೀ ಹಬ್ಬಕ್ಕೆ ನನ್ನ ತಾಯಂದಿರಿಗೆ ಅರಿಶಿನ- ಕುಂಕುಮ, ಬಳೆ, ಸೀರೆಗಳನ್ನು ಕೊಟ್ಟಿದ್ದೇನೆ. ಸರ್ಕಾರಿ ಶಾಲೆಯ 25 ಸಾವಿರ ಮಕ್ಕಳಿಗೆ ಮತ್ತು 5 ಸಾವಿರ ಅಂಗನವಾಡಿ ಮಕ್ಕಳಿಗೆ ಹಬ್ಬಕ್ಕೆ ಬಟ್ಟೆ ವಿತರಿಸಿದ್ದೇನೆ. ಬರುವ ದೀಪಾವಳಿ ಮತ್ತು ಶಿವರಾತ್ರಿ ಹಬ್ಬಕ್ಕೆ ಸರ್ಕಾರಿ ಶಾಲೆಯ 25 ಸಾವಿರ ಮಕ್ಕಳಿಗೆ ಮತ್ತು ಅಂಗನವಾಡಿಯ 5 ಸಾವಿರ ಮಕ್ಕಳಿಗೆ ಬಟ್ಟೆ ವಿತರಿಸಲಿದ್ದೇನೆ ಎಂದರು.

ಜೆಡಿಎಸ್ - ಬಿಜೆಪಿ ಒಳಜಗಳದಿಂದ ಕಾಂಗ್ರೆಸ್ ಗೆ ಲಾಭ:

ಚನ್ನಪಟ್ಟಣ ಉಪಚುನಾವಣೆ ವಿಚಾರವಾಗಿ ಮಾತನಾಡಿ, ಡಿ.ಕೆ. ಸುರೇಶ್ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಬಹುದು, ಇಲ್ಲದಿದ್ದರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಗಬಹುದು. ಆದರೆ ಹೈಕಮಾಂಡ್ ಯಾರನ್ನೇ ಅಭ್ಯರ್ಥಿಯಾಗಿಸಲಿ, ಅವರ ಗೆಲುವು ನಿಶ್ಚಿತ. ಏಕೆಂದರೆ ಬಿಜೆಪಿಯ ಸಿಪಿ ಯೋಗೇಶ್ವರ್ ವರ್ಸಸ್ ಜೆಡಿಎಸ್ ನ ಎಚ್. ಡಿ. ಕುಮಾರಸ್ವಾಮಿಯವರ ಒಳ ಜಗಳ ನಮಗೆ ಅನುಕೂಲ ಆಗಲಿದೆ. ಚನ್ನಪಟ್ಟಣ ಕ್ಷೇತ್ರದಿಂದ ಎಚ್.ಡಿ. ಕುಮಾರಸ್ವಾಮಿಯವರ ಪತ್ನಿ ಅನಿತಾ ಕುಮಾರಸ್ವಾಮಿ ಅಥವಾ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿಯಾದರೆ ಉಪಚುನಾವಣೆಯಲ್ಲಿ ಸಿ.ಪಿ.ಯೋಗೇಶ್ವರ್ ಕೆಲಸ ಮಾಡಲ್ಲ. ಸಿ.ಪಿ.ಯೋಗೇಶ್ವರ್ ಅಭ್ಯರ್ಥಿಯಾದರೆ ಎಚ್.ಡಿ. ಕುಮಾರಸ್ವಾಮಿಯರೂ ಕೆಲಸ ಮಾಡಲ್ಲ. ಕಾಂಗ್ರೆಸ್ ವಿರುದ್ಧ ಇವರಲ್ಲಿ ಯಾರೇ ಅಭ್ಯರ್ಥಿಯಾದರೂ ಕಾಂಗ್ರೆಸ್ ಗೆ ಲಾಭವಾಗಲಿದೆ ಎಂದರು.

ಚನ್ನಪಟ್ಟಣ ಉಪಚುನಾವಣೆಗೆ ನನ್ನನ್ನೂ ಉಸ್ತುವಾರಿಯನ್ನಾಗಿ ನೇಮಿಸಿದ್ದಾರೆ. ಈ ಬಾರಿ ಚನ್ನಪಟ್ಟಣದಲ್ಲಿ ಡಿ.ಕೆ.ಸುರೇಶ್ ಗೆಲ್ಲಲಿದ್ದಾರೆ. ಅವರೇ ನಮ್ಮ ಪಕ್ಷದ ಅಧಿಕೃತ ಅಭ್ಯರ್ಥಿ ಆಗುವ ಎಲ್ಲಾ ಸಾಧ್ಯತೆಗಳಿವೆ. ಡಿ.ಕೆ. ಸುರೇಶಣ್ಣ ನಮ್ಮ ಜೊತೆ ವಿಧಾನಸೌಧಕ್ಕೆ ಬರುತ್ತಾರೆ ಎಂಬ ವಿಶ್ವಾಸವಿದೆ. ಅವರೇ ಅಭ್ಯರ್ಥಿಯಾದರೆ ಸೂಕ್ತ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಹೇಳಿದರು.

‘ಬ್ಯಾಂಕಿನ ಬ್ಯಾಲೆನ್ಸ್ ನೋಡಿದಾಗ ಸಿಗುವ ಖುಷಿಗಿಂತ, ಬಡ ಮಕ್ಕಳ ಮುಖದಲ್ಲಿ ಮಂದಹಾಸ ಕಂಡಾಗ ಸಿಗುವ ಖುಷಿಯೇ ದೊಡ್ಡದು. ಬಾಲ್ಯದಲ್ಲೇ ತಂದೆ-ತಾಯಿಯನ್ನು ಕಳೆದುಕೊಂಡು ಅನಾಥನಾಗಿ ಬೆಳೆದವನು ನಾನು. ಅನ್ನ ಮತ್ತು ಅಕ್ಷರದ ಬೆಲೆ ಅರಿತವನು, ಕ್ಷೇತ್ರದ ಜನತೆಯ ಆಶೀರ್ವಾದದಿಂದ ವಿಧಾನಸೌಧ ತಲುಪಿದವನು. ಆಸ್ತಿ - ಅಂತಸ್ತಿನ ಮೇಲೆ ವ್ಯಾಮೋಹ ಕಡಿಮೆ. ನನಗೇನೂ ಹಣ ಹೆಚ್ಚಾಗಿ ಈ ಕಾರ್ಯ ಮಾಡುತ್ತಿಲ್ಲಾ. ಇಂದಿಗೂ ನಾನು ತಿಂಗಳಾದರೆ ನನ್ನ ಕಾರಿನ ಇಎಂಐ ಕಟ್ಟಬೇಕು.’

-ಪ್ರದೀಪ್ ಈಶ್ವರ್, ಶಾಸಕರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!