ದಾವಿವಿಗೆ ಸಂಪರ್ಕ ಕಲ್ಪಿಸುವ ರಸ್ತೆ ವಿಸ್ತರಿಸಿ, ಅಭಿವೃದ್ಧಿಪಡಿಸಿ: ಎಚ್.ತಿಮ್ಮಣ್ಣ ಒತ್ತಾಯ
ಎಸ್‌ಒಜಿ ಕಾಲನಿಯಲ್ಲಿ ಸಾರ್ವಜನಿಕ ಜಾಗವಾದ ಪಾದಚಾರಿ ಮಾರ್ಗದ ಮೇಲೆ ಖಾಸಗಿ ವ್ಯಾಪಾರಿಗಳಿಗೆ ತಿಂಗಳಿಗೆ ಬಾಡಿಗೆ ಆಧಾರದಲ್ಲಿ ಶೆಡ್ ಹಾಕಿಕೊಳ್ಳಲು ನೀಡುವ ನಿಲುವನ್ನು ಕೈಬಿಡುವಂತೆ ರಾಜ್ಯ ಮಾನವ ಹಕ್ಕುಗಳ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಎಚ್.ತಿಮ್ಮಣ್ಣ ಪಾಲಿಕೆ ಆಯುಕ್ತರಿಗೆ ಒತ್ತಾಯಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಎಸ್‌ಒಜಿ ಕಾಲನಿ ಸಾರ್ವಜನಿಕ ಫುಟ್‌ಪಾತ್ ಮೇಲೆ ಶೆಡ್ ಇಟ್ಟುಕೊಳ್ಳಲು ಬಾಡಿಗೆ ವಿಧಿಸಲು ಮುಂದಾಗಿರುವ ಮಹಾ ನಗರ ಪಾಲಿಕೆ ಇಂತಹದ್ದೊಂದು ನಿರ್ಧಾರವನ್ನು ತಕ್ಷಣವೇ ಕೈಬಿಡಬೇಕಲ್ಲದೇ, ಶೆಡ್ ಇಡಲು ಅಲ್ಲಿ ಅವಕಾಶ ನೀಡಬಾರದು ಎಂದರು.ಬಡತನ ರೇಖೆಗಿಂತ ಕೆಳಗಿರುವ ದುಡಿಯುವ ವರ್ಗಗಳಿಗಾಗಿ ಹಿಂದೆ ಜಿಲ್ಲಾಡಳಿತವು 1,450 ಮನೆಗಳ ಏಕಕಾಲಕ್ಕೆ ನಿರ್ಮಿಸಿತ್ತು. ಆಟೋ ಚಾಲಕರು, ಅಂಗನವಾಡಿ ನೌಕರರು, ಹಮಾಲರು, ಪತ್ರಿಕಾ ಸಿಬ್ಬಂದಿ, ಪತ್ರಿಕಾ ವಿತರಕರು ಹೀಗೆ ವಿವಿಧ ವರ್ಗಗಳ ಕುಟುಂಬಗಳಿಗೆ ಆಶ್ರಯ ಮನೆ ನೀಡಲಾಗಿತ್ತು. ಅಂದೇ ಜಿಲ್ಲಾಡಳಿತವು ಮುಂದಿನ ದಿನಗಳನ್ನು ಗಮನದಲ್ಲಿಟ್ಟುಕೊಂಡು, ಎಸ್‌ಒಜಿ ಕಾಲನಿ ನಿರ್ಮಿಸಿತ್ತು ಎಂದು ತಿಳಿಸಿದರು.
ಇಲ್ಲಿನ ಎಸ್‌ಒಜಿ ಕಾಲನಿಯಿಂದ ದಾವಿವಿಗೆ ತಲುಪುವರೆಗಿನ ರಸ್ತೆಯು ಈಗಿನ ಸ್ಥಿತಿಯಲ್ಲಿ ವಾಹನ ಮತ್ತು ಜನಸಂಖ್ಯೆಗೆ ಅನುಗುಣವಾಗಿ ನೋಡಿದರೆ ಕಿರಿದಾದ ರಸ್ತೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಪಾಲಿಕೆ ಆಯುಕ್ತರು ಇಲ್ಲಿನ ಫುಟ್‌ಪಾತ್ ಜಾಗದಲ್ಲಿ ಮಳಿಗೆಗಳನ್ನು ನಿರ್ಮಿಸಲು ಮುಂದಾಗಿದ್ದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ. ರಸ್ತೆ ಅಗಲೀಕರಣ, ಪಾದಚಾರಿಗಳಿಗೆ ಅನುಕೂಲ ಮಾಡುವುದು ಬಿಟ್ಟು, ಫುಟ್ ಪಾತ್ ಮೇಲೆ ಕಾನೂನು ಬಾಹಿರವಾಗಿ ಶೆಡ್‌ಗಳನ್ನು ನಿರ್ಮಿಸುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಸಮಿತಿ ಮುಖಂಡರಾದ ಬಿ.ಕಲ್ಲೇಶಪ್ಪ, ವೀರೇಶ, ಕೆಟಿಜೆ ನಗರ ರವಿ, ಮಂಜುನಾಥ, ಕೆ.ಪಿ.ಲೋಕೇಶಾಚಾರ್, ಪ್ರಕಾಶ ಇತರರಿದ್ದರು.