ಕನ್ನಡಪ್ರಭ ವಾರ್ತೆ ಕೋಲಾರಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಕುರಿತು ಸಮೀಕ್ಷೆ ಕೈಗೊಳ್ಳಲು ಈಗಾಗಲೇ ಜಿಲ್ಲೆಯಲ್ಲಿ ಮೊದಲನೆ ಹಂತವಾಗಿ ಜಿಯೋ ಟ್ಯಾಗಿಂಗ್ ಕಾರ್ಯ ಪ್ರಗತಿಯಲ್ಲಿದೆ. ಎರಡನೇ ಹಂತದಲ್ಲಿ ಸೆ.೨೦ರಿಂದ ಅ.೭ರವರೆಗೆ ಸಮೀಕ್ಷಾ ಕಾರ್ಯ ನಡೆಯಲಿದೆ, ಸಂಬಂಧಿಸಿದ ಅಧಿಕಾರಿಗಳು ಸರ್ವೇ ಕಾರ್ಯಕ್ಕೆ ಗಣತಿದಾರರನ್ನು ನೇಮಿಸಿ ಪಟ್ಟಿ ಅಂತಿಮಗೊಳಿಸುವಂತೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.ನಗರದ ಡಿಸಿ ಕಚೇರಿಯ ನ್ಯಾಯಾಂಗ ಸಭಾಂಗಣದಲ್ಲಿ ವಿವಿಧ ಅಧಿಕಾರಿಗಳೊಂದಿಗೆ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಇಂಧನ ಇಲಾಖೆಯಿಂದ ಈಗಾಗಲೇ ಮನೆಗಳಿಗೆ ಜಿಯೋ ಟ್ಯಾಗ್ ಮಾಡಿ ಸ್ಟಿಕರ್ ಅಂಟಿಸಿ ೧೫೦ ಮನೆಗಳಿಗೆ ಒಂದು ಬ್ಲಾಕ್‌ನ್ನು ಗುರುತಿಸಿ ರೂಟ್ ಮ್ಯಾಪ್ ಹಾಗೂ ಬ್ಲಾಕ್ ಮ್ಯಾಪ್ ಮಾಡುವ ಕಾರ್ಯ ಆರಂಭಿಸಲಾಗಿದ್ದು, ಬರುವ ಸೆಪ್ಟೆಂಬರ್ ಮೊದಲನೆ ವಾರದೊಳಗೆ ಟ್ಯಾಗಿಂಗ್ ಕಾರ್ಯ ಪೂರ್ಣಗೊಳಿಸುವಂತೆ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.ಸರ್ವೇ ಕಾರ್ಯ ಕೈಗೊಳ್ಳಬೇಕು
ಜಿಲ್ಲೆಯಲ್ಲಿರುವ ೩೩೩೩೪೮ ಕುಟುಂಬಗಳ ಮನೆಗಳ ಆರ್.ಆರ್ ನಂಬರ್‌ಗಳಿಗೆ ಜಿಯೋ ಟ್ಯಾಗಿಂಗ್ ಮಾಡುವ ಮೂಲಕ ಶೇ.೧೦೦ರಷ್ಟು ಪ್ರಗತಿ ಸಾಧಿಸಬೇಕು. ಸಮೀಕ್ಷೆ ಕಾರ್ಯಕ್ಕಿಂತ ಮುನ್ನ ಆರ್.ಆರ್ ನಂಬರ್‌ಗಳನ್ನು ಗುರುತಿಸುವ ಕಾರ್ಯದಲ್ಲಿ ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸಬೇಕು. ಯಾವುದೇ ಕುಟುಂಬಗಳು ಕೈಬಿಟ್ಟು ಹೋಗದಂತೆ ನೋಡಿಕೊಳ್ಳಬೇಕು. ಇದರಿಂದ ಎರಡನೇ ಹಂತದಲ್ಲಿ ನಡೆಯುವ ಸಮೀಕ್ಷೆ ಕಾರ್ಯ ವ್ಯವಸ್ಥಿತವಾಗಿ ಹಾಗೂ ವೈಜ್ಞಾನಿಕವಾಗಿ ಮತ್ತು ನಿಖರವಾಗಿ ಕಾರ್ಯಗತಗೊಳಿಸಲು ಅನುಕೂಲವಾಗಲಿದೆ ಎಂದರು.
೧೫೦ ಮನೆಗೆ ಒಬ್ಬ ಗಣತಿದಾರಪ್ರತಿ ೧೫೦ ಮನೆಗಳಿಗೆ ಒಬ್ಬ ಗಣತಿದಾರರಾಗಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರನ್ನು ನಿಯೋಜಿಸಬೇಕು. ಪ್ರತಿ ೧೫ ರಿಂದ ೨೦ ಗಣತಿದಾರರಿಗೆ ಒಬ್ಬರಂತೆ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರು, ಬಿಆರ್ ಸಿ-ಸಿಆರ್ಸಿಗಳು ಮೇಲ್ವಿಚಾರಕರಾಗಿ ನಿಗಾ ವಹಿಸಬೇಕು. ಪ್ರತಿ ೫೦ ಗಣತಿದಾರರಿಗೆ ಓರ್ವ ಮಾಸ್ಟರ್ ಟ್ರೇನರ್ ನಿಯೋಜನೆ ಮಾಡಬೇಕು. ಮಾಸ್ಟರ್ ಟ್ರೇನರ್ ಸಮೀಕ್ಷಾ ಕಾರ್ಯಗಳ ಕುರಿತು ಸಂಪೂರ್ಣ ಮಾಹಿತಿ ಹೊಂದಿರುವ ಮಾಸ್ಟರ್ ಟ್ರೇನರ್ ಗಳನ್ನು ನಿಯೋಜಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಜಿಪಂ ಸಿಇಓ ಡಾ.ಪ್ರವೀಣ್ ಪಿ.ಬಾಗೇವಾಡಿ, ಎಡಿಸಿ ಮಂಗಳ, ಎಸಿ ಡಾ.ಮೈತ್ರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ನಾರಾಯಣಸ್ವಾಮಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಗೀತಾ, ಡಿಡಿಪಿಐ ಅಲ್ಮಾಸ್ ಪರ್ವೀನ್ ತಾಜ್, ಜಿಲ್ಲಾ ಸಾಂಖ್ಯಿಕ ಅಧಿಕಾರಿ ರಮೇಶ್ ಇದ್ದರು.