ಕನ್ನಡಪ್ರಭ ವಾರ್ತೆ ಶಹಾಪುರ
ಡಾ. ಬಾಬು ಜಗಜೀವನ್ ರಾಮ್ ಅವರು ಒಂದೇ ವರ್ಗಕ್ಕೆ ಸೀಮಿತರಾದವರಲ್ಲ. ಬಡವರು, ಶೋಷಿತರು, ದೀನದಲಿತರು ಸೇರಿದಂತೆ ಎಲ್ಲರ ಶ್ರೇಯೋಭಿವೃದ್ಧಿಗಾಗಿ ಅವಿರತವಾಗಿ ಶ್ರಮಿಸಿದ ಮಹಾನ್ ಸಮಾಜ ಸುಧಾರಕರು ಆಗಿದ್ದಾರೆ. ಅವರು ನಮ್ಮಿಂದ ಭೌತಿಕವಾಗಿ ಮರೆಯಾಗಿರಬಹುದು. ಆದರೆ ಅವರ ಆದರ್ಶ ಜೀವನ ನಮ್ಮೆಲ್ಲರಿಗೆ ಮಾರ್ಗದರ್ಶನವಾಗಿದೆ. ಎಂದು ಬಿಜೆಪಿ ನಗರ ಮಂಡಲ ಅಧ್ಯಕ್ಷ ಚಂದ್ರಶೇಖರ್ ಯಾಳಗಿ ತಿಳಿಸಿದರು.ನಗರದ ಭಾರತೀಯ ಜನತಾ ಪಾರ್ಟಿಯ ಪಕ್ಷದ ಕಾರ್ಯಾಲಯದಲ್ಲಿ ಡಾ. ಬಾಬು ಜಗಜೀವರಾಂ ಪುಣ್ಯಸ್ಮರಣೆ ಅಂಗವಾಗಿ ಡಾ. ಬಾಬು ಜಗಜೀವನ್ ರಾಮ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ಶೋಷಿತ ಸಮುದಾಯದಲ್ಲಿ ಹುಟ್ಟಿ ಸಮಾಜದ ಎಲ್ಲಾ ವರ್ಗಗಳ ಉದ್ದಾರಕ್ಕಾಗಿ ದುಡಿದ ಡಾ. ಬಾಬು ಜಗಜೀವನ್ ರಾಮ್ ಅವರ ಜೀವನ ಸಾಧನೆಗಳನ್ನು ಸ್ಮರಿಸುವುದು ಅಗತ್ಯವಾಗಿದೆ. ಅವರು ವಿದ್ಯಾರ್ಥಿಯಾಗಿದ್ದಾಗಲೇ ರಾಷ್ಟ್ರೀಯ ಚಳವಳಿಯಲ್ಲಿ ಸಕ್ರಿಯರಾಗಿದ್ದರು ಎಂದರು.
ಅವರ ಕೆಲಸ ಸ್ವಾತಂತ್ರ್ಯ ಹೋರಾಟಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಖಿನ್ನತೆಗೆ ಒಳಗಾದ ವರ್ಗಗಳ ವಿಮೋಚನೆಗಾಗಿಯೂ ಅವರು ಶ್ರಮಿಸಿದರು. 1930ರ ದಶಕದಲ್ಲಿ ಅವರು 1934ರಲ್ಲಿ ಬಿಹಾರ ಭೂಕಂಪದ ಸಂತ್ರಸ್ತರಿಗೆ ಪರಿಹಾರ ಶಿಬಿರಗಳನ್ನು ಸ್ಥಾಪಿಸುವಂತಹ ಸಾಮಾಜಿಕ ಕಾರ್ಯಗಳಲ್ಲಿ ವ್ಯಾಪಕವಾಗಿ ತೊಡಗಿಸಿಕೊಂಡಿದ್ದರು.ಅವರು ನಾಗರಿಕ ಅಸಹಕಾರ ಚಳುವಳಿ, ಉಪ್ಪಿನ ಸತ್ಯಾಗ್ರಹ ಮತ್ತು ಕ್ವಿಟ್ ಇಂಡಿಯಾ ಚಳುವಳಿಯಂತಹ ಮುಖ್ಯವಾಹಿನಿಯ ಮತ್ತು ಜನಪ್ರಿಯ ಚಳುವಳಿಗಳಲ್ಲಿ ಭಾಗವಹಿಸಿದರು. ಈ ಚಳುವಳಿಗಳಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಎರಡು ಬಾರಿ ಜೈಲು ಪಾಲಾದರು ಎಂದು ಡಾ. ಜಗಜೀವನರಾಂ ಅವರ ಕುರಿತು ವಿವರಿಸಿದರು.
ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಕರಬಸಪ್ಪ ಬಿರಾಳ, ಮೌನೇಶ ಎಎಚ್, ಬಿ.ಜೆ.ಪಿ.ಮಾಜಿ ಅಧ್ಯಕ್ಷ ದೇವಿಂದ್ರಪ್ಪ ಕೋನೆರ, ಪಕ್ಷದ ಪ್ರಮುಖರು ಶರಣು ಟೊಕಾಪೂರ, ವೆಂಕಟೇಶ ಗೌನಳ್ಳಿ, ಹುಸನಪ್ಪ ಅಜ್ಜಕೊಲ್ಲಿ, ಸಂಗಣ್ಣ ಕುಂಬಾರ, ಭೀಮರಾಯ ಕುರಿ, ಲಕ್ಷ್ಮೀಕಾಂತ ಬಿರಾಳ, ಪ್ರಭು ದೊಡ್ಡಮನಿ, ನಿಖಿಲ್, ರಮೇಶ ಕೋಲ್ಕರ್, ರಾಜು ಪಂಚಭಾವಿ, ಮಂಜುನಾಥ ಅಲಬಾನೂರ್, ಬನ್ನಪ್ಪ ಸುರಪುರಕರ್, ಕಾಂತಪ್ಪ ತಸೀಲ್ದಾರ್,ವೀರೇಶ ಪಾಟೀಲ, ವೀರೇಶ ಚುಂಗಿ, ಶಿವು, ನಾಗು ಹುಣಸಗಿ, ಭೀಮರಾಯ ಕೊಲ್ಕರ್,ಮಾನಪ್ಪ,ಓಂಪ್ರಕಾಶ್ ಭೀಮರಾಯನ ಗುಡಿ ಹಾಗೂ ಇತರ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.