ಉಡುಪಿ: ಸೋದೆ ಶ್ರೀ ವಾದಿರಾಜ ಮಠದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರ ದ್ವಿತೀಯ ಶ್ರೀಕೃಷ್ಣ ಪೂಜಾ ಪರ್ಯಾಯದಂಗವಾಗಿ ನ. 29ರಂದು ಬಾಳೆ ಮುಹೂರ್ತ ನೆರವೇರಲಿದೆ. ಇದೇ ಸಂದರ್ಭದಲ್ಲಿ 3 ದಿನಗಳ ಕಾಲ ಶ್ರೀಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿ ರಾಷ್ಟ್ರಮಟ್ಟದ ‘ಕದಳೀ ವಿಶ್ವದರ್ಶನ’ ಬಾಳೆ ಮೇಳ ಆಯೋಜಿಸಲಾಗಿದೆ. ಈ ಕಾರ್ಯಕ್ರಮಗಳ ಯಶಸ್ವಿ - ಸುಗಮ ನಿರ್ವಹಣೆಯ ಉದ್ದೇಶದಿಂದ ಸೋದೆ ಶ್ರೀ ವಾದಿರಾಜ ಮಠದಲ್ಲಿ ಶ್ರೀಪಾದರ ಅಧ್ಯಕ್ಷತೆಯಲ್ಲಿ, ಶಾಸಕ ಯಶ್‌ಪಾಲ್ ಸುವರ್ಣರ ಉಪಸ್ಥಿತಿಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಮನ್ವಯ ಸಭೆ ನಡೆಯಿತು.
ಸಭೆಯಲ್ಲಿ ಮಾಜಿ ಶಾಸಕ ಕೆ. ರಘುಪತಿ ಭಟ್, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ನಗರಸಭೆ ಆಯುಕ್ತ ಮಹಾಂತೇಶ್ ಹಂಗರಗಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಬಸವರಾಜ ಹುಬ್ಬಳ್ಳಿ, ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕಿ ಕ್ಷಮಾ ಪಾಟೀಲ್, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ವಿನಾಯಕ ಉ. ಕಲ್ಗುಟಕರ್, ನಗರ ಠಾಣೆಯ ಉಪನಿರೀಕ್ಷಕ ಭರತೇಶ್ ಕಂಕಣವಾಡಿ ಹಾಗೂ ಸಂಚಾರ ಠಾಣೆಯ ಉಪನಿರೀಕ್ಷಕ ಮಹೇಶ್ ಟಿ. ಉಪಸ್ಥಿತರಿದ್ದರು.
ಬಾಳೆ ಮೇಳಕ್ಕೆ ಉಚಿತ ಪ್ರವೇಶ: 29ರಂದು ಬೆಳಿಗ್ಗೆ 7.45ಕ್ಕೆ ಸೋದೆ ಶ್ರೀ ವಾದಿರಾಜ ಮಠದಲ್ಲಿ ಬಾಳೆ ಮುಹೂರ್ತ ನೆರವೇರಲಿದೆ. 9.30ಕ್ಕೆ ಶ್ರೀಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿ ‘ಕದಳೀ ವಿಶ್ವದರ್ಶನ’ ಬಾಳೆ ಮೇಳದ ಉದ್ಘಾಟನೆ ನಡೆಯಲಿದೆ. ಮೂರು ದಿನಗಳ ಈ ಮೇಳವು ಪ್ರತಿದಿನ ಬೆಳಿಗ್ಗೆ 9 ರಿಂದ ರಾತ್ರಿ 9 ರವರೆಗೆ ಸಾರ್ವಜನಿಕರ ವೀಕ್ಷಣೆಗೆ ತೆರೆದಿರಲಿದ್ದು, ಎಲ್ಲರಿಗೂ ಉಚಿತ ಪ್ರವೇಶವಿರುತ್ತದೆ.