ಬಳ್ಳಾರಿ: ಕನ್ನಡದ ಕ್ರಿಯಾಶೀಲ ಬರಹಗಾರರು ಹಾಗೂ ವಿಮರ್ಶಾತ್ಮಕರನ್ನು ಒಂದೆಡೆ ಸೇರಿಸಿ ಸಾಹಿತ್ಯ ನೆಲೆಯಲ್ಲಿ ಚರ್ಚಿಸುವ ಮೂಲಕ ಪೂರಕ ಚಿಂತನೆಗೆ ಹಚ್ಚುವ ಆಶಯದಿಂದ ನ.8, 9ರಂದು ಬೆಂಗಳೂರಿನ ಅರಮನೆ ರಸ್ತೆಯಲ್ಲಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಆವರಣದಲ್ಲಿ ಸಮಾಜಮುಖಿ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜಮುಖಿ ಪತ್ರಿಕೆ ಬಳಗದ ಎಸ್.ಮಂಜುನಾಥ್ ತಿಳಿಸಿದರು.
ಸಮ್ಮೇಳನವನ್ನು ಹಿರಿಯ ಲೇಖಕರಾದ ಹಂಪನಾ, ಬರಗೂರು ರಾಮಚಂದ್ರಪ್ಪ, ಎಚ್.ಎಸ್.ಶಿವಪ್ರಕಾಶ್ ಉದ್ಘಾಟಿಸಲಿದ್ದಾರೆ. ಸಮಾರೋಪದಲ್ಲಿ ಚಿಂತಕರಾದ ಜಿ.ರಾಮಕೃಷ್ಣ, ಲೋಹಿಯಾ ಚೆನ್ನಬಸವಣ್ಣ, ಜಯಪ್ರಕಾಶ ಗೌಡ, ರವಿಕಾಂತೇಗೌಡ, ಎಸ್.ಜಿ. ಸಿದ್ದರಾಮಯ್ಯ ಪಾಲ್ಗೊಳ್ಳುವರು.
ಸಮ್ಮೇಳನ ನೋಂದಣಿಗೆ ₹300 ನಿಗದಿಗೊಳಿಸಲಾಗಿದೆ. ಬೆಂಗಳೂರು ಹೊರತುಪಡಿಸಿ ಇತರೆ ಊರುಗಳಿಂದ ಬರುವವರು ನೋಂದಣಿ ವೇಳೆ ಹೆಚ್ಚುವರಿಯಾಗಿ ₹1 ಸಾವಿರ ನೀಡಿ ಎರಡು ದಿನಗಳ ವಸತಿ ಸೌಕರ್ಯ ಪಡೆಯಬಹುದು. ವಿದ್ಯಾರ್ಥಿಗಳಿಗೆ ನೋಂದಣಿ ಶುಲ್ಕವನ್ನು ₹200 ಹಾಗೂ ವಸತಿ ಸೌಕರ್ಯಕ್ಕೆ ₹800 ನಿಗದಿಗೊಳಿಸಲಾಗಿದೆ ಎಂದರು. ಸಮಾಜಮುಖಿ ಬಳಗದ ಮರುಳುಸಿದ್ದ, ಶುಭಾ ಅರಸ್, ಡಾ.ಅರವಿಂದ ಪಾಟೀಲ್ ಸುದ್ದಿಗೋಷ್ಠಿಯಲ್ಲಿದ್ದರು.