ನ್ಯುಮೋನಿಯಾ ಕೊನೆಗೊಳಿಸಲು ಸಾಮಾಜಿಕ ಜಾಗೃತಿ ಅಭಿಯಾನ

KannadaprabhaNewsNetwork |  
Published : Nov 29, 2024, 01:01 AM IST
ಚಿತ್ರ : 28ಎಂಡಿಕೆ3 : ನ್ಯುಮೋನಿಯಾ ಯಶಸ್ವಿಯಾಗಿ ಕೊನೆಗೊಳಿಸಲು ಸಾಮಾಜಿಕ ಜಾಗೃತಿ ಅಭಿಯಾನ ಕಾರ್ಯಕ್ರಮ ನಡೆಯಿತು.  | Kannada Prabha

ಸಾರಾಂಶ

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ, ಆರ್.ಸಿ.ಎಚ್. ವಿಭಾಗ ಮಡಿಕೇರಿ ಮತ್ತು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಬೋಧಕ ಆಸ್ಪತ್ರೆಯ ಮಹಿಳಾ ಮತ್ತು ಮಕ್ಕಳ ವಿಭಾಗ ಆಶ್ರಯದಲ್ಲಿ ನಗರದಲ್ಲಿ ‘ನ್ಯುಮೋನಿಯಾವನ್ನು ಯಶಸ್ವಿಯಾಗಿ ಕೊನೆಗೊಳಿಸಲು ಜಿಲ್ಲಾ ಮಟ್ಟದ ಸಾಮಾಜಿಕ ಜಾಗೃತಿ ಮತ್ತು ಕ್ರಿಯಾ ಅಭಿಯಾನ’ ನಡೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ನ್ಯುಮೋನಿಯಾ ತಟಸ್ಥಗೊಳಿಸಲು ವೈದ್ಯರು, ಆರೋಗ್ಯ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರಿಗೆ ತರಬೇತಿ ನೀಡಲಾಗುತ್ತಿದೆ. ಮಗುವಿಗೆ ನ್ಯುಮೋನಿಯಾ ಬಾರದ ಹಾಗೆ 6 ತಿಂಗಳವರೆಗೆ ವಿಶೇಷ ಸ್ತನ್ಯಪಾನ ಮಾಡಿಸುವುದು. ಎದೆ ಹಾಲು ಬಿಟ್ಟು ನೀರು ಕೂಡ ಕೊಡದೇ ಇರುವುದು ಮುಖ್ಯ ಎಂದು ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಡಾ.ಮಧುಸೂಧನ್‌ ಹೇಳಿದ್ದಾರೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ, ಆರ್.ಸಿ.ಎಚ್. ವಿಭಾಗ ಮಡಿಕೇರಿ ಮತ್ತು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಬೋಧಕ ಆಸ್ಪತ್ರೆಯ ಮಹಿಳಾ ಮತ್ತು ಮಕ್ಕಳ ವಿಭಾಗ ಆಶ್ರಯದಲ್ಲಿ ನಗರದಲ್ಲಿ ನಡೆದ ‘ನ್ಯುಮೋನಿಯಾವನ್ನು ಯಶಸ್ವಿಯಾಗಿ ಕೊನೆಗೊಳಿಸಲು ಜಿಲ್ಲಾ ಮಟ್ಟದ ಸಾಮಾಜಿಕ ಜಾಗೃತಿ ಮತ್ತು ಕ್ರಿಯಾ ಅಭಿಯಾನ’ದಲ್ಲಿ ಎಸ್‌ಎಎಎನ್‌ಎಸ್ ಕಾರ್ಯಕ್ರಮ ಕುರಿತು ಅವರು ಮಾಹಿತಿ ನೀಡಿದರು.

ನ.12ರಿಂದ ಫೆ.28ರ ತನಕ ವಿಶ್ವದಾದ್ಯಂತ ವಿಶ್ವ ನ್ಯೂಮೋನಿಯಾ ದಿನ ಆಚರಿಸಲಾಗುತ್ತಿದೆ. ಎಸ್‌ಎಎಎನ್‌ಎಸ್ 3 ತಿಂಗಳ ಅರಿವು ಕಾರ್ಯಕ್ರಮವಾಗಿದೆ. ನ್ಯುಮೋನಿಯಾ ಎಂಬುದು ಬ್ಯಾಕ್ಟೀರಿಯಾ, ವೈರಸ್‌ಗಳು ಅಥವಾ ಶಿಲೀಂದ್ರಗಳಿಂದ ಉಂಟಾಗುವ ಶ್ವಾಸಕೋಶದ ಸೋಂಕು. ಈ ಸೋಂಕಿಗೆ ಪ್ರತಿರಕ್ಷಣಾ ವ್ಯವಸ್ಥೆಯ ಪ್ರತಿಕ್ರಿಯೆಯು ಶ್ವಾಸಕೋಶದ ಗಾಳಿಯ ಚೀಲಗಳು ಕೀವು ಮತ್ತು ದ್ರವಗಳಿಂದ ತುಂಬಲು ಕಾರಣವಾಗುತ್ತದೆ ಎಂದರು.

ದೇಹಕ್ಕೆ ಉಸಿರಾಟ ಎಷ್ಟು ಮುಖ್ಯ ಎಂಬುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ. ನ್ಯುಮೋನಿಯಾವು ಉಸಿರಾಟದಿಂದ, ರೋಗನಿರೋಧಕ ಶಕ್ತಿ ಕಡಿಮೆ ಇದ್ದಲ್ಲಿ, ಮತ್ತು ಸ್ವಚ್ಛತೆ ಸರಿಯಿಲ್ಲದಿದ್ದರೆ ಹರಡುತ್ತದೆ. ಮಕ್ಕಳ ಮರಣಕ್ಕೆ ಮುಖ್ಯ ಕಾರಣ ನ್ಯೂಮೋನಿಯ. ಇದನ್ನು ತಡೆಯಲು ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತರು ಮತ್ತು ಪೋಷಕರ ಪಾತ್ರ ಬಹಳ ಮುಖ್ಯವಾಗಿದೆ ಎಂದರು.

ಆರೋಗ್ಯ ಇಲಾಖೆಯ ಸಿಬ್ಬಂದಿ ಮನೆ ಭೇಟಿ ಸಂದರ್ಭದಲ್ಲಿ ನ್ಯೂಮೋನಿಯಾಕ್ಕೆ ಸಂಬಂಧಪಟ್ಟಂತೆ ಪ್ರಶ್ನೆಗಳನ್ನು ಮಾಡಿ ಕಾಯಿಲೆಯ ಲಕ್ಷಣಗಳಿದ್ದ ಪಕ್ಷದಲ್ಲಿ ಅಮೋಕ್ಸಿಸಿಲಿನ್ ಮಾತ್ರೆಗಳನ್ನು ನೀಡಿ ಆಸ್ಪತ್ರೆಗೆ ಕಳುಹಿಸಬೇಕು. ಆರೋಗ್ಯ ಇಲಾಖೆಯಲ್ಲಿ ನ್ಯುಮೋನಿಯಾ ತಡೆಗಟ್ಟಲು ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಡಿಯಲ್ಲಿ ಪೆಂಟಾವಲೆಂಟ್ ಮತ್ತು ಪಿ.ಸಿ.ವಿ ಚುಚ್ಚುಮದ್ದುಗಳನ್ನು ನೀಡಲಾಗುತ್ತಿದೆ ಎಂದರು.

ನಾಟಿ ಔಷಧಿ ಕೊಡಬಾರದು. ಏನಾದರೂ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ವೈದ್ಯರ ಸಲಹೆ ತಕ್ಷಣ ಪಡೆಯುವುದು ಸೂಕ್ತ ಎಂದು ತಿಳಿಸಿದರು.

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ಬೋಧಕ ಆಸ್ಪತ್ರೆಯ ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಪುರುಷೋತ್ತಮ್ ಮಾತನಾಡಿ ವಯಸ್ಸಿಗನುಗುಣವಾಗಿ ಮಕ್ಕಳಿಗೆ ನೀಡುವ ಸಾರ್ವತ್ರಿಕ ಲಸಿಕೆ ಕೊಡಿಸಬೇಕು. ಮನೆಯಲ್ಲೇ ಮಗುವಿಗೆ ನ್ಯುಮೋನಿಯಾ ಬಾರದ ಹಾಗೆ ನೋಡಿಕೊಳ್ಳುವುದು, ಸ್ವಚ್ಛತೆಗೆ ಆಧ್ಯತೆ ನೀಡಬೇಕು ಎಂದರು.

ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಮಂಜುಳಾ ಮಾತನಾಡಿ, ಎಲ್ಲಾ ಸರ್ಕಾರಿ ಸಂಸ್ಥೆಗಳಲ್ಲಿ ನ್ಯುಮೋನಿಯಾ ರೋಗಲಕ್ಷಣಗಳು ಗುರುತಿಸುವಿಕೆ, ಚಿಕಿತ್ಸೆ ಸಮರ್ಪಕವಾಗಿ ನಡೆಯುತ್ತಿದೆ. ಗ್ರಾಮ ಮಟ್ಟದಲ್ಲಿ ಆರೋಗ್ಯ ಇಲಾಖೆಯ ವತಿಯಿಂದ ನ್ಯುಮೋನಿಯಾ ತಡೆಗಟ್ಟುವುದು ಮತ್ತು ಶಿಶುಮರಣ ಕಡಿಮೆ ಮಾಡಲು ಮತ್ತು ಜಾಗ್ರತೆ ವಹಿಸುವುದು ಈ ಕಾರ್ಯಕ್ರಮದ ಉದ್ದೇಶ ಎಂದರು.

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ಬೋಧಕ ಆಸ್ಪತ್ರೆಯ ಮಕ್ಕಳ ವಿಭಾಗದ ಸಹ ಪ್ರಾಧ್ಯಾಪಕ ಡಾ.ದಿವ್ಯರಾಣಿ ಪಿಪಿಟಿ ಮೂಲಕ ನ್ಯುಮೋನಿಯಾ ಕಾರ್ಯಕ್ರಮದ ಉದ್ದೇಶದ ಬಗ್ಗೆ ವಿವರಿಸಿದರು.

ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಪುರುಷೋತ್ತಮ್, ಶುಶ್ರೂಷಕ ಅಧೀಕ್ಷಕ ವೀಣಾ, ಜಿಲ್ಲಾ ದೈಹಿಕ ಶಿಕ್ಷಣ ಅಧಿಕರಿ ಗಾಯತ್ರಿ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ದೇವರಾಜು ಮತ್ತಿತರರು ಪಾಲ್ಗೊಂಡಿದ್ದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ ಎಚ್.ಕೆ. ನಿರೂಪಿಸಿ, ಸ್ವಾಗತಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''