ಕೆವಿಎಸ್ ಸಭಾಂಗಣದಲ್ಲಿ ರಾಷ್ಟ್ರೀಯ ಯುವದಿನಾಚರಣೆ । ‘ಕನ್ನಡಪ್ರಭ’ದ ಅಂಶಿಕುಮಾರ್ ಸೇರಿ ಹಲವರಿಗೆ ‘ವಿವೇಕರತ್ನ’ ಪ್ರದಾನ
ಯುವಜನರಲ್ಲಿರುವ ಹೋರಾಟದ ಶಕ್ತಿಯನ್ನು ಸರಿಯಾಗಿ ಬಳಸಿಕೊಳ್ಳಲು ಸರ್ಕಾರ ಚಿಂತನೆ ನಡೆಸಬೇಕು ಎಂದು ಮಾಜಿ ಸಚಿವ ಎಚ್ .ಎಂ.ರೇವಣ್ಣ ಸಲಹೆ ನೀಡಿದರು.
ನಗರದ ಕರ್ನಾಟಕ ಸಂಘದ ಕೆವಿಎಸ್ ಸಭಾಂಗಣದಲ್ಲಿ ‘ಜನಪರ ಸಾಹಿತ್ಯ ಪರಿಷತ್’ನ ವತಿಯಿಂದ ನಡೆದ ರಾಷ್ಟ್ರೀಯ ಯುವ ದಿನಾಚರಣೆ, ವಿವೇಕ ರತ್ನ ಪ್ರಶಸ್ತಿ ಪ್ರದಾನ ಹಾಗೂ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಯುವಜನರ ಹೋರಾಟಗಳಿಂದ ಸಮಾಜದಲ್ಲಿ ಅನೇಕ ಬದಲಾವಣೆಗಳಾಗಿವೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.ಯುವಜನರಲ್ಲಿ ಹೋರಾಟದ ಮನಸ್ಸು, ಧ್ಯೇಯ ಮತ್ತು ಕಿಚ್ಚು ಹೆಚ್ಚಿರುತ್ತದೆ. ಇದರಿಂದ ಸಮಾಜದಲ್ಲಿ ಪರಿವರ್ತನೆ ಸಾಧ್ಯವಿದೆ. ಯುವಸಮೂಹವನ್ನು ಕಡೆಗಣಿಸಿ ಹಲವು ಸರ್ಕಾರಗಳು ಉರುಳಿ ಬಿದ್ದಿರುವ ಇತಿಹಾಸವಿದೆ.ಆದ್ದರಿಂದ ಯುವಶಕ್ತಿಯು ದೇಶದ ಮುಖ್ಯ ಶಕ್ತಿ ಎಂದು ಹೇಳಿದರು.
ಜಿಲ್ಲಾ ಯುವ ಬರಹಗಾರರ ಬಳಗದ ಅಧ್ಯಕ್ಷ ಟಿ. ಸತೀಶ್ ಜವರೇಗೌಡ ಮಾತನಾಡಿ, ಕನ್ನಡ ಚಟುವಟಿಕೆಗಳನ್ನು ನಿರ್ವಹಿಸಲು ಎಷ್ಟೇ ಸಂಘಟನೆಗಳಿದ್ದರೂ ಸಾಲದು. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಜನಪದ ಪ್ರಚಾರ ಮಾಡುವ ದಿಕ್ಕಿನಲ್ಲಿ, ಮತ್ತಷ್ಟು ಗಟ್ಟಿಯಾಗಿ ಕಟ್ಟುವ ನಿಟ್ಟಿನಲ್ಲಿ ಸಂಘಟನೆಗಳು ಕೆಲಸ ಮಾಡುವ ಜರೂರತ್ತಿದೆ ಎಂದರು.
ಇದೇ ವೇಳೆ ಕೊಳ್ಳೇಗಾಲದ ಮಾನಸ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ.ಎಸ್. ದತ್ತೇಶ್ ಕುಮಾರ್ ಪ್ರಶಸ್ತಿ ಪ್ರದಾನ ಮಾಡಿದರು. ಅಹಲ್ಯಾಭಾಯಿ ಹೋಳ್ಕರ್ ಮಹಿಳಾ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ಕೆ.ಆರ್. ಪ್ರಭಾವತಿ ಪ್ರಭಾವತಿ ಪ್ರತಿಭಾ ಪುರಸ್ಕಾರ ವಿತರಿಸಿದರು.
ವಿವಿಧ ಕ್ಷೇತ್ರದ ಸಾಧಕರಾದ ಡಾ.ಎಸ್. ಶಿವರಾಜಪ್ಪ (ಸಾಹಿತ್ಯ), ಅಂಶಿ ಪ್ರಸನ್ನಕುಮಾರ್ (ಮಾಧ್ಯಮ), ಎಂ. ಮಹದೇವಸ್ವಾಮಿ, ಡಾ.ಡಿ.ಕೆ. ರವಿಶಂಕರ್ (ವಿಜ್ಞಾನ), ಡಾ.ಆರ್. ನಾಗಭೂಷಣ್ (ಉನ್ನತ ಶಿಕ್ಷಣ), ಗುರುಬಸಪ್ಪ (ಆರಕ್ಷಕ), ಎನ್. ದೊಡ್ಡಯ್ಯ, ಆರ್. ನಾಗರಾಜು, ಮತ್ತು ಪಿ.ವೈ. ಶಾರದಾ (ಸಂಘಟನೆ), ಎಂ.ಸಿ. ಬೋರೇಗೌಡ, ಇ. ಕಂದವೇಲು ಮತ್ತು ಎ. ದೇವಮ್ಮಣಿ, ಡಿ.ಪಿ. ಚಿಕ್ಕಣ್ಣ (ಸಾಹಿತ್ಯ) ಅವರಿಗೆ ವಿವೇಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದ ನಡುವೆ ಮಿಮಿಕ್ರಿ ಗೋಪಿ ಅವರಿಂದ ಹಾಸ್ಯ ಕಾರಂಜಿ ನಡೆಯಿತು.
ಮಂಡ್ಯದ ಕರ್ನಾಟಕ ಸಂಘದಲ್ಲಿ ನಡೆದ ಯುವ ದಿನಾಚರಣೆಯಲ್ಲಿ ಕನ್ನಡಪ್ರಭ ದಿನಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕ ಅಂಶಿ ಪ್ರಸನ್ನಕುಮಾರ್ ಅವರಿಗೆ ವಿವೇಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.