ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಮತ್ತೊಂದು ಆಯೋಗ ರಚಿಸಿರುವುದು ಅನಾವಶ್ಯಕ
ಸುಪ್ರೀಂ ಕೋರ್ಟಿನ ತೀರ್ಪಿನಂತೆ ಒಳ ಮೀಸಲಾತಿ ಜಾರಿ ಮಾಡುವ ನಿಟ್ಟಿನಲ್ಲಿ ಕರ್ನಾಟಕ ಸಚಿವ ಸಂಪುಟ ಕೈಗೊಂಡಿರುವ ನಿರ್ಣಯವನ್ನು ಸ್ವಾಗತಿಸುತ್ತೇವೆ. ಆದರೆ, ದತ್ತಾಂಶ ಸಂಗ್ರಹಣೆ ನೆಪವೊಡ್ಡಿ ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಮತ್ತೊಂದು ಆಯೋಗ ರಚಿಸಿರುವುದು ಅನಾವಶ್ಯಕ. ಇದು ಕಾಲಹರಣ ಮಾಡುವ ತಂತ್ರವಾಗಿದೆ ಎಂದು ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಆರೋಪಿಸಿದರು.
ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಕಾಲಹರಣ ಮಾಡದೆ ಒಳ ಮೀಸಲಾತಿಯನ್ನು ಕೂಡಲೇ ಜಾರಿಗೆ ತರಬೇಕು ಎಂದು ಗುರುವಾರ ಸುದ್ಧಿಗೋಷ್ಠಿಯಲ್ಲಿ ಒತ್ತಾಯಿಸಿದರು. ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಯ ವಿವಿಧ ಉಪ ಜಾತಿಗಳ ಜನಸಂಖ್ಯೆಗೆ ಸಂಬಂಧಪಟ್ಟ ಮಾಹಿತಿ ಹಾವನೂರು ಆಯೋಗದಿಂದ ಮೊದಲ್ಗೊಂಡು, ನ್ಯಾಯಮೂರ್ತಿ ಸದಾಶಿವ ಆಯೋಗ, ಕಾಂತರಾಜ್ ಆಯೋಗ, ನಾಗಮೋಹನ್ ದಾಸ್ ಆಯೋಗ ಹಾಗೂ ಜೆ.ಸಿ. ಮಾಧುಸ್ವಾಮಿ ಸಮಿತಿಗಳು ನೀಡಿದ ವರದಿಯಲ್ಲಿ ಲಭ್ಯವಿದೆ.ಈ ವರದಿಗಳನ್ನು ಪರಿಗಣಿಸಿ ಸಮಸ್ಯೆ ಬಗೆಹರಿಸಲು ಸಾಧ್ಯವಿತ್ತು. 30 ವರ್ಷಗಳ ಹಿಂದೆಯೇ ಒಳ ಮೀಸಲಾತಿಗೆ ಸಂಬಂಧ ಪಟ್ಟ ಸಮಸ್ಯೆಗಳು ಸರ್ಕಾರದ ಗಮನಕ್ಕೆ ಬಂದ ಕೂಡಲೇ ಅದನ್ನು ಬಗೆಹರಿಸಬಹುದಿತ್ತು. ಆದರೆ, ಈ ಸಮಸ್ಯೆಯನ್ನು ಜೀವಂತವಾಗಿ ಇಟ್ಟು, ನೂರೊಂದು ಜಾತಿಗಳ ಮಧ್ಯೆ ಅಪನಂಬಿಕೆ ಉಂಟು ಮಾಡಿ ರಾಜಕೀಯ ಲಾಭ ಪಡೆಯಲು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ಕುತಂತ್ರ ನಡೆಸಿದವು ಎಂದು ದೂರಿದರು.
ಪರಿಶಿಷ್ಟ ಜಾತಿ ಹಾಗೂ ಪಂಗಡದಂತೆ ಅತಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಪ್ರಮಾಣದಲ್ಲಿ ಅನ್ಯಾಯವಾಗಿದೆ. ಹೀಗಾಗಿ ಮೇಲ್ ಜಾತಿಗಳ ಒತ್ತಡಕ್ಕೆ ಮಣಿಯದೆ ರಾಜ್ಯ ಸರ್ಕಾರ ಕೂಡಲೇ ಕಾಂತರಾಜ ವರದಿಯನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಜಿಲ್ಲಾ ಸಂಚಾಲಕ ಚಂದ್ರಪ್ಪ, ರಾಜ್ಯ ಸಂಚಾಲಕ ತಿರುಪತಿಹಳ್ಳಿ ದೇವರಾಜು, ಪ್ರಮುಖರಾದ ರಮೇಶ್, ರೇವಣ್ಣ, ಟಿ.ಆರ್. ವಿಜಯಕುಮಾರ್ ಉಪಸ್ಥಿತರಿದ್ದರು. 28 ಕೆಸಿಕೆಎಂ 5 ಮಾರಸಂದ್ರ ಮುನಿಯಪ್ಪ