ಸಾಮಾಜಿಕ ಜಾಲತಾಣಗಳು ಮಕ್ಕಳಿಗೆ ಮಾರಕ: ಗುರುಬಸವ ಶ್ರೀ

KannadaprabhaNewsNetwork | Published : Dec 7, 2024 12:31 AM

ಸಾರಾಂಶ

ಸಾಮಾಜಿಕ ಜಾಲತಾಣಗಳು ಮಕ್ಕಳಿಗೆ ಮಾರಕವಾಗಿದ್ದು, ಕ್ರಿಯಾತ್ಮಕ ಚಟುವಟಿಕೆಗಳಿಂದ ಮಕ್ಕಳು ದೂರವಾಗುತ್ತಿದ್ದಾರೆ ಎಂದು ಪಾಂಡೋಮಟ್ಟಿ ವಿರಕ್ತ ಮಠದ ಶ್ರೀ ಡಾ. ಗುರುಬಸವ ಸ್ವಾಮೀಜಿ ಚನ್ನಗಿರಿಯಲ್ಲಿ ನುಡಿದಿದ್ದಾರೆ.

- "ನಾನು ವಚನಕಾರನಾದರೆ " ಭಾಷಣ ಸ್ಫರ್ಧೆ ಸಮಾರಂಭ - - - ಕನ್ನಡಪ್ರಭ ವಾರ್ತೆ ಚನ್ನಗಿರಿ

ಸಾಮಾಜಿಕ ಜಾಲತಾಣಗಳು ಮಕ್ಕಳಿಗೆ ಮಾರಕವಾಗಿದ್ದು, ಕ್ರಿಯಾತ್ಮಕ ಚಟುವಟಿಕೆಗಳಿಂದ ಮಕ್ಕಳು ದೂರವಾಗುತ್ತಿದ್ದಾರೆ ಎಂದು ಪಾಂಡೋಮಟ್ಟಿ ವಿರಕ್ತ ಮಠದ ಶ್ರೀ ಡಾ. ಗುರುಬಸವ ಸ್ವಾಮೀಜಿ ನುಡಿದರು.

ಗುರುವಾರ ಪಟ್ಟಣದ ಶ್ರೀ ಗುರುಬಸವ ಇಂಟರ್ ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ತಾಲೂಕು ಮಕ್ಕಳ ಸಾಹಿತ್ಯ ಪರಿಷತ್ತು ವತಿಯಿಂದ ಏರ್ಪಡಿಸಿದ್ದ ನಾನು ವಚನಕಾರನಾದರೆ ಎಂಬ ವಿಚಾರವಾಗಿ ನಡೆಸಿದ ಭಾಷಣ ಸ್ಫರ್ಧೆ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಮನೆಯಲ್ಲಿ ಮಕ್ಕಳು ಮೊಬೈಲ್‌ ನೋಡೋದರಲ್ಲಿಯೇ ಹೆಚ್ಚಿನ ಕಾಲ ಕಳೆಯುತ್ತಿದ್ದಾರೆ. ಅಲ್ಲದೇ, ಇದು ಮಿತಿ ಮೀರಿದ ಚಟುವಟಿಕೆಯಾಗಿದೆ. ಮೊಬೈಲ್‌ನಲ್ಲಿ ಜೀವನ, ಶಿಕ್ಷಣಕ್ಕೆ ಬೇಕಾದ ಮಾಹಿತಿಗಳನ್ನು ಪಡೆಯುವ ಬದಲು ಗೇಮ್ ಮತ್ತು ಮನೋರಂಜನೆ ಮತ್ತಿನ್ನೇನೋ ನೋಡುವಲ್ಲಿ ಮಗ್ನರಾಗಿರುತ್ತಾರೆ. ಇದರಿಂದ ಮಕ್ಕಳ ಮಾನಸಿಕ ಮತ್ತು ದೈಹಿಕ ಚಟುವಟಿಕೆಗಳು ಮಂಕಾಗುವ ಜೊತೆಗೆ ಕ್ರಿಯಾಶೀಲತೆ ಕಳೆದುಕೊಳ್ಳುವರು. ಈ ಬಗ್ಗೆ ಪೋಷಕರು ಎಚ್ಚರ ವಹಿಸಬೇಕಾಗಿದೆ ಎಂದರು.

ಆಸ್ಟ್ರೇಲಿಯಾ ದೇಶದಲ್ಲಿ ಇತ್ತೀಚೆಗೆ 18 ವರ್ಷದ ಒಳಗಿನ ಮಕ್ಕಳು ಸಾಮಾಜಿಕ ತಾಲತಾಣ ಬಳಕೆಯನ್ನು ನಿಷೇಧಿಸುವ ಕಾನೂನು ಜಾರಿಗೆ ತಂದಿದೆ. ಶಿಸ್ತು-ಸಮಯ ಪಾಲನೆ ಹಾಗೂ ಜ್ಞಾನ ಸಂಪಾದನೆ ಅತಿ ಮುಖ್ಯ. ಸ್ಪರ್ಧಾತ್ಮಕ ಯುಗದಲ್ಲಿ ಸದಾ ಸಿದ್ಧರಾಗಿ ಗುರಿಯನ್ನು ಮುಟ್ಟಬೇಕು ಎಂದು ತಿಳಿಸಿದರು.

ತಾಲೂಕು ಮಕ್ಕಳ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ವಾಹಿದ್ ಮಾತನಾಡಿ, ಮಕ್ಕಳ ಪ್ರತಿಭೆಗೆ ಮನ್ನಣೆ ನೀಡಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪರಿಷತ್ತಿನ ಕಾರ್ಯಕ್ರಮ ಉತ್ತಮವಾಗಿದೆ. ಮಕ್ಕಳ ಜ್ಞಾನದ ಜೊತೆಗೆ ಸಾಹಿತ್ಯ ಪ್ರತಿಭೆ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಭಾಷಣ ಸ್ಫರ್ಧೆಯಲ್ಲಿ ಇಂಚರ ಪ್ರಥಮ ಸ್ಥಾನ, ಎನ್.ಜೆ. ಜನನಿ ದ್ವಿತೀಯ ಸ್ಥಾನ, ಬಿ. ಚಿನ್ಮಯಿ ತೃತೀಯ ಸ್ಥಾನಗಳ ಬಹುಮಾನ ಪಡೆದರು. ಮುಖ್ಯ ಅತಿಥಿಗಳಾಗಿ ಮಕ್ಕಳ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷ ಗೋಡಾಳ್ ಉಜ್ಜನಪ್ಪ, ಪ್ರಧಾನ ಕಾರ್ಯದರ್ಶಿ ಎಸ್.ಜೆ. ಕಿರಣ್, ಸೋಮಶೇಖರಪ್ಪ, ನಾಗೇಂದ್ರಪ್ಪ, ಮದನ್ ಸಾಗರ್, ನಿಜಲಿಂಗಪ್ಪ, ಶಿಕ್ಷಕರಾದಪೆ ಎಚ್.ಎಂ. ರವಿ, ಚೇತನ್ ಕುಮಾರ್, ಚಂದೇಶ್ ಉಪಸ್ಥಿತರಿದ್ದರು.

- - - -5ಕೆಸಿಎನ್‌ಜಿ1.ಜೆಪಿಜಿ:

ಭಾಷಣ ಸ್ಪರ್ಧೆ ವಿಜೇತರಿಗೆ ಪಾಂಡೋಮಟ್ಟಿ ಶ್ರೀಗಳು ಬಹುಮಾನ ವಿತರಿಸಿದರು.

Share this article