ಕನ್ನಡಪ್ರಭ ವಾರ್ತೆ ನೆಲಮಂಗಲ/ದಾಬಸ್‍ಪೇಟೆ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯು ಪ್ರತಿಯೊಬ್ಬ ವ್ಯಕ್ತಿಯ ಜೀವನ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಮಹಾನ್ ಚೇತನಗಳ ಆದರ್ಶಗಳನ್ನು ಮೈಗೂಡಿಸಿಕೊಂಡು ಸಾಹಿತ್ಯಿಕ ವಾತಾವರಣ ಬೆಳೆಸಿದಾಗ ಮಾತ್ರ ಸುಸಂಸ್ಕೃತ ಸಮಾಜ ನಿರ್ಮಾಣ ಸಾಧ್ಯ ಎಂದು ಬಸವನಹಳ್ಳಿ ಮಠದ ಶ್ರೀ ರಮಣಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ಸರ್ ಎಂ. ವಿಶ್ವೇಶ್ವರಯ್ಯ ಹಾಗೂ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರು ಈ ಮಣ್ಣಿನ ಶ್ರೇಷ್ಠ ಆಸ್ತಿಗಳು. ಒಬ್ಬರು ತಾಂತ್ರಿಕ ಮತ್ತು ಆಡಳಿತಾತ್ಮಕ ರಂಗದಲ್ಲಿ ದೇಶ ಕಟ್ಟಿದರೆ, ಇನ್ನೊಬ್ಬರು ತಮ್ಮ ಸಾಹಿತ್ಯದ ಮೂಲಕ ಪ್ರಕೃತಿ, ಪರಿಸರ ಹಾಗೂ ವೈಚಾರಿಕ ಚಿಂತನೆಗಳನ್ನು ಯುವಜನರಲ್ಲಿ ಬಿತ್ತಿದರು. ಕ.ಸಾ.ಪ. ಇಂತಹ ಮಹನೀಯರ ಜಯಂತಿ ಆಚರಿಸುವ ಮೂಲಕ ಯುವ ಪೀಳಿಗೆಗೆ ಸೂಕ್ತ ಮಾರ್ಗದರ್ಶನ ನೀಡುತ್ತಿರುವುದು ಶ್ಲಾಘನೀಯ. ನೆಲಮಂಗಲ ತಾಲೂಕಿನಲ್ಲಿ ಸಾಹಿತ್ಯ ಚಟುವಟಿಕೆಗಳು ಸದಾ ಹಸಿರಾಗಿರಲಿ ಎಂದು ಹಾರೈಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಬಿ.ಎನ್. ಕೃಷ್ಣಪ್ಪ ಮಾತನಾಡಿ, ತಾಲೂಕು ಮಟ್ಟದಲ್ಲಿ ಸಾಹಿತ್ಯ ಪರಿಷತ್ತು ಮತ್ತಷ್ಟು ಕ್ರಿಯಾಶೀಲವಾಗಿ ಕೆಲಸ ಮಾಡಬೇಕಿದೆ. ಗ್ರಾಮೀಣ ಭಾಗದಲ್ಲಿರುವ ಉದಯೋನ್ಮುಖ ಬರಹಗಾರರು ಹಾಗೂ ಪ್ರತಿಭಾವಂತ ಕಲಾವಿದರನ್ನು ಗುರುತಿಸಿ ಅವರಿಗೆ ಸೂಕ್ತ ವೇದಿಕೆ ಕಲ್ಪಿಸುವುದು ಪರಿಷತ್ತಿನ ಪ್ರಮುಖ ಆದ್ಯತೆಯಾಗಬೇಕು. ನೂತನವಾಗಿ ಅಧಿಕಾರ ಸ್ವೀಕರಿಸುತ್ತಿರುವ ಪದಾಧಿಕಾರಿಗಳು ಒಗ್ಗಟ್ಟಿನಿಂದ ಶ್ರಮಿಸಿ, ಕನ್ನಡದ ಕೆಲಸಗಳನ್ನು ಪ್ರತಿ ಮನೆ- ಮನ ತಲುಪಿಸಬೇಕು ಎಂದು ಕರೆ ನೀಡಿದರು.ಅಧಿಕಾರ ಹಸ್ತಾಂತರ:
ಕಸಾಪ ರಾಜ್ಯ ಪ್ರತಿನಿಧಿ ಡಾ. ಕೃಷ್ಣಮೂರ್ತಿ, ಸಾಹಿತಿ ಚೌಡಯ್ಯ, ಕುಮುದ್ವತಿ ಸಂಸ್ಥೆಯ ಮಾಲೀಕರಾದ ಚಿಕ್ಕ ಹನುಮೇಗೌಡ, ಬೂದಿಹಾಳ್ ವಿ ಎಸ್ ಎಸ್ ಎನ್ ಅಧ್ಯಕ್ಷ ಮಧು ಕುಮಾರ್, ಕಸಾಪ ಜಿಲ್ಲಾ ಪ್ರತಿನಿಧಿ ಮಂಜುಳಾ ಸಿದ್ದರಾಜು, ಸಿದ್ಧಗಂಗಾ ಕಾಲೇಜಿನ ಉಪ ಪ್ರಾಂಶುಪಾಲರಾದ ಗಂಗರಾಜು, ತಾಲೂಕು ಕಸಾಪ ಮಾಜಿ ಅಧ್ಯಕ್ಷರುಗಳಾದ ಡಾ. ಲಯನ್ ಪ್ರಕಾಶ್, ಎಂ.ವಿ. ನೆಗಳೂರು, ಉಮೇಶ್ ಗೌಡ, ಡಿ. ಸಿದ್ದರಾಜು, ಕೇಶವ್ ಮೂರ್ತಿ, ಪ್ರಕಾಶ್ ಮೂರ್ತಿ, ಸದಾನಂದ ಆರಾಧ್ಯ ಹಾಗೂ ಪ್ರೆಸ್ ಕ್ಲಬ್ ಕೌನ್ಸಿಲ್ ರಾಜ್ಯ ಕಾರ್ಯದರ್ಶಿ ಆರ್. ಕೊಟ್ರೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.