ಹೆಣ್ಣು ಗಂಡಿಗೆ ಸಮಾನ ಅವಕಾಶ ಕೊಟ್ಟರೆ ಸಮಾಜ ಅಭಿವೃದ್ಧಿ: ಜಿಪಂ ಸಿಇಒ ಕೆ.ಆರ್.ನಂದಿನಿ

KannadaprabhaNewsNetwork | Published : Mar 19, 2025 12:35 AM

ಸಾರಾಂಶ

ಹೆಣ್ಣುಮಕ್ಕಳು ಸಹ ಸಮಾಜದಲ್ಲಿ ಒಳ್ಳೆಯ ಅವಕಾಶಗಳನ್ನು ಕಲ್ಪಿಸಿಕೊಳ್ಳಬೇಕು. ಸಿಕ್ಕ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಯಶಸ್ಸು ಸಾಧಿಸಬೇಕು .

ಕನ್ನಡಪ್ರಭ ವಾರ್ತೆ ಪಾಂಡವಪುರ

ಹೆಣ್ಣು- ಗಂಡು ಎಂಬ ಭೇದವಿಲ್ಲದೆ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿಕೊಟ್ಟರೆ ಸಮಾಜ ಸರ್ವತೋಮುಖವಾಗಿ ಅಭಿವೃದ್ಧಿ ಹೊಂದಲಿದೆ ಎಂದು ಜಿಪಂ ಸಿಇಒ ಕೆ.ಆರ್.ನಂದಿನಿ ಹೇಳಿದರು.

ಪಟ್ಟಣದ ವಿಜಯ ಮಹಾವಿದ್ಯಾಲಯದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ,

ಹೆಣ್ಣು- ಗಂಡು ಎಂಬ ತಾರತಮ್ಯ ಇಲ್ಲದೆ ಜತೆಯಾಗಿ ಹೋದರೆ ಹೆಣ್ಣು ಮಕ್ಕಳ ದಿನಾಚರಣೆ ಮಾಡುವ ಅವಶ್ಯಕತೆ ಇರುವುದಿಲ್ಲ ಎಂದರು.

ಈ ಹಿಂದೆ ಹೆಣ್ಣುಮಕ್ಕಳು ಮೂಲ ಸೌಕರ್ಯಕ್ಕಾಗಿ ಹೋರಾಟ ಮಾಡುವಂತಹ ಸ್ಥಿತಿ ಇತ್ತು. ಈಗ ಹಂತಹಂತವಾಗಿ ಬದಲಾವಣೆಯಾಗುತ್ತಿದೆ. ನಮ್ಮ ತಾಯಿ, ಅಜ್ಜಿ, ಮುತ್ತಜ್ಜಿ ಅವರ ಕಾಲದಲ್ಲಿದ್ದ ವ್ಯವಸ್ಥೆ ಹೀಗಿಲ್ಲ. ಮುಂದೆ ಇನ್ನಷ್ಟು ಬದಲಾವಣೆಯಾಗಲಿದೆ ಎಂದರು.

ಒಬ್ಬ ಯಶಸ್ವಿ ಮಹಿಳೆಯ ಹಿಂದೆ ತಂದೆ, ಸಹೋದರ, ಗಂಡನ ರೂಪದಲ್ಲಿ ಒಬ್ಬ ಪುರುಷ ಇದ್ದೇ ಇರುತ್ತಾನೆ. ಇತ್ತೀಚಿನ ದಿನಗಳಲ್ಲಿ ಹೆಣ್ಣು ಎಲ್ಲಾ ಕ್ಷೇತ್ರದಲ್ಲೂ ತಮ್ಮ ಪ್ರತಿಭೆ ತೋರ್ಪಡಿಸುವ ಮೂಲಕ ಯಶಸ್ಸು ಕಾಣುತ್ತಿದ್ದಾಳೆ ಎಂದು ತಿಳಿಸಿದರು.

ಹೆಣ್ಣುಮಕ್ಕಳು ಸಹ ಸಮಾಜದಲ್ಲಿ ಒಳ್ಳೆಯ ಅವಕಾಶಗಳನ್ನು ಕಲ್ಪಿಸಿಕೊಳ್ಳಬೇಕು. ಸಿಕ್ಕ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಯಶಸ್ಸು ಸಾಧಿಸಬೇಕು ಎಂದು ಹೇಳಿದರು.

ಸಂಸ್ಥೆ ಗೌರವ ಕಾರ್ಯದರ್ಶಿ ಕೆ.ವಿ.ಬಸವರಾಜು ಮಾತನಾಡಿ, ಹೆಣ್ಣು ಮಕ್ಕಳು ಸಾಧಕ ಮಹಿಳೆಯರನ್ನು ಮಾದರಿಯಾಗಿ ಸ್ವೀಕರಿಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ವಿದ್ಯಾ ಪ್ರಚಾರ ಸಂಘದಲ್ಲಿ ಐಎಎಸ್ ಕೋಚಿಂಗ್ ಸೆಂಟರ್ ಆರಂಭಿಸಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.

ಇದೇವೇಳೆ ಸಿಇಒ ಕೆ.ಆರ್.ನಂದಿನಿ ಅವರನ್ನು ಸಂಸ್ಥೆ ವತಿಯಿಂದ ಅಭಿನಂಧಿಸಲಾಯಿತು. ತಾಪಂ ಇಒ ಲೋಕೇಶ್‌ಮೂರ್ತಿ, ವಿದ್ಯಾ ಪ್ರಚಾರ ಸಂಘದ ಖಜಾಂಚಿ ಎನ್.ರಾಮೇಗೌಡ, ಸಹಕಾರ್ಯದರ್ಶಿ ಗೋಪಾಲಸ್ವಾಮಿ, ನಿರ್ದೇಶಕರಾದ ಲಿಂಗರಾಜು(ಗುಣ), ಸೋಮೇಗೌಡ, ಚಿಕ್ಕಮರಳಿ ಚಂದ್ರಶೇಖರ್, ಪ್ರಾಂಶುಪಾಲರಾದ ಡಾ.ಎನ್.ಕೆ.ವೆಂಕಟೇಗೌಡ, ಕೃಷ್ಣಮೂರ್ತಿ, ಉಪನ್ಯಾಸಕರಾದ ಸೋಮಶೇಖರ್, ಅಶಾ, ಮದುಸೂದನ್, ಭಾರತಿ, ಲತಾ, ಸುಧಾ, ಸೇರಿದಂತೆ ಶಿಕ್ಷಕರು, ಸಿಬ್ಬಂದಿ ಇದ್ದರು.

Share this article