ಸಾಮಾಜಿಕ ಅರಿವು ಇರುವ ಸಿಎಂ ಸಿದ್ದರಾಮಯ್ಯ- ಶಿವರಾಜ ತಂಗಡಗಿ

KannadaprabhaNewsNetwork |  
Published : Oct 08, 2023, 12:01 AM IST
ಕಾರಟಗಿಯಲ್ಲಿ ಶನಿವಾರ ಅಂಜುಮನ್‌ ಎಜುಕೇಷನ್‌ ಸಂಸ್ಥೆಯ ಕಚೇರಿ ಮತ್ತು ರಕ್ತದಾನ ಶಿಬಿರವನ್ನು ಸಚಿವ ಶಿವರಾಜ್ ತಂಗಡಗಿ ಉದ್ಘಾಟಿಸಿದರು. ಮಾಜಿ ಶಾಶಕರಾದ ಹಸನ್‌ಸಾಬ್ ದೋಟಿಹಾಳ ಮತ್ತು ಬಸವರಾಜ ದಢೇಸ್ಗೂರು ಇದ್ದರು. | Kannada Prabha

ಸಾರಾಂಶ

ಸಾಮಾಜಿಕ ನ್ಯಾಯದ ಅರಿವು ಇದ್ದರೆ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ. ಅಂತಹ ಪರಿಕಲ್ಪನೆ ಇರುವ ಏಕೈಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ.

ಕಾರಟಗಿ:

ಸಾಮಾಜಿಕ ನ್ಯಾಯದ ಅರಿವು ಇದ್ದರೆ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ. ಅಂತಹ ಪರಿಕಲ್ಪನೆ ಇರುವ ಏಕೈಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ.ಪಟ್ಟಣದಲ್ಲಿ ಶನಿವಾರ ಅಂಜುಮಾನ್ ಎಜುಕೇಷನ್ ಸಂಸ್ಥೆಯ ನೂತನ ಕಚೇರಿ ಹಾಗೂ ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಪ್ರತಿಯೊಂದು ಸಮಾಜದ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿ ತಿಳಿಯುವ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಹಿಂದಿನ ಆಡಳಿತಾವಧಿಯಲ್ಲಿ ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಎಚ್.ಕಾಂತರಾಜು ಅವರ ನೇತೃತ್ವದಲ್ಲಿ ಜಾತಿವಾರು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮಾಡಿಸಿದ್ದರು. ಇನ್ನು ವರದಿಯೇ ಸ್ವೀಕಾರವಾಗಿಲ್ಲ. ವರದಿಯಲ್ಲಿ ಮುಂದುವರೆದ ಸಮುದಾಯಗಳಿಗೆ ತೊಂದರೆಯಾಗಲಿದೆ ಎಂದು ವಿರೋಧ ವ್ಯಕ್ತಪಡಿಸಲಾಗುತ್ತಿದೆ. ಎಲ್ಲ ಸಮುದಾಯಗಳಲ್ಲೂ ಬಡ ವರ್ಗದವರಿದ್ದಾರೆ. ಸಮೀಕ್ಷೆಯ ವರದಿಯಿಂದ ಅಸಮಾನತೆ ತೊಡೆದು ಹಾಕಲು ಸಾಧ್ಯ. ಇಂತಹ ಸಮೀಕ್ಷೆ ಮಾಡಿಸಿರುವ ಕೀರ್ತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ ಎಂದರು.

ಶಿಕ್ಷಣ, ಸಂಘಟನೆ ಹಾಗೂ ಹೋರಾಟದಿಂದ ನಾವು ನೆಮ್ಮದಿಯಿಂದ ಇರಲು ಸಾಧ್ಯ ಎಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹೇಳಿದ್ದರು. ಇಡೀ ರಾಜ್ಯ ನೆಮ್ಮದಿಂದ ಇದೆ. ಯಾರೋ ಕೆಲವರು ಈ ನೆಮ್ಮದಿಗೆ ಹುಳಿ ಹಿಂಡುತ್ತಾರೆ. ಅಂತಹದ್ದಕ್ಕೆ ಆಸ್ಪದ ಕೊಡಬಾರದು. ಎಲ್ಲರೂ ಒಗ್ಗಟ್ಟಾಗಿ ಇರಬೇಕು ಎಂದು ಕಿವಿಮಾತು ಹೇಳಿದರು.ಸಾಧನೆ ಸಾಧ್ಯ: ಶಿಕ್ಷಣ ಇದ್ದರೆ ಮಾತ್ರ ಸಾಧನೆ ಮಾಡಲು ಸಾಧ್ಯ. ಅಂಜುಮಾನ್ ಸಂಸ್ಥೆ ಶಿಕ್ಷಣ ಸಂಸ್ಥೆ ನಿರ್ಮಾಣ ಮಾಡುತ್ತಿರುವುದು ಉತ್ತಮ ಬೆಳವಣಿಗೆ. ಶಿಕ್ಷಣ ಇರುವ ಕಡೆ ಅಭಿವೃದ್ಧಿ ಹಾಗೂ ಸಂಸ್ಕಾರ, ಸಂಸ್ಕೃತಿ ಇರಲಿದೆ. ಹಾಗಾಗಿ ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಶಿಕ್ಷಣ ನೀಡಬೇಕು. ಅಂಜುಮಾನ್ ಸಂಸ್ಥೆ ಮೇಲೆ ದೊಡ್ಡ ಜವಾಬ್ದಾರಿ ಇದೆ. ಈ ಸಂಸ್ಥೆಯ ಅಂಗ ಸಂಸ್ಥೆಗಳು ಸ್ಥಾಪನೆಯಾಗುವಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು. ಸಂಸ್ಥೆಯ ಎರಡು ಎಕರೆಗೆ ಬೇಕಿರುವ ಶೇ.೫೦ ಹಣವನ್ನು ಸರ್ಕಾರದಿಂದ ಕೊಡಲಾಗುವುದು ಎಂದು ಸಚಿವರು ಇದೇ ವೇಳೆ ಭರವಸೆ ನೀಡಿದರು.ಅಲ್ಪಸಂಖ್ಯಾತರಿಗೆ ಸರ್ಕಾರದಲ್ಲಿ ಹಲವು ಯೋಜನೆಗಳಿವೆ. ಈ ಯೋಜನೆ ಬಳಸಿಕೊಂಡು ತಮ್ಮ ಮಕ್ಕಳಿಗೆ ಹೆಚ್ಚಿನ ವಿದ್ಯಾಭ್ಯಾಸ ನೀಡುವಂತೆ ಸಚಿವರು ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಹಸನ್‌ಸಾಬ್ ದೋಟಿಹಾಳ, ಬಸವರಾಜ ದಡೇಸಗೂರು, ೩೭೧ ಕಾಯ್ದೆಯ ಹೋರಾಟಗಾರ ರಜಾಕ್ ಉಸ್ತಾದ, ಜಿಪಂ ಮಾಜಿ ಸದಸ್ಯ ವೀರೇಶ ಸಾಲೋಣಿ, ಸಂಸ್ಥೆಯ ಮೊಹಮ್ಮದ್ ರಫಿ ಉಪಸ್ಥಿತರಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ