ಕನ್ನಡಪ್ರಭ ವಾರ್ತೆ ನಂಜನಗೂಡು ದೇವರಸನಹಳ್ಳಿ ಗ್ರಾಪಂ ಅಧ್ಯಕ್ಷರ ಆಯ್ಕೆ ಸಂಬಂಧ ಹಾಲಿ ಉಪಾಧ್ಯಕ್ಷೆ ಸೌಭಾಗ್ಯಾ ಅವರ ಪತಿ ನಂಜುಂಡಸ್ವಾಮಿ ಅವರನ್ನು ಸಂಚು ನಡೆಸಿ ಕೊಲೆ ಮಾಡಿರುವ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು, ಸೌಭಾಗ್ಯಾ ಅವರಿಗೆ ಸರ್ಕಾರ ಪರಿಹಾರ ಘೋಷಣೆ ಮಾಡಬೇಕು ಎಂದು ಸಮಾಜದ ಮುಖಂಡ ಎಚ್.ಎಸ್. ಮೂಗಶೆಟ್ಟಿ ಆಗ್ರಹಿಸಿದರು. ಪಟ್ಟಣದ ಉಪ್ಪಾರ ಸಮುದಾಯ ಭವನದಲ್ಲಿ ಶನಿವಾರ ನಡೆದ ತಾಲೂಕು ಉಪ್ಪಾರ ಸಮುದಾಯದ ಸಭೆಯಲ್ಲಿ ಅವರು ಮಾತನಾಡಿದರು.ಸೌಭಾಗ್ಯಾ ಅಧ್ಯಕ್ಷರಾಗುವುದನ್ನು ತಪ್ಪಿಸುವ ಸಲುವಾಗಿ ಸಂಚು ನಡೆಸಿದ ದುರ್ಷರ್ಮಿಗಳು ನಂಜುಂಡಸ್ವಾಮಿ ಅವರ ಮೇಲೆ ಹಲ್ಲೆ ನಡೆಸಿ, ಪ್ರಕರಣವನ್ನು ಅಪಘಾತ ಎಂದು ಪೊಲೀಸರ ದಾರಿ ತಪ್ಪಿಸಲು ಯತ್ನಿಸಿದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ, ಆದರೆ ನಮ್ಮ ಸಮುದಾಯದ ಕೆಲವರು ದುರ್ಷರ್ಮಿಗಳ ಜೊತೆ ಸೇರಿ ಸಂಚು ನಡೆಸಿ ಕೊಲೆಗೆ ಸಹಕಾರ ನೀಡಿದ್ದಾರೆ, ಅವರನ್ನು ಬಂಧಿಸಿ ವಿಚಾರಣೆ ನಡೆಸುವ ಮೂಲಕ ಪತಿಯನ್ನು ಕಳೆದುಕೊಂಡ ಸೌಭಾಗ್ಯಾ ಅವರಿಗೆ ನ್ಯಾಯ ದೊರಕಿಸಬೇಕು, ನ. 5 ರೊಳಗೆ ಪೊಲೀಸರು ಅಗತ್ಯ ಕ್ರಮವಹಿಸದಿದ್ದರೆ ತಾಲೂಕು ಉಪ್ಪಾರ ಸಮಾಜದಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಗ್ರಾಪಂ ಉಪಾಧ್ಯಕ್ಷೆ ಸೌಭಾಗ್ಯಾ ಮಾತನಾಡಿ, ಅ. 6 ರಂದು ನನ್ನ ಪತಿ ನಂಜುಂಡಸ್ವಾಮಿ ಅವರನ್ನು ದೂರವಾಣಿ ಕರೆ ಮಾಡಿ ಕರೆಸಿಕೊಂಡ ದುಷ್ಕರ್ಮಿಗಳು ತಡರಾತ್ರಿ ಮನೆಗೆ ಹಿಂದುರುಗುವ ವೇಳೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ, ನಮ್ಮ ಸಮಾಜದ ಕೆಲವರು ದುಷ್ಕರ್ಮಿಗಳಿಗೆ ಸಹಕಾರ ನೀಡಿ ಕೊಲೆ ಮಾಡುವ ಸಂಚಿನಲ್ಲಿ ಭಾಗಿಯಾಗಿದ್ದಾರೆ, ಅವರ ಮೇಲೆ ಪೊಲೀಸರು ಕ್ರಮವಹಿಸಬೇಕು, ಪತಿಯನ್ನು ಕಳೆದುಕೊಂಡು ಒಂಟಿಯಾಗಿರುವ ನನಗೆ ಯಾರೂ ದಿಕ್ಕಿಲ್ಲ, ಸರ್ಕಾರ ಕ್ರಮವಹಿಸಿ ನ್ಯಾಯ ನೀಡಬೇಕು ಎಂದು ಹೇಳಿದರು.ಸಭೆಯಲ್ಲಿ ಮುಖಂಡರಾದ ಹೆಮ್ಮರಗಾಲ ಸೋಮಣ್ಣ, ಕೆ.ಬಿ. ಸ್ವಾಮಿ, ಸಿದ್ದಶೆಟ್ಟಿ, ಕರಳಪುರ ನಾಗರಾಜು, ಅಣ್ಣಯ್ಯಶೆಟ್ಟಿ, ಕನಕನಗರ ಮಹದೇವು, ಕೂಡ್ಲಾಪುರ ರಾಜು, ಗೋವಿಂದರಾಜು, ಹೆಮ್ಮರಗಾಲ ಶಿವಣ್ಣ, ಬಾಲಚಂದ್ರ, ಮುದ್ದು ಮಾದಶೆಟ್ಟಿ, ಗೋಳೂರು ಮಂಜು, ಕಲ್ಲಂಗಡಿ ಮಹದೇವಸ್ವಾಮಿ, ಕಾರ್ಯದರ್ಶಿ ನಾಗರಾಜು ಇದ್ದರು.