ಕನ್ನಡಪ್ರಭ ವಾರ್ತೆ ಬೀಳಗಿ
ಸಾಮಾಜಿಕ ಕಾಳಜಿಯೊಂದಿಗೆ ಆರೋಗ್ಯ,ಶಿಕ್ಷಣ ಮತ್ತು ಉದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಎಂಆರ್‌ಎನ್ ನಿರಾಣಿ ಫೌಂಡೇಷನ್ ನಿಂದ ಮಾಡುತ್ತಿರುವ ಕೆಲಸಗಳು ಆರೋಗ್ಯವಂತ ಸಮಾಜ ನಿರ್ಮಾಣದ ಕಡೆಗೆ ಸಾಗುತ್ತಿದೆ ಎಂದು ರಾಜ್ಯಸಭಾ ಸದಸ್ಯ ನಾರಾಯಸಾ ಬಾಂಡಗೆ ತಿಳಿಸಿದರು.ಬೀಳಗಿ ಕ್ರಾಸ್ ಬಳಿಯ ಗೃಹ ಕಚೇರಿಯಲ್ಲಿ ಮಾಜಿ ಸಚಿವ, ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಡಾ.ಮುರುಗೇಶ ನಿರಾಣಿ ಅವರ ೫೯ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಎಂ.ಎಂ.ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ದೃಷ್ಠಿ ಕೇಂದ್ರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ವಿವಿಧ ಬಗೆಯ ರೋಗಗಳಿಗೆ ಸೂಕ್ತ ಚಿಕಿತ್ಸೆ ಸಿಗಬೇಕು ಎಂದು ಹಲವಾರು ಶಿಬಿರಗಳನ್ನು ಹಮ್ಮಿಕೊಂಡು ಜನಪರ ಕಾರ್ಯ ಮಾಡುತ್ತಿರುವುದು ಬಾಗಲಕೋಟೆ ಜಿಲ್ಲೆಯ ಹೆಮ್ಮೆಯ ವಿಷಯ. ಜಿಲ್ಲೆಯ ಹಲವಾರು ಭಾಗಗಳಲ್ಲಿ ನಿರಂತರವಾಗಿ ಆರೋಗ್ಯ ಶಿಬಿರ ಹಮ್ಮಿಕೊಂಡು ಎಲ್ಲರಿಗೂ ಉಚಿತ ಚಿಕಿತ್ಸೆ ನೀಡುವುದರ ಜತೆಗೆ ರೋಗ ವಾಸಿಯಾಗುವರಿಗೂ ರೋಗಿಯೊಂದಿಗೆ ಸಂಪರ್ಕಿಸಿ ಉತ್ತಮ ವಾತಾವರಣ ನಿರ್ಮಾಣ ಮಾಡಲಾಗುತ್ತಿದೆ. ಇಂತಹ ಶಿಬಿರಗಳ ಉಪಯೋಗವನ್ನು ಎಲ್ಲರು ಪಡೆದು ಆರೋಗ್ಯವಂತರಾಗಿಬೇಕು ಎಂದರು.ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಮಾತನಾಡಿ, ಎಂ.ಎಂ.ಜೋಶಿ ಅವರು ನೇತ್ರ ಚಿಕಿತ್ಸೆಗೆ ಬೇಕಾಗುವ ಎಲ್ಲ ರೀತಿಯ ಅನುಕೂಲ ಮಾಡುವುದರ ಜೊತೆಗೆ ಎಂ.ಆರ್.ಎನ್ ನಿರಾಣಿ ಫೌಂಡೇಷನ್ ಮಾಡುವ ಪ್ರತಿ ಆರೋಗ್ಯಕರ ಕೆಲಸಕ್ಕೆ ಬೆಂಬಲಿಸುತ್ತ ಬಂದಿದ್ದಾರೆ. ಈಗಾಗಲೇ ಬೀಳಗಿ ತಾಲೂಕಿನಲ್ಲಿ ಸಾವಿರಾರು ಜನರಿಗೆ ನೇತ್ರಶಸ್ತ್ರ ಚಿಕಿತ್ಸೆಯನ್ನು ಉಚಿತವಾಗಿ ಮಾಡಿದ್ದಾರೆ. ಅಲ್ಲದೆ, ದೃಷ್ಠಿ ಕೇಂದ್ರ ಸ್ಥಾಪನೆ ಮಾಡಿ ತಾಲೂಕಿನ ಪ್ರತಿ ಮನೆಗೂ ವೈದ್ಯರು ತೆರಳಿ ನೇತ್ರದ ತೊಂದರೆ ಇರುವವರನ್ನು ಗುರುತಿಸಿ ಅವರಿಗೆ ಚಿಕಿತ್ಸೆ ನೀಡುವ ಕೆಲಸ ಮಾಡಲಾಗುವುದು. ಈ ನಿಟ್ಟಿನಲ್ಲಿ ದೃಷ್ಠಿ ಕೇಂದ್ರವನ್ನು ಆರಂಭಿಸಲಾಗಿದೆ ಎಂದ ಅವರು, ಮಾಜಿ ಸಚಿವ ಮುರುಗೇಶ ನಿರಾಣಿ ಅವರ ಹುಟ್ಟು ಹಬ್ಬದ ನಿಮಿತ್ಯ ನಿರಾಣಿ ಫೌಂಡೇಷನ್ ಆಶ್ರಯದಲ್ಲಿ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ ವತಿಯಿಂದ ಪಟ್ಟಣದ ಎಂಪಿಎಸ್ ಶಾಲಾ ಆವರಣದಲ್ಲಿ ಆ.೨೭ ರಂದು ಉಚಿತ ಹ್ರದಯರೋಗ, ನರರೋಗ, ಮೂತ್ರಪಿಂಡದ ಕಲ್ಲು ಕಾಯಿಲೆಗಳ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದ್ದು, ತಾಲೂಕಿನ ಜನರು ಇದರ ಸದುಪಯೋಗ ಮಾಡಿಕೊಳ್ಳಬೇಕು. ಜತೆಗೆ ಆ.೨೬ರಂದು ಸಂಜೆ ೬ಕ್ಕೆ ಕೃಷ್ಣಾ ನದಿಯಲ್ಲಿ ಬಾಗಿನ ಅರ್ಪಿಸುವ ಕಾರ್ಯವಾಗುತ್ತಿದೆ. ಜಮಖಂಡಿಯ ಹಿಪ್ಪರಗಿ ಬಳಿಯ ಕೃಷ್ಣಾ ನದಿ ದಡದಲ್ಲಿ ಗಂಗಾ ಆರುತಿ ಮಾದರಿಯಲ್ಲಿ ಕೃಷ್ಣಾರುತಿ ಹಮ್ಮಿಕೊಳ್ಳಲಾಗಿದ್ದು, ಅನೇಕ ಗಣ್ಯಾತಿಗಣ್ಯರು,ಸಾಧು, ಸಂತರು, ಮಹಾಸ್ವಾಮಿಗಳು ಭಾಗವಹಿಸಲಿದ್ದಾರೆ. ಮಾಜಿ ಸಚಿವ ಡಾ ಮುರುಗೇಶ ನಿರಾಣಿಯವರಿಗೆ ಇನ್ನಷ್ಟು ಕೆಲಸ ಮಾಡುವಂತೆ ಶಕ್ತಿ ತುಂಬಬೇಕು ಎಂದು ಹಾರೈಸಿದರು.ಸಾನಿಧ್ಯವನ್ನು ಶ್ರೀಕಲ್ಮಠದ ಗುರುಪಾದ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿದ್ದರು, ಸಂಜೀವ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯರಾದ ಮಲ್ಲಿಕಾರ್ಜುನ ಅಂಗಡಿ, ಎಂ.ಎಂ.ಶಂಬೋಜಿ, ಬಸವರಾಜ ಉಮಚಗಿಮಠ, ಎಂ.ಭೂಸರಡ್ಡಿ, ಶಿವಪ್ಪ ಮಸೂತಿ, ವಿಠಲ ನಿಂಬಾಳಕರ, ಪಪಂ ಸದಸ್ಯ ಸಿದ್ದು ಮಾದರ, ಲಕ್ಷ್ಮಣ ದೊಡಮನಿ, ಹೊಳಬಸು ಬಾಳಾಶೆಟ್ಟಿ, ಡಾ ಗಿರೀಶ, ಡಾ.ಮಧು ಸುಶ್ಮೀತಾ, ಡಾ.ಶೃತಿ, ಮಲ್ಲಪ್ಪ ಕೋಮಾರದೇಸಾಯಿ ಸೇರಿ ಇತರರು ಇದ್ದರು.