ಮುಡಾ ಕೇಸ್‌ ಆರೋಪಿಸಿದ್ದ ಸ್ನೇಹಮಯಿ ವಶಕ್ಕೆ

KannadaprabhaNewsNetwork |  
Published : Feb 21, 2026, 02:15 AM IST
Snehamayi

ಸಾರಾಂಶ

ಸಾಮಾಜಿಕ ಜಾಲತಾಣಗಳಲ್ಲಿ ಹಿರಿಯ ಕೆಎಎಸ್ ಅಧಿಕಾರಿ ಹಾಗೂ ಮುಡಾ ಮಾಜಿ ಆಯುಕ್ತ ಡಿ.ಬಿ.ನಟೇಶ್ ಅವರ ಫೋಟೋ ಹಾಗೂ ಧ್ವನಿ ತುಣುಕು ನಕಲಿ ಮಾಡಿ ಅಪಪ್ರಚಾರ ನಡೆಸಿದ ಆರೋಪದ ಮೇರೆಗೆ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರನ್ನು ಸಿಸಿಬಿ ಸೈಬರ್ ಕ್ರೈಂ ಠಾಣೆ ಪೊಲೀಸರು ಶುಕ್ರವಾರ ವಶಕ್ಕೆ ಪಡೆದು ವಿಚಾರಣೆ

  ಬೆಂಗಳೂರು : ಸಾಮಾಜಿಕ ಜಾಲತಾಣಗಳಲ್ಲಿ ಹಿರಿಯ ಕೆಎಎಸ್ ಅಧಿಕಾರಿ ಹಾಗೂ ಮುಡಾ ಮಾಜಿ ಆಯುಕ್ತ ಡಿ.ಬಿ.ನಟೇಶ್ ಅವರ ಫೋಟೋ ಹಾಗೂ ಧ್ವನಿ ತುಣುಕು ನಕಲಿ ಮಾಡಿ ಅಪಪ್ರಚಾರ ನಡೆಸಿದ ಆರೋಪದ ಮೇರೆಗೆ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರನ್ನು ಸಿಸಿಬಿ ಸೈಬರ್ ಕ್ರೈಂ ಠಾಣೆ ಪೊಲೀಸರು ಶುಕ್ರವಾರ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. 

ನಗರದ ಸಿಟಿ ಸಿವಿಲ್ ನ್ಯಾಯಾಲಯದ ಬಳಿ ಕೃಷ್ಣ ಅವರನ್ನು ವಶಕ್ಕೆ ಪಡೆದ ಸೈಬರ್ ಪೊಲೀಸರು, ಬಳಿಕ ಅವರನ್ನು ಠಾಣೆಗೆ ಕರೆತಂದು ತಡರಾತ್ರಿವರೆಗೆ ವಿಚಾರಣೆಗೊಳಪಡಿಸಿದ್ದಾರೆ. ಅಲ್ಲದೆ ಮೈಸೂರಿನಲ್ಲಿರುವ ಆರೋಪಿ ಮನೆ ಮೇಲೆ ಸಹ ಸಿಸಿಬಿ ದಾಳಿ ನಡೆಸಿ ಕೆಲ ದಾಖಲೆಗಳನ್ನು ಜಪ್ತಿ ಮಾಡಿದೆ ಎಂದು ಮೂಲಗಳು ಹೇಳಿವೆ. 

ನಕಲಿ ದಾಖಲೆ ಸೃಷ್ಟಿಸಿ ಅಪಪ್ರಚಾರ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಕೃಷ್ಣ ಅವರಿಗೆ ನೋಟಿಸ್ ನೀಡಲಾಗಿತ್ತು. ಅಂತೆಯೇ ಅವರು ವಿಚಾರಣೆಗೆ ಹಾಜರಾಗಿ ತನಿಖೆಗೆ ಸಹಕರಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ವಿರುದ್ಧ ಮುಡಾ ಪ್ರಕರಣದ ಭ್ರಷ್ಟಾಚಾರ ಆರೋಪಕ್ಕೆ ತುತ್ತಾಗಿರುವ ಹಿರಿಯ ಕೆಎಎಸ್ ಅಧಿಕಾರಿ ನಟೇಶ್ ಅವರಿಗೆ ಮುಂಬಡ್ತಿ ನೀಡಲು 1.6 ಕೋಟಿ ರು ಹಣ ಪಡೆದಿದ್ದಾರೆ ಎಂದು ಕೃಷ್ಣ ಆರೋಪಿಸಿದ್ದರು. 

ಈ ಆರೋಪ ಮಾಡಿದ ಮರುದಿನವೇ ಅವರಿಗೆ ಸಿಸಿಬಿ ತನಿಖೆ ನಡೆದಿರುವುದು ಚರ್ಚೆಗೆಗ್ರಾಸವಾಗಿದೆ.ಅಪಪ್ರಚಾರದ ಬಗ್ಗೆ ನಟೇಶ್ ದೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ ಮೈಸೂರು ಅಭಿವೃದ್ಧಿ ಪ್ರಾಧಿಕಾರದ (ಮುಡಾ) ಭೂಹಗರಣದಲ್ಲಿ ಪಾತ್ರವಹಿಸಿದ್ದಾರೆ ಎಂದು ಕೆಎಎಸ್ ಅಧಿಕಾರಿ ನಟೇಶ್ ಮೇಲೆ ಸಹ ಆರೋಪ ಕೇಳಿ ಬಂದಿತ್ತು. 

ಈ ಹಿಂದೆ ಮುಡಾದಲ್ಲಿ ಆಯುಕ್ತರಾಗಿದ್ದ ಅವಧಿಯಲ್ಲಿ ನಟೇಶ್ ಅವರು ಕಾನೂನುಬಾಹಿರವಾಗಿ ನಿವೇಶಗಳನ್ನು ಹಂಚಿದ್ದರು. ಅಲ್ಲದೆ ಮುಖ್ಯಮಂತ್ರಿ ಅವರ ಪರವಾಗಿ ನಟೇಶ್ ಕೆಲಸ ಮಾಡಿದ್ದರು ಎಂದು ಮುಡಾ ಹಗರಣದ ದೂರುದಾರ ಕೃಷ್ಣ ಆರೋಪಿಸಿದ್ದರು. ಮುಡಾ ಭೂ ಅಕ್ರಮ ಸಂಬಂಧ ನಟೇಶ್ ಮನೆ ಹಾಗೂ ಕಚೇರಿ ಮೇಲೆ ಇ.ಡಿ ದಾಳಿ ಸಹ ನಡೆಸಿತ್ತು. 

ಈ ನಡುವೆ ಸೇವಾ ಹಿರಿತನ ಆಧಾರದ ಮೇರೆಗೆ ಅವರಿಗೆ ಸರ್ಕಾರ ಮುಂಬಡ್ತಿ ನೀಡಿತ್ತು. ಭೂ ಹಗರಣದಲ್ಲಿ ಭ್ರಷ್ಟಾಚಾರದ ಕಳಂಕ ಹೊತ್ತಿದ್ದ ಅಧಿಕಾರಿಗೆ ಪದನ್ನೋತ್ತಿ ನೀಡಿಕೆ ಬಗ್ಗೆ ಕೃಷ್ಣ ಆಕ್ಷೇಪಿಸಿದ್ದರು. ಅಲ್ಲದೆ ಈ ಮುಂಬಡ್ತಿಗೆ ₹1.5 ಕೋಟಿ ಹಣವನ್ನು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ನಟೇಶ್ ನೀಡಿದ್ದಾರೆ ಎಂದು ಕೃಷ್ಣ ಗಂಭೀರ ಆರೋಪ ಮಾಡಿದ್ದರು. 

ಈ ವಿವಾದ ಹಿನ್ನಲೆಯಲ್ಲಿ ತೀವ್ರ ಅಸಮಾಧಾನಗೊಂಡಿದ್ದ ನಟೇಶ್, ತಮ್ಮ ವಿರುದ್ಧ ಆಧಾರರಹಿತ ಆರೋಪ ಮಾಡುತ್ತಿದ್ದಾರೆಂದು ಆರೋಪಿಸಿ ಸ್ನೇಹಮಯಿ ಕೃಷ್ಣ ವಿರುದ್ಧ ಸಿಸಿಬಿ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದರು. ತಮ್ಮ ಫೋಟೋ, ಧ್ವನಿ ತುಣುಕು ಹಾಗೂ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಕೃಷ್ಣ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ನಟೇಶ್ ದೂರಿನಲ್ಲಿ ಉಲ್ಲೇಖಿಸಿದ್ದರು.ಫೇಸ್‌ಬುಕ್‌ನಲ್ಲಿ ಅಪಪ್ರಚಾರ:ಲೋಕಾಯುಕ್ತ ಅಧಿಕಾರಿಗಳಿಗೆ ₹4.37 ಕೋಟಿ ನೀಡಲಾಗಿದ್ದು, ತನಗೆ ತನಿಖೆಯಲ್ಲಿ ಅನುಕೂಲ ಮಾಡಿಕೊಡುವಂತೆ ಹಣ ಕೊಡಲು ಮುಂದಾಗಿದ್ದಾಗಿ ಫೇಸ್‌ಬುಕ್‌ ಪೇಜ್‌ನಲ್ಲಿ ಸ್ನೇಹಮಯಿ ಕೃಷ್ಣ ಪೋಸ್ಟ್ ಮಾಡಿದ್ದರು. ತಮ್ಮ ಸಂಬಂಧಿಕರ ವಿವಾಹದ ಫೋಟೋವನ್ನು ಅನುಮತಿ ಇಲ್ಲದೆ ಬಳಕೆ ಮಾಡಿದ್ದಾರೆ. ತಮ್ಮನ್ನು ಪದೇ ಪದೇ ಭ್ರಷ್ಟ ಅಧಿಕಾರಿ ಎಂದು ಸುಳ್ಳು ಆರೋಪ ಮಾಡಿ ಪೋಸ್ಟ್ ಹಾಕುತ್ತಿದ್ದರು ಎಂದು ನಟೇಶ್ ಆರೋಪಿಸಿದ್ದರು. ಈ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಿ ಆರೋಪಿ ಕೃಷ್ಣನನ್ನು ಸೈಬರ್ ಕ್ರೈಂ ಪೊಲೀಸರು ವಿಚಾರಣೆ ನಡೆಸಿದ್ದಾರೆ. 

ಕೃಷ್ಣ ಮನೆಯಲ್ಲಿ ತಪಾಸಣೆ:

ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಅವರ ಮೈಸೂರಿನ ಮನೆ ಮತ್ತು ಕಚೇರಿಯನ್ನು ಬೆಂಗಳೂರಿನ ಸಿಸಿಬಿ ಘಟಕದ ಪೊಲೀಸರು ಶುಕ್ರವಾರ ತಪಾಸಣೆ ನಡೆಸಿ, ಕಂಪ್ಯೂಟರ್ ಹಾರ್ಡ್‌ ಡಿಸ್ಕ್‌, ಪೆನ್‌ ಡ್ರೈವ್‌ ಮತ್ತು ಪತ್ರ ದಾಖಲೆಗಳನ್ನು ವಶ ಪಡೆದಿದ್ದಾರೆ.

ಸಿಸಿಬಿ ಇನ್ಸ್‌ಪೆಕ್ಟರ್‌ ಪಿ.ಗೌರಿಶಂಕರ್‌ ಸೇರಿದಂತೆ 10 ಮಂದಿ ಅಧಿಕಾರಿಗಳು ಹಾಗೂ ಸಿಬ್ಬಂದಿಯಿದ್ದ ತಂಡವು ಮೈಸೂರಿನ ಗುಂಡೂರಾವ್ ನಗರ ಬಳಿಯ ಭೈರವೇಶ್ವರನಗರಕ್ಕೆ ಸರ್ಚ್‌ ವಾರಂಟ್‌ನೊಂದಿಗೆ ಆಗಮಿಸಿ, ಮನೆ ಮತ್ತು ಕಚೇರಿಯನ್ನು ತಪಾಸಣೆ ನಡೆಸಿದರು.

3 ಗಂಟೆ ಪರಿಶೀಲನೆ

ಸ್ನೇಹಮಯಿ ಕೃಷ್ಣ ಅವರ ಶಿವಕೃಪಾ ಫೈನಾನ್ಸ್‌ ಕಾರ್ಪೊರೇಷನ್ಸ್‌ ಕಚೇರಿ, ಮನೆಯಲ್ಲಿ 3 ಗಂಟೆ ಪರಿಶೀಲನೆ ನಡೆಸಿದರು. ಕಂಪ್ಯೂಟರ್‌ ಹಾರ್ಡ್‌ ಡಿಸ್ಕ್‌, ಶರ್ಟ್ ಜೇಬಿನಲ್ಲಿದ್ದ ಪೆನ್‌ ಡ್ರೈವ್‌, ದಾಖಲೆ ಪತ್ರಗಳನ್ನು ವಶಕ್ಕೆ ಪಡೆದಿದ್ದಾರೆ. ಮೈಸೂರು ತಾಲೂಕು ಬಂಡೀಪಾಳ್ಯದ ಸ್ನೇಹಮಯಿ ಕೃಷ್ಣ ತಾಯಿ ಜಯಮ್ಮ ಮನೆಗೆ ತೆರಳಿ ಪರಿಶೀಲಿಸಿದ್ದು, ಅಲ್ಲಿ ಯಾವುದೇ ದಾಖಲೆ ವಶಪಡಿಸಿಕೊಂಡಿಲ್ಲ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಮಚ್ಛೆಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅವಮಾನ
ಕೆಎಲ್‌ಇಗೆ ಅಮಿತ ಕೋರೆ ನೂತನ ಕಾರ್ಯಾಧ್ಯಕ್ಷ