ಶಿವಾನಂದ ಗೊಂಬಿ
ಸಾಮಾಜಿಕ ಜಾಲತಾಣಗಳ ದುಷ್ಪರಿಣಾಮ ಮಕ್ಕಳ ಆಗುತ್ತಿರುವುದನ್ನು ತಡೆಯಲು ಕೇಂದ್ರ ಸರ್ಕಾರ ನಿರ್ಬಂಧ ಹೇರಲು ಕಾನೂನು ಜಾರಿಗೊಳಿಸಬೇಕು ಎಂಬ ಕೂಗು ಇದೀಗ ಜೋರಾಗಿದೆ. ಈ ನಿಟ್ಟಿನಲ್ಲಿ ಪ್ರಧಾನಿಗೆ ಹುಬ್ಬಳ್ಳಿಯ ಸಾಮಾಜಿಕ ಕಾರ್ಯಕರ್ತರೊಬ್ಬರು ಪತ್ರ ಬರೆದು ಆಗ್ರಹಿಸಿದ್ದಾರೆ. ಆಸ್ಟ್ರೇಲಿಯಾ ಮಾದರಿ ಕಾನೂನು ರೂಪಿಸಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಹುಬ್ಬಳ್ಳಿಯ ಭಾರತಿ ಎಜ್ಯುಕೇಶನ್ ಸೊಸೈಟಿಯ ಕಾರ್ಯದರ್ಶಿ ಸುಭಾಷ ಡಂಕ್ ಎಂಬುವವರು ಈ ಪತ್ರ ಬರೆದಿದ್ದಾರೆ. ಅವರು ಟೂರ್ಸ್ ಆ್ಯಂಡ್ ಟ್ರಾವೆಲ್ಸ್‌ನ ಏಜೆಂಟರು. ಭಾರತಿ ಎಜ್ಯುಕೇಶನ್ ಸೊಸೈಟಿ ಮಾಡಿಕೊಂಡು ಆ ಮೂಲಕ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡುತ್ತಿದ್ದಾರೆ. ಕೋರಿಯನ್ ಗೇಮಿಂಗ್‌ನ ಚಟದಿಂದ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಮೂವರು ಅಪ್ರಾಪ್ತ ಬಾಲಕಿಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಕ್ಕಳೇ ದೇಶದ ಆಸ್ತಿ. ಆದರೆ ಸಾಮಾಜಿಕ ಜಾಲತಾಣ, ಗೇಮಿಂಗ್ ಆ್ಯಪ್‌ಗಳಿಂದ ಮಕ್ಕಳು ಹಾದಿ ತಪ್ಪುತ್ತಿದ್ದಾರೆ. ಖಿನ್ನತೆಗೊಳಗಾಗುವುದು. ಆತ್ಮಹತ್ಯೆ ಹಾದಿ ಹಿಡಿಯುವಂತಹ ಪ್ರಸಂಗಗಳು ಹೆಚ್ಚಾಗಿವೆ. ಆದಕಾರಣ ಈ ಸಂಬಂಧ ಕೇಂದ್ರ ಸರ್ಕಾರ ತಜ್ಞರ ತಂಡ ರಚಿಸಿ ಅಧ್ಯಯನ ನಡೆಸಿ ಕಾನೂನು ರೂಪಿಸಬೇಕು ಎಂದು ಆಗ್ರಹಿಸಿದ್ದಾರೆ.ಪತ್ರದಲ್ಲಿ ಏನಿದೆ?:
ಚಿಕ್ಕ ಮಕ್ಕಳು ಸಣ್ಣ ವಯಸ್ಸಿನಲ್ಲೇ ಮಾನಸಿಕವಾಗಿ ಹಾನಿಕಾರಕ ಹಾಗೂ ಅನೈತಿಕ ವಿಷಯಗಳಿಗೆ ಒಳಗಾಗುತ್ತಿದ್ದಾರೆ. ಇದರಿಂದ ಅವರ ಮಾನಸಿಕ ಅಭಿವೃದ್ಧಿ, ಸಂಸ್ಕಾರ ಹಾಗೂ ಸಾಮಾಜಿಕ ವರ್ತನೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಈ ಕಾರಣದಿಂದಲೇ ಆಸ್ಟ್ರೇಲಿಯಾದಲ್ಲಿ 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಫೇಸ್‌ಬುಕ್, ಟಿಕ್‌ಟಾಕ್ ಇತರ ಸಾಮಾಜಿಕ ಮಾಧ್ಯಮದ ವೇದಿಕೆ ಬಳಸುವುದು ನಿರ್ಬಂಧಿಸುವ ಕಾನೂನು ಜಾರಿಗೊಳಿಸಲಾಗಿದೆ. ಬ್ರಿಟನ್ ಮತ್ತು ಫ್ರಾನ್ಸ್ ಕೂಡ ಈ ದಿಕ್ಕಿನಲ್ಲೇ ಕಠಿಣ ಕ್ರಮಕೈಗೊಳ್ಳುವ ಬಗ್ಗೆ ಚಿಂತನೆ ನಡೆಸಿವೆ.
ಹಿಂದಿಯಲ್ಲಿ ಬರೆದಿರುವ ಈ ಪತ್ರವನ್ನು ಇ-ಮೇಲ್ ಹಾಗೂ ಅಂಚೆ ಮೂಲಕ ಪ್ರಧಾನಿ ಕಚೇರಿಗೆ ರವಾನಿಸಿದ್ದಾರೆ. ಇದಕ್ಕೆ ಕೇಂದ್ರ ಸರ್ಕಾರ ಯಾವ ರೀತಿ ಸ್ಪಂದಿಸುತ್ತದೆ ಎಂಬುದನ್ನು ಕಾಯ್ದು ನೋಡಬೇಕಷ್ಟೇ!ಸಾಮಾಜಿಕ ಜಾಲತಾಣ, ಆನ್‌ಲೈನ್ ಗೇಮಿಂಗ್‌ನಿಂದ ಅಪರಾಧಗಳು ಹೆಚ್ಚಾಗುತ್ತಿವೆ. ಚಿಕ್ಕಮಕ್ಕಳು ಹಾದಿ ತಪ್ಪುತ್ತಿದ್ದಾರೆ. ಇದು ಭಾರತದ ಭವಿಷ್ಯಕ್ಕೂ ಹೊಡೆತ ಬೀಳುತ್ತಿದೆ. ಆದಕಾರಣ 18 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಸಲು ನಿರ್ಬಂಧ ಹೇರಬೇಕು. ಈ ನಿಟ್ಟಿನಲ್ಲಿ ಪ್ರಧಾನಿಗಳಿಗೆ ಪತ್ರ ಬರೆದಿದ್ದೇನೆ.