ಕಾಂಗ್ರೆಸ್‌ನಿಂದ ಸಾಮಾಜಿಕ ನ್ಯಾಯ ಮರೀಚಿಕೆ

KannadaprabhaNewsNetwork |  
Published : Jul 28, 2026, 01:15 AM IST
ಚಿತ್ರದುರ್ಗ ಮೂರನೇ ಪುಟದ ಲೀಡ್     | Kannada Prabha

ಸಾರಾಂಶ

ಚಳ್ಳಕೆರೆ ನಗರದ ಗುರುರಾಘವೇಂದ್ರ ಕಲ್ಯಾಣಮಂಟಪದಲ್ಲಿ ಬಿಜೆಪಿ ಎಸ್ಟಿ ಮೋರ್ಚಾ ಹಮ್ಮಿಕೊಂಡಿದ್ದ ಶೇ.7ರ ಮೀಸಲಾತಿ-ಸಾಮಾಜಿಕ ನ್ಯಾಯಕ್ಕಾಗಿ ಜಾಗೃತಿ ಅಂದೋಲನವನ್ನು ಮಾಜಿ ಸಚಿವ ಬಿ.ಶ್ರೀರಾಮುಲು ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಕಾಂಗ್ರೆಸ್ ನಿಂದ ಸಾಮಾಜಿಕ ನ್ಯಾಯ ನಿರೀಕ್ಷಿಸುವುದು ಮರೀಚಿಕೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದರು.

ನಗರದ ಗುರುರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಸೋಮವಾರ ಬಿಜೆಪಿ ಎಸ್ಟಿ ಮೋರ್ಚಾ ಹಮ್ಮಿಕೊಂಡಿದ್ದ ಶೇ.7ರ ಮೀಸಲಾತಿ-ಸಾಮಾಜಿಕ ನ್ಯಾಯಕ್ಕಾಗಿ ಜಾಗೃತಿ ಅಂದೋಲನ ಉದ್ಘಾಟಿಸಿ ಮಾತನಾಡಿದ ಅವರು ರಾಜ್ಯದಲ್ಲಿ ನಾಯಕ ಸಮುದಾಯ ಮುಂದಿನ ದಿನಗಳಲ್ಲಿ ಮೀಸಲಾತಿಗಾಗಿ ಬೀದಿಗಿಳಿದು ಹೋರಾಟ ಮಾಡುವ ಪರಿಸ್ಥಿತಿ ಬಂದಿದೆ. ನಮಗಲ್ಲದಿದ್ದರೂ ನಮ್ಮ ಮುಂದಿನ ಪೀಳಿಗೆಗಾಗಿ ಹೋರಾಟ ಅನಿವಾರ್ಯವಾಗಿದೆ. ಆದ್ದರಿಂದ ಯುವ ಸಮುದಾಯ ಒಗ್ಗಟ್ಟಿನಿಂದ ಮುನ್ನುಗ್ಗಬೇಕಿದೆ ಎಂದರು.

ರಾಜಕೀಯದಲ್ಲಿರುವ ನಾಯಕ ಸಮುದಾಯದ ಮುಖಂಡರು ಈ ಕುರಿತು ಆಲೋಚಿಸಬೇಕಿದೆ. ನಮ್ಮ ಮುಂದಿನ ಪೀಳಿಗೆ ನಮಗೆ ಶಾಪ ಹಾಕಬಾರದು. ಅವರಿಗೆ ಒಳಿತಾಗಲು ನಾವೆಲ್ಲಾ ಶ್ರಮಿಸಬೇಕಿದೆ. ಅನೇಕ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕ ಪ್ರಕ್ರಿಯೆಗೆ ಪ್ರಕಟಣೆ ಹೊರಡಿಸಲಾಗಿದೆ. ಶೇ.7ರಷ್ಟು ಮೀಸಲಾತಿ ಇದ್ದಿದ್ದರೆ ಸಮುದಾಯದ ಯುವ ಪೀಳಿಗೆಗೆ ಹೆಚ್ಚು ಅವಕಾಶಗಳು ಸಿಗುತ್ತಿದ್ದವು. ಈ ಸರ್ಕಾರ ವಾಲ್ಮೀಕಿ ನಾಯಕ ಜನಾಂಗಕ್ಕೆ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಅಧಿಕ ಪ್ರಮಾಣದಲ್ಲಿರುವ ನಾಯಕ ಸಮಾಜಕ್ಕೆ ಸಾಮಾಜಿಕ ನ್ಯಾಯ ಎಂಬುದು ಕಾಂಗ್ರೆಸ್ ಆಡಳಿತದಲ್ಲಿ ಮರೀಚಿಕೆಯಾಗಿದೆ. ಸಂವಿಧಾನ ಬದ್ಧವಾಗಿ ಬಂದ ಹಕ್ಕನ್ನು ಪಡೆಯಲು ಜನಾಂಗ ಯತ್ನಿಸಿದರೆ, ಸರ್ಕಾರ ಅದನ್ನೂ ನೀಡದೆ ವಂಚಿಸುವ ಕೆಲಸ ಮಾಡುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.

ಪ್ರಸ್ತುತ ರಾಜ್ಯ ಸರ್ಕಾರ ಎಲ್ಲಾ ವಿಭಾಗದಲ್ಲೂ ಹಿನ್ನೆಡೆ ಅನುಭವಿಸಿದೆ. ಸರ್ಕಾರದಲ್ಲಿ ಅಭಿವೃದ್ದಿ ಎಂಬುದು ನಗಣ್ಯವಾಗಿದೆ. ಜನಸಾಮಾನ್ಯರಿಗೆ ಸಿಗಬೇಕಾದ ಯಾವುದೇ ಸೌಲಭ್ಯ ದೊರೆಯುತ್ತಿಲ್ಲ. ಸರ್ಕಾರಿ ಕಚೇರಿಯಲ್ಲಿ ಕೆಲಸ, ಕಾರ್ಯಗಳಿಗೆ ತೆರಳಿದರೆ ಅಧಿಕಾರಿಗಳು ಕೇಳಿದಷ್ಟು ಹಣವನ್ನು ನೀಡಿ ಕೆಲಸ ಮಾಡಿಸಿಕೊಳ್ಳುವ ಪರಿಸ್ಥಿತಿ ಉಂಟಾಗಿದೆ. ಯಾವುದೇ ಸಚಿವ, ಶಾಸಕ ಜನರಪರವಾಗಿ ಧ್ವನಿ ಎತ್ತುತ್ತಿಲ್ಲ. ಕಳೆದ ಎರಡು ತಿಂಗಳಿನಿಂದ ರಾಜ್ಯದ ಎಲ್ಲಾ ಶಾಸಕರು ಸಚಿವ ಸ್ಥಾನಕ್ಕಾಗಿ ಅಲೆದಾಡುತ್ತಾರೆ ವಿನಃ ಜನಸಾಮಾನ್ಯರ ಕಷ್ಟ, ಸುಖ ವಿಚಾರಿಸುವ ಗೋಜಿಗೆ ಹೋಗಿಲ್ಲ. ಕಾಂಗ್ರೆಸ್ ಪಕ್ಷದ ಶಾಸಕರಿಗೆ ಅಧಿಕಾರ ಆಸೆಯ ಅಮಲೇರಿದೆ ಎಂದು ವ್ಯಂಗ್ಯವಾಡಿದರು.

ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು ಮಾತನಾಡಿ, ರಾಜ್ಯ ಸರ್ಕಾರ ನಾಯಕ ಜನಾಂಗದ ಕಲ್ಯಾಣಕ್ಕಾಗಿ ಯಾವುದೇ ಕಾರ್ಯಕ್ರಮ ರೂಪಿಸಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವಧಿಯಲ್ಲಿ ಸಚಿವರಾಗಿದ್ದ ನಾಯಕ ಜನಾಂಗದ ಬಿ.ನಾಗೇಂದ್ರ ವಾಲ್ಮೀಕಿ ಅಭಿವೃದ್ದಿ ನಿಗಮದ ಕೋಟ್ಯಂತರ ರೂಪಾಯಿ ಹಣವನ್ನು ದೋಚಿ ಚುನಾವಣೆ ಮಾಡಿದ್ದಾರೆ. ಆದರೆ, ಈ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿರುವ ನಾಯಕ ಜನಾಂಗದ ಸಚಿವರು, ಶಾಸಕರು ಮಾತನಾಡುತ್ತಿಲ್ಲ. ಇಂತಹವರಿಂದ ಜನಾಂಗದ ಅಭಿವೃದ್ದಿ ಹೇಗೆ ಸಾಧ್ಯ. ರಾಜ್ಯದ ವಾಲ್ಮೀಕಿ ಜನಾಂಗಕ್ಕೆ ಆತ್ಮಸ್ಥೈರ್ಯ ತುಂಬಲು ವಾಲ್ಮೀಕಿ ಗುರು ಪೀಠದ ಪ್ರಸನ್ನಾನಂದಸ್ವಾಮೀಜಿ ಪಾದಯಾತ್ರೆಯ ಮೂಲಕ ಮೀಸಲಾತಿಗಾಗಿ ಹೋರಾಟ ನಡೆಸಿದರು. ಆದರೂ ಸರ್ಕಾರ ಈ ಜನಾಂಗಕ್ಕೆ ನ್ಯಾಯವನ್ನು ನೀಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.

ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್, ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರಪ್ಪ, ಸಿದ್ದರಾಜು, ಶ್ರೀನಿವಾಸ್‍ ದಾಸಕರಿಯಪ್ಪ, ಮಾಜಿ ಸಂಸದ ಪಿ.ವಿ.ನಾಯಕ, ವಾಲ್ಮೀಕಿ ಪೀಠದ ಧರ್ಮದರ್ಶಿ ಅಣ್ಣಪ್ಪನಾಯಕ, ರಾಜ್ಯ ಎಸ್ಟಿಮೋರ್ಚಾ ಕಾರ್ಯದರ್ಶಿ ಮಹಂತೇಶ್‍ ನಾಯಕ ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ರಾಜ್ಯ ಎಸ್ಟಿಮೋರ್ಚಾ ಉಪಾಧ್ಯಕ್ಷ ಅನಿಲ್‍ಕುಮಾರ್, ರಾಜ್ಯಕಾರ್ಯಕಾರಿ ಸಮಿತಿ ಸದಸ್ಯ ಬಾಳೆಮಂಡಿರಾಮದಾಸ್, ಬಿಜೆಪಿ ಮುಖಂಡರಾದ ಪಾಪೇಶ್‍ನಾಯಕ, ಜೆ.ಪಿ.ಜಯಪಾಲಯ್ಯ, ಆರ್.ಪಾಲಯ್ಯ, ಮಂಡಲಾಧ್ಯಕ್ಷ ಬಿ.ಎಂ.ಸುರೇಶ್ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂಗನವಾಡಿ ಕಾರ್ಯಕರ್ತೆ ನೇಮಿಸಿಸಲು ಪೋಷಕರ ಒತ್ತಾಯ
೩೦-೩೧ ರಂದು ವಿಸ್ಮಯ ಕೀಟ ಪ್ರಪಂಚ ಪ್ರದರ್ಶನ