ಸಂಡೂರು; ಅಕ್ಕಮಹಾದೇವಿಯವರ ವಚನಗಳಲ್ಲಿ ದಾರ್ಶನಿಕತೆ ಇದೆ. ಎಲ್ಲರೂ ಸಮಾನರು. ಪಂಚಾಚಾರಗಳನ್ನು ಪಾಲಿಸುವವರು ಶೀಲವಂತರು. ಪಂಚಾಚಾರಗಳನ್ನು ಪಾಲಿಸದಿದ್ದರೆ ಸಮಾಜ ಜಡವಾಗುತ್ತದೆ ಎಂದು ಹೊಸಪೇಟೆಯ ನಿವೃತ್ತ ಶಿಕ್ಷಕಿ ಸೌಭಾಗ್ಯ ಲಕ್ಷ್ಮೀ ಅಭಿಪ್ರಾಯಪಟ್ಟರು.
ಲಿಂಗಾಯತ ದರ್ಶನ ಸ್ವಾನುಭವದಿಂದ ಉಂಟಾದ ದರ್ಶನ. ಶೂನ್ಯ ತತ್ವವೇ ಲಿಂಗಾಯತ ತತ್ವದ ಜೀವಾಳ. ಜೀವನದ ದುಃಖ ನಿವಾರಿಸಿ ಪರಮ ಮೋಕ್ಷ ಸಾಧನೆಯೇ ದರ್ಶನದ ಗುರಿ. ದರ್ಶನ ಶಾಸ್ತ್ರದಲ್ಲಿ ಜೀವನ ಸತ್ಯವನ್ನು ಕಾಣುತ್ತೇವೆ. ಬಸವಾದಿ ಶರಣರು ದಾರ್ಶನಿಕರು. ಲಿಂಗಾಯತ ದರ್ಶನದಲ್ಲಿ ಅಷ್ಟಾವರಣ, ಪಂಚಾಚಾರ ಹಾಗೂ ಷಟ್‌ಸ್ಥಲಗಳನ್ನು ಕಾಣುತ್ತೇವೆ. ಕಾಯಕ ಹಾಗೂ ದಾಸೋಹ ದರ್ಶನ ಶರಣರು ಕೊಟ್ಟ ಅತ್ಯಂತ ದೊಡ್ಡ ದರ್ಶನ. ಬಸವಣ್ಣ ಇಷ್ಟಲಿಂಗದ ಜನಕ. ಇಷ್ಟಲಿಂಗವೇ ದೇವರು. ಶರಣರ ತತ್ವಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅಗತ್ಯವಿದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅಕ್ಕನ ಬಳಗದ ಕಾನೂನು ಸಲಹೆಗಾರ ನಾಗರಾಜ್ ಗುಡೆಕೋಟೆ ಅವಿಭಕ್ತ ಕುಟುಂಬಗಳಲ್ಲಿನ ಆಸ್ತಿಯ ಹಂಚಿಕೆಯಲ್ಲಿ ಮಹಿಳೆಯರ ಪಾಲಿನ ಕುರಿತ ಕಾನೂನಿನ ಬಗ್ಗೆ ತಿಳಿಸಿದರು. ಅಕ್ಕನ ಬಳಗದ ಗೌರವಾಧ್ಯಕ್ಷೆ ಶಾಂತಮ್ಮ ಅಂಕಮನಾಳ್ ಕವನ ವಾಚನ ಮಾಡಿದರು. ಅಕ್ಕನ ಬಳಗದ ಅಧ್ಯಕ್ಷೆ ಸರೋಜಾ ಪಿ. ಜ್ಯೋತಿ ಅಧ್ಯಕ್ಷತೆ ವಹಿಸಿದ್ದರು. ಪ್ರಭುಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ನಡೆಸಿದ ಬಿ.ಎ ಪರೀಕ್ಷೆಯಲ್ಲಿ ಪ್ರಥಮ ರ‍್ಯಾಂಕ್ ಗಳಿಸಿರುವ ತಾಲ್ಲೂಕಿನ ನಾಗಲಾಪುರದ ಪೂರ್ಣಿಮಾ ಅವರನ್ನು ಸನ್ಮಾನಿಸಲಾಯಿತು. ಕೊಪ್ಪಳದ ವಿಜಯಲಕ್ಷ್ಮೀ ಈಶ್ವರ್ ಕೊರ್ಲಹಳ್ಳಿ ವಚನ ಗಾಯನದ ಮೂಲಕ ಸಂಗೀತ ಸೇವೆ ಸಲ್ಲಿಸಿದರು. ಸಿದ್ದಮ್ಮ ಸಿದ್ದಪ್ಪ ಬೆಳ್ಳಕಟ್ಟೆ ವಚನ ಪಠಿಸಿದರು. ವಿಶಾಲಾಕ್ಷಿ ಕುಮಾರಸ್ವಾಮಿ ಉಗ್ರಾಣದ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಶಿಕಲಾ, ಶೋಭಾ ಪ್ರಾರ್ಥಿಸಿದರು. ಸುಮಿತ್ರಮ್ಮ ಸ್ವಾಗತಿಸಿದರು. ಪಾರ್ವತಿ ಅಂಕಮನಾಳ್ ನಿರೂಪಿಸಿದರು. ಶಶಿಧರ ವಂದಿಸಿದರು. ವೆಸ್ಕೊ ಕಂಪನಿಯಿಂದ ಭಕ್ತರಿಗೆ ದಾಸೋಹ ಸೇವೆ ಹಮ್ಮಿಕೊಳ್ಳಲಾಗಿತ್ತು.