ಪಡಿತರ ಅಕ್ಕಿ ಕಾಳಸಂತೆಯಲ್ಲಿ ಸಾಗಣೆ: 77 ಪ್ರಕರಣ ದಾಖಲು

KannadaprabhaNewsNetwork |  
Published : Oct 23, 2026, 02:30 AM IST
(ಫೋಟೊಬಿಕೆಟಿ6, ಜಿಲ್ಲಾಧಿಕಾರಿ ಸಂಗಪ್ಪ) | Kannada Prabha

ಸಾರಾಂಶ

ಸಾರ್ವಜನಿಕ ವಿತರಣಾ ಪದ್ಧತಿಯಡಿ ಅರ್ಹ ಪಡಿತರ ಚೀಟಿದಾರರಿಗೆ ವಿತರಿಸುವ ಅಕ್ಕಿಯನ್ನು ಅಕ್ರಮವಾಗಿ ಕಾಳಸಂತೆಯಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಸಾಗಣೆ ಹಾಗೂ ಸಂಗ್ರಹಣೆ ಮಾಡುವವರ ವಿರುದ್ಧ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಸಂಗಪ್ಪ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಸಾರ್ವಜನಿಕ ವಿತರಣಾ ಪದ್ಧತಿಯಡಿ ಅರ್ಹ ಪಡಿತರ ಚೀಟಿದಾರರಿಗೆ ವಿತರಿಸುವ ಅಕ್ಕಿಯನ್ನು ಅಕ್ರಮವಾಗಿ ಕಾಳಸಂತೆಯಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಸಾಗಣೆ ಹಾಗೂ ಸಂಗ್ರಹಣೆ ಮಾಡುವವರ ವಿರುದ್ಧ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಸಂಗಪ್ಪ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಕೇಂದ್ರ ಸರ್ಕಾರದ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಪ್ರತಿ ಅರ್ಹ ಫಲಾನುಭವಿಗೆ 5 ಕೆ.ಜಿ. ಅಕ್ಕಿ ಹಾಗೂ ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿಯಾಗಿ 5 ಕೆ.ಜಿ. ಅಕ್ಕಿ ಉಚಿತವಾಗಿ ವಿತರಿಸಲಾಗುತ್ತಿದೆ.ಈ ಅಕ್ಕಿಯನ್ನು ಅನಧಿಕೃತವಾಗಿ ಸಾಗಣೆ ಅಥವಾ ಸಂಗ್ರಹಣೆ ಮಾಡಿ ಕಾಳಸಂತೆಯಲ್ಲಿ ಮಾರಾಟ ಮಾಡುವ ಪ್ರಕರಣಗಳನ್ನು ಪತ್ತೆಹಚ್ಚಲು ಆಹಾರ ಇಲಾಖೆ ಹಾಗೂ ಇತರ ಇಲಾಖೆಗಳ ಸಹಯೋಗದಲ್ಲಿ ಜಂಟಿ ದಾಳಿ ನಡೆಸಲಾಗುತ್ತಿದ್ದು, ಅಗತ್ಯ ವಸ್ತುಗಳ ಕಾಯ್ದೆ-1955ರ ಅಡಿ ಪ್ರಕರಣ ದಾಖಲಿಸಲಾಗುತ್ತಿದೆ ಎಂದವರು ತಿಳಿಸಿದ್ದಾರೆ.

37 ಪ್ರಕರಣ ದಾಖಲು, ₹54,34,304 ಮೌಲ್ಯದ ಅಕ್ಕಿ ವಶ: ಜಿಲ್ಲೆಯಲ್ಲಿ 2025-26ನೇ ಸಾಲಿನಲ್ಲಿ ಅಕ್ರಮ ಅಕ್ಕಿ ಸಾಗಣೆ ಮೇಲೆ ದಾಳಿಸಿ 37 ಪ್ರಕರಣ ದಾಖಲಿಸಿದ್ದು, 1,555.65 ಕ್ವಿಂಟಾಲ್ ಅಕ್ಕಿ ಹಾಗೂ 24 ವಾಹನಗಳನ್ನು ಜಪ್ತಿ ಮಾಡಲಾಗಿದೆ. 64 ಆರೋಪಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗಿದೆ. 2026-27ನೇ ಸಾಲಿನಲ್ಲಿ ಈವರೆಗೆ 40 ಪ್ರಕರಣಗಳನ್ನು ದಾಖಲಿಸಿ, ₹37,73,152 ಮೌಲ್ಯದ 1,489.79 ಕ್ವಿಂಟಾಲ್ ಅಕ್ಕಿ ಹಾಗೂ 29 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಈ ಪ್ರಕರಣಗಳಲ್ಲಿ 40 ಆರೋಪಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದೆ.

ಒಟ್ಟಾರೆ 77 ಪ್ರಕರಣಗಳನ್ನು ದಾಖಲಿಸಿ, 3,045.44 ಕ್ವಿಂಟಾಲ್ ಅಕ್ಕಿ ಹಾಗೂ 53 ವಾಹನಗಳನ್ನು ಜಪ್ತಿ ಮಾಡಲಾಗಿದ್ದು, 104 ಆರೋಪಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗಿದೆ.

ಪಡಿದಾರರ ವಿರುದ್ಧವೂ ಕ್ರಮ:ಪಡಿತರ ಚೀಟಿದಾರರು ತಮಗೆ ಹಂಚಿಕೆಯಾದ ಆಹಾರಧಾನ್ಯವನ್ನು ಮಾರಾಟ ಮಾಡುವುದು ಕಂಡುಬಂದಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು. ಆಹಾರಧಾನ್ಯ ಮಾರಾಟ ಮಾಡುವವರು ಹಾಗೂ ಖರೀದಿಸುವವರ ವಿರುದ್ಧವೂ ಅಗತ್ಯ ವಸ್ತುಗಳ ಕಾಯ್ದೆ-1955ರ ಅಡಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಸಂಗಪ್ಪ ಎಚ್ಚರಿಸಿದ್ದಾರೆ.ಪಡಿತರ ಅಕ್ಕಿಯ ಅಕ್ರಮ ಸಾಗಣೆ, ಸಂಗ್ರಹಣೆ ಅಥವಾ ಕಾಳಸಂತೆ ಮಾರಾಟದ ಕುರಿತು ಸಾರ್ವಜನಿಕರು ಪೊಲೀಸ್ ಸಹಾಯವಾಣಿ ಸಂಖ್ಯೆ 112, ಮೊಬೈಲ್ ಸಂಖ್ಯೆ 9480803900, ಆಹಾರ ಇಲಾಖೆಯ ಸಹಾಯವಾಣಿ 1967, ಮೊಬೈಲ್ ಸಂಖ್ಯೆ 9448992015 ಹಾಗೂ ದೂರವಾಣಿ ಸಂಖ್ಯೆ 08354-235094ಕ್ಕೆ ಕರೆ ಮಾಡಿ ದೂರು ಸಲ್ಲಿಸಬಹುದು. ಸಂಬಂಧಿಸಿದ ತಾಲೂಕು ತಹಸೀಲ್ದಾರ್ ಕಚೇರಿಗೂ ಭೇಟಿ ನೀಡಿ ದೂರು ನೀಡಬಹುದಾಗಿದೆ. ದೂರುದಾರರ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಧರ್ಮದ ನಾಶ ಧರ್ಮದ ವಿಜಯವೇ ವಿಜಯದಶಮಿ: ರಂಭಾಪುರಿ ಜಗದ್ಗುರು
ಇಳಕಲ್ಲದಲ್ಲಿ ಆರೆಸ್ಸೆಸ್‌ ಆಕರ್ಷಕ ಪಥಸಂಚಲನ