ಇ-ಸ್ವತ್ತು, ಸೌಲಭ್ಯಕ್ಕೆ ಎಸ್‌ಒಜಿ ನಿವಾಸಿಗಳ ಒತ್ತಾಯ

KannadaprabhaNewsNetwork |  
Published : Nov 06, 2026, 01:30 AM IST
5ಕೆಡಿವಿಜಿ1, 2-ದಾವಣಗೆರೆಯಲ್ಲಿ ಗುರುವಾರ ಎಸ್ಓಜಿ ಕಾಲನಿ ನಾಗರೀಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಬಿ.ಕಲ್ಲೇಶಪ್ಪ ನೇತೃತ್ವದಲ್ಲಿ ಅಲ್ಲಿನ ನಿವಾಸಿಗಳು ಪ್ರತಿಭಟಿಸಿದರು. | Kannada Prabha

ಸಾರಾಂಶ

ದಾವಣಗೆರೆ ಎಸ್‌ಒಜಿ ಕಾಲನಿಯ ಎಲ್ಲ ಆಶ್ರಯ ಮನೆಗಳಿಗೆ ಇ-ಸ್ವತ್ತು ಮಾಡಿಕೊಡಬೇಕು, ರಸ್ತೆ ಮೇಲೆ ನಿರ್ಮಾಣವಾದ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಾಗರೀಕ ಹಿತರಕ್ಷಣಾ ಸಮಿತಿಯಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.

- ಪಾಲಿಕೆ ಬಳಿ ಪ್ರತಿಭಟನೆ ನಡೆಸಿ, ಆಯುಕ್ತರಿಗೆ ಬಿ.ಕಲ್ಲೇಶಪ್ಪ ನೇತೃತ್ವದಲ್ಲಿ ಮನವಿ ಸಲ್ಲಿಕೆ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ಎಸ್‌ಒಜಿ ಕಾಲನಿಯ ಎಲ್ಲ ಆಶ್ರಯ ಮನೆಗಳಿಗೆ ಇ-ಸ್ವತ್ತು ಮಾಡಿಕೊಡಬೇಕು, ರಸ್ತೆ ಮೇಲೆ ನಿರ್ಮಾಣವಾದ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಾಗರೀಕ ಹಿತರಕ್ಷಣಾ ಸಮಿತಿಯಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಗರದ ಶ್ರೀ ಜಯದೇವ ವೃತ್ತದಿಂದ ಮಹಾನಗರ ಪಾಲಿಕೆ ಕಚೇರಿವರೆಗೆ ಸಮಿತಿ ಅಧ್ಯಕ್ಷ ಬಿ.ಕಲ್ಲೇಶಪ್ಪ ಇತರರ ನೇತೃತ್ವದಲ್ಲಿ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಪಾಲಿಕೆಯಲ್ಲಿ ಅಧಿಕಾರಿಗಳಿಗೆ ಮನವಿ ಅರ್ಪಿಸಿ ಆಗ್ರಹಿಸಿದರು.

ನೇತೃತ್ವ ವಹಿಸಿದ್ದ ಅಧ್ಯಕ್ಷ ಬಿ.ಕಲ್ಲೇಶಪ್ಪ ಮಾತನಾಡಿ, 16 ವರ್ಷದಿಂದ ಎಸ್‌ಒಜಿ ಕಾಲನಿಯಲ್ಲಿ ಕೂಲಿ ಕಾರ್ಮಿಕರು, ಬಡವರು, ಕಡು ಬಡವರು, ಸವಿತಾ ಸಮಾಜ ಸೇರಿದಂತೆ ವಿವಿಧ ವೃತ್ತಿಯ ಶ್ರಮಿಕರು ವಾಸಿಸುತ್ತಿದ್ದಾರೆ. ಆ ಆಶ್ರಯ ಮನೆಗಳಿಗೆ ಪಾಲಿಕೆ ಇಂದಿಗೂ ಇ-ಸ್ವತ್ತು ನೀಡುತ್ತಿಲ್ಲ. ನೀರಿನ ಕಂದಾಯ ಕಟ್ಟಿ, ಬಳಿಕವಷ್ಟೇ ಇ-ಸ್ವತ್ತು ನೀಡುವುದಾಗಿ ಪಾಲಿಕೆ ಹೇಳುತ್ತಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಈ ಹಿಂದೆ ದಿವಂಗತ ಶಾಮನೂರು ಶಿವಶಂಕರಪ್ಪ ಅವರು ನೀರಿನ ಕಂದಾಯ ಕಟ್ಟದಂತೆ ಹೇಳಿದ್ದರು. ಹಾಗಾಗಿ, ಎಸ್‌ಒಜಿ ಕಾಲನಿ ನಿವಾಸಿಗಳು ಯಾರೂ ನೀರಿನ ಕಂದಾಯ ಕಟ್ಟಿರಲಿಲ್ಲ. ಶಾಮನೂರು ಅವರು ಇರುವವರೆಗೂ ಪಾಲಿಕೆ ಯಾವುದೇ ಅಧಿಕಾರಿಯು ಮನೆ ಬಾಗಿಲಿಗೆ ಬಂದಿರಲಿಲ್ಲ. ಈಗ ಪ್ರತಿ ಮನೆಗೆ ₹30ರಿಂದ ₹40 ಸಾವಿರ ನೀರಿನ ಕಂದಾಯ ಬಂದಿದೆ. ಅದನ್ನು ಕಟ್ಟಿದರಷ್ಟೇ ಇ-ಸ್ವತ್ತು ನೀಡುವುದಾಗಿ ಪಾಲಿಕೆ ಹೇಳುತ್ತಿದ್ದು, ಅಲ್ಲಿನ ಶ್ರಮಿಕ ವರ್ಗ ಈಗ ಎಲ್ಲಿಗೆ ಹೋಗಬೇಕು ಎಂದು ಅವರು ಪ್ರಶ್ನಿಸಿದರು.

ಕಾಲನಿ ಬಿ ಮತ್ತು ಸಿ ಬ್ಲಾಕ್ ರಾಜಕಾಲುವೆ, ಒಳಚರಂಡಿ, ಮುಖ್ಯ ರಸ್ತೆಗಳು, ಬೀದಿದೀಪ ಸಂಪೂರ್ಣ ಹಾಳಾಗಿವೆ. ಈ ಬಗ್ಗೆಯೂ ಗಮನಹರಿಸಿ, ಸರಿಪಡಿಸಬೇಕು. ಕಾಲನಿಯ ಪಾರ್ಕ್‌ ಅನ್ನು ಸ್ವಚ್ಛವಾಗಿಟ್ಟು,ಅಭಿವೃದ್ಧಿಪಡಿಬೇಕು. ತಮ್ಮ ಭಾಗದಲ್ಲಿ 40 ಅಡಿ ರಸ್ತೆಗಾಗಿ ಬಿಟ್ಟ ಜಾಗದಲ್ಲಿ ಮನೆ, ಕಟ್ಟಡಗಳನ್ನು ಕಟ್ಟಲು ಅಧಿಕಾರಿಗಳು ಅನುಮತಿ ನೀಡುತ್ತಿದ್ದಾರೆ. ಅದನ್ನು ತಕ್ಷಣವೇ ನಿಲ್ಲಿಸಬೇಕು. ಸುಸಜ್ಜಿತ ರಸ್ತೆಯನ್ನು ಅಲ್ಲಿಗೆ ಕಲ್ಪಿಸಬೇಕು. ಆ ಭಾಗದಲ್ಲಿ ಸಿಸಿ ಕ್ಯಾಮೆರಾ ಅಳ‍ವಡಿಸಬೇಕು. ರಸ್ತೆ ಮೇಲೆ ನಿರ್ಮಾಣವಾದ ಅನಧೀಕೃತ ಕಟ್ಟಡಗಳನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.

ಪಾಲಿಕೆ 31ನೇ ವಾರ್ಡ್‌ಗೆ ಒಳಪಡುವ ಎಸ್‌ಒಜಿ ಕಾಲನಿಯನ್ನು 2001-2002ರಲ್ಲಿ ಆಗಿನ ಜಿಲ್ಲಾಧಿಕಾರಿ ದಿವಂಗತ ಕೆ.ಶಿವರಾಂ ಅಭಿವೃದ್ಧಿಪಡಿಸಿ, ಜಿಲ್ಲಾ ಕೇಂದ್ರದಲ್ಲಿ ಸುಮಾರು 8 ಸಾವಿರ ಆಶ್ರಯ ಮನೆ ನಿರ್ಮಿಸಿದ್ದರು. ಎಸ್‌ಒಜಿ ಕಾಲನಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಎಸ್‌.ಎಸ್‌. ಹೈಟೆಕ್ ಆಸ್ಪತ್ರೆ, ಕೆಎಸ್ಸಾರ್ಟಿಸಿ ಡಿಪೋ-2 ಇದ್ದು, ಕೃಷಿ ಮಳಿಗೆ ಸಹ ಇದೆ. ಆದರೆ, ಕಾಲನಿಯ ಮುಖ್ಯರಸ್ತೆ ಮೇಲೆ ಅನಧಿಕೃತ ನಿವೇಶನಗಳಲ್ಲಿ ಮನೆ ಕಟ್ಟಲು ಪಾಲಿಕೆ ಅಧಿಕಾರಿಗಳು ಹಿಂದೆ ಅನುಮತಿ ಕೊಟ್ಟಿದ್ದರು. ಬೇರೆ ಭಾಗದವರು ಅಲ್ಲಿ ಅತಿಕ್ರಮ ಕಟ್ಟಡ ನಿರ್ಮಿಸಲು ಅನುಮತಿ ನೀಡಿದ್ದನ್ನು ಪರಿಶೀಲಿಸಿ, ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.

ಸಮಿತಿ ಗೌರವಾಧ್ಯಕ್ಷ ಬಾಲಪ್ಪ, ಕೆ.ವಿ.ರುದ್ರೇಶ, ಕೆ.ಜಿ.ಪ್ರಕಾಶ, ಸತೀಶ, ರೇವಣಸಿದ್ದಪ್ಪ, ಮಂಜಣ್ಣ, ಜಿ.ಎಚ್.ರೇವಣಸಿದ್ದಪ್ಪ, ಬಸವರಾಜ, ಎನ್.ಪ್ರಕಾಶ, ಆರ್.ಮಹಾಂತೇಶ, ಪಿ.ಬಿ. ಪುಟ್ಟಣ್ಣ, ಎ.ಶ್ರೀನಿವಾಸ, ಎಂ.ಈ.ಸತೀಶ, ಮಂಜುನಾಥ, ಎನ್.ನಾಗರಾಜ ಇತರರು ಇದ್ದರು.

- - -

(ಬಾಕ್ಸ್‌)

* ನಿವೇಶನ ರಹಿತರಿಗೆ ಸೈಟ್‌ ನೀಡಬೇಕು

ನಗರಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ ಬೆಂಗಳೂರಿನಲ್ಲಿ ರಸ್ತೆ ಮೇಲೆ ನಿರ್ಮಾಣವಾದ ಮನೆ, ಶೆಡ್‌, ಅಂಗಡಿ, ತರಕಾರಿ ಗಾಡಿ, ಟೀ ಅಂಗಡಿ, ಹೋಟೆಲ್ ತೆರವು ಮಾಡಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಅದೇ ರೀತಿ ಇಲ್ಲಿಯೂ ಆಗಬೇಕು. ರಸ್ತೆ ಮೇಲೆ ನಿವೇಶನ ಮಾಡಿಕೊಟ್ಟ ಪಾಲಿಕೆ ಹಿಂದಿನ ಆಯುಕ್ತರ ಆದೇಶ ಕಾನೂನು ಬಾಹಿರವಾಗಿದೆ. ಈ ಬಗ್ಗೆ ಸಮಿತಿ ಕಾನೂನು ಹೋರಾಟ ನಡೆಸಿದ್ದು, ನಿವೇಶನ ನೀಡದಂತೆ ತಡೆಯಾಜ್ಞೆಯೂ ಸಿಕ್ಕಿತ್ತು. ಅಂತಹ ಕಟ್ಟಡ ತೆರವುಗೊಳಿಸಬೇಕು. ಅದೇ ಕಾಲನಿ, ಅಕ್ಕಪಕ್ಕದ ವಾರ್ಡ್‌ನಲ್ಲಿ ಬಾಡಿಗೆ ಮನೆಯಲ್ಲಿರುವ ನಿವೇಶನ ರಹಿತರಿಗೆ ಸೈಟ್‌ ನೀಡಬೇಕು ಎಂದು ಬಿ.ಕಲ್ಲೇಶಪ್ಪ ಮನವಿ ಮಾಡಿದರು.

- - -

-5ಕೆಡಿವಿಜಿ1, 2: ದಾವಣಗೆರೆಯಲ್ಲಿ ಗುರುವಾರ ಎಸ್‌ಒಜಿ ಕಾಲನಿ ನಾಗರೀಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಬಿ.ಕಲ್ಲೇಶಪ್ಪ ನೇತೃತ್ವದಲ್ಲಿ ಸ್ಥಳೀಯ ನಿವಾಸಿಗಳು ಪ್ರತಿಭಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ಟಿಂಗ್‌: ನ್ಯಾಯಾಲಯಕ್ಕೆ ಹಲವು ದಾಖಲೆ ಸಲ್ಲಿಸಿದ ಖಾಸಗಿ ಸುದ್ದಿವಾಹಿನಿ ಮುಖ್ಯಸ್ಥ
ಮದುವೆ ಆಗುವಂತೆ ಉದ್ಯಮಿಗೆ ಹನಿಟ್ರ್ಯಾಪ್: ₹2 ಕೋಟಿ ಬೇಡಿಕೆ