ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಪಟ್ಟಸೋಮನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಪ್ರೊಜೆಕ್ಟರ್ ಹಾಗೂ ಅಂಗನವಾಡಿ ಕೇಂದ್ರಗಳಿಗೆ ಮಿಕ್ಸಿ ಮತ್ತು ಕುರ್ಚಿಗಳನ್ನು ಕೊಡುಗೆ ನೀಡಿದ ಸಮಾಜ ಸೇವಕ, ಖ್ಯಾತ ವಕೀಲ ಅರವಿಂದ ರಾಘವನ್ ಅವರಿಗೆ ಮೈಸೂರು ಪೇಟ ತೊಡಿಸಿ ಆತ್ಮೀಯವಾಗಿ ಅಭಿನಂದಿಸಲಾಯಿತು.ಶ್ರೀ ಕಾಲಭೈರವೇಶ್ವರ ಎಜುಕೇಶನ್ ಮತ್ತು ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರಾಗಿರುವ ಅರವಿಂದ ರಾಘವನ್ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಅಭಿವೃದ್ಧಿಗೆ ರಾಜಕಾರಣಿಗಳನ್ನು ಕಾಯುವ ಬದಲಿಗೆ ಸ್ಥಳೀಯವಾಗಿ ಗ್ರಾಮಸ್ಥರೇ ಹಣ ಸಂಗ್ರಹಿಸಿ ಹತ್ತಾರು ಕೆಲಸ ಮಾಡಿಸಬಹುದು ಎಂದರು.
ಗ್ರಾಮದಲ್ಲಿ ಪ್ರತಿಯೊಬ್ಬ ಗ್ರಾಮಸ್ಥರಿಂದ 100 ರು. ಸಂಗ್ರಹಿಸಿದರೆ ಅದಕ್ಕೆ ಡಬಲ್ ಹಣ ನೀಡುತ್ತೇನೆ. ಕಾರಣ ಅವರಿಗೂ ಶಾಲೆ ಬಗ್ಗೆ ಗೌರವ ಹಾಗೂ ಜವಾಬ್ದಾರಿ ಬರಲಿದೆ. ತಾಲೂಕಿನಲ್ಲಿ ಈವರೆಗೆ 280 ಕಂಪ್ಯೂಟರ್ ಕೊಟ್ಟಿದ್ದು, ಅದರ ನಿರ್ವಹಣೆಗೆ ಕಂಪ್ಯೂಟರ್ ಶಿಕ್ಷಕರೇ ಇಲ್ಲ. ಯಾವುದೇ ಪದಾರ್ಥವಾಗಲಿ ಬಳಕೆಯಾಗಬೇಕು. ತಾಲೂಕಿನ 112 ಶಾಲೆಗಳಿಗೆ ಅನೇಕ ಸೌಕರ್ಯಗಳನ್ನು ಒದಗಿಸಿಕೊಟ್ಟಿದ್ದೇನೆ ಎಂದು ಹೇಳಿದರು.ಜತೆಗೆ ಬಿಇಒ ಹಾಗೂ ಬಿಆರ್ ಸಿ ಕಚೇರಿಗಳಿಗೆ 2 ಲಕ್ಷ ರು. ವೆಚ್ಚದಲ್ಲಿ ಸುಣ್ಣ- ಬಣ್ಣ ಹೊಡಿಸಿಕೊಡಲಾಗಿದೆ. ಇದೀಗ ತಾಲೂಕಿನಲ್ಲಿ ಒಟ್ಟು 51 ಅಂಗನವಾಡಿಗಳಿಗೆ 15 ಲಕ್ಷ ರು. ವೆಚ್ಚದ ವಿವಿಧ ಸಾಮಗ್ರಿಗಳನ್ನು ಒದಗಿಸಿಕೊಡುವಂತೆ ಮನವಿಗಳು ಬಂದಿವೆ ಎಂದು ತಿಳಿಸಿದರು.
ಬಿಜೆಪಿ ಮುಖಂಡ ಎಚ್.ಎನ್.ಮಂಜುನಾಥ್ ಮಾತನಾಡಿ, ಪ್ರಸ್ತುತ ಕನ್ನಡ ಶಾಲೆಗೆ ಸಂದಿಗ್ದ ಪರಿಸ್ಥಿತಿ ಬಂದಿದೆ. ಕನ್ನಡ ಶಾಲೆಗಳು ಮೂಲ ಸೌಕರ್ಯಗಳಿಲ್ಲದೇ ಕ್ಷೀಣಿಸುತ್ತಿವೆ. ಅರವಿಂದ ರಾಘವನ್ ಅವರಂತಹ ಸಮಾಜ ಸೇವಕರನ್ನು ಬಳಸಿಕೊಂಡು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಗ್ರಾಮಸ್ಥರು ಮುಂದಾಗಬೇಕಿದೆ ಎಂದರು.ಈ ವೇಳೆ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಎನ್.ಕೆಂಪೇಗೌಡ, ಮಾಜಿ ಅಧ್ಯಕ್ಷರಾದ ಎಸ್.ಮಲ್ಲಿಕಾರ್ಜುನಗೌಡ, ಮರಿಸ್ವಾಮಿಗೌಡ, ಸರ್ವೇಯರ್ ಶಂಕರ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಆರ್.ಸಿ.ನಾಗೇಗೌಡ, ಮುಖ್ಯ ಶಿಕ್ಷಕಿ ಜಿ.ಮಂಜುಳಾ, ಸಹ ಶಿಕ್ಷಕರಾದ ಎಚ್.ಕೆ.ದೀಪು, ಎ.ಪಿ.ರೇಖಾ, ಎ.ಎಂ.ಸುಶೀಲಾ, ಮಂಜುನಾಥ್, ಆಶಾ, ಎಸ್ ಡಿಎಂಸಿ ಅಧ್ಯಕ್ಷ ಸತೀಶ್, ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಪ್ರಕಾಶ್, ಗ್ರಾಪಂ ಸದಸ್ಯ ಮೋಹನ್, ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ನಿರ್ದೇಶಕ ರಾಮೇಗೌಡ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.