ಶಿರಹಟ್ಟಿ: ಭೂಮಿ ಮೇಲಿನ ಪ್ರತಿ ಜೀವಿಗೂ ಮಣ್ಣು, ನೀರು, ಗಾಳಿ ಅವಶ್ಯಕ. ಪ್ರತಿ ಜೀವಕೋಶಗಳಿಗೆ ಮಣ್ಣಿನಲ್ಲಿರುವ ಪೋಷಕಾಂಶಗಳು ಬೇಕೆಬೇಕು. ಹೀಗಾಗಿ ಮಣ್ಣಿನ ಆರೋಗ್ಯ ಕಾಪಾಡುವುದು ಎಲ್ಲರ ಕರ್ತವ್ಯ ಎಂದು ಜಿಲ್ಲಾ ಕೃಷಿ ಉಪನಿರ್ದೇಶಕರಾದ ಸ್ಫೂರ್ತಿ ಜಿ.ಎಸ್. ತಿಳಿಸಿದರು.ತಾಲೂಕಿನ ಬೆಳ್ಳಟ್ಟಿ ಗ್ರಾಮದ ಎಪಿಎಂಸಿ ಸಭಾಭವನದಲ್ಲಿ ಕೃಷಿ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ ಖೇತ್ ಬಚಾವೋ ಅಭಿಯಾನ, ಆತ್ಮ ಯೋಜನೆಯಡಿ ಕಿಸಾನ ಗೋಷ್ಠಿ ಮತ್ತು ಮರುಭೂಮಿಕರಣ ಹಾಗೂ ಬರ ತಡೆಗಟ್ಟುವಿಕೆ ವಿಶ್ವ ದಿನ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ರೈತರು ತಮ್ಮ ಜಮೀನುಗಳಲ್ಲಿ ನೀರು ಮತ್ತು ಮಣ್ಣು ಸಂರಕ್ಷಣೆ ಮಾಡಿಕೊಂಡು ಮುಂದಿನ ದಿನಗಳಲ್ಲಿ ಬರ ಎದುರಿಸಲು ಸಜ್ಜಾಗಬೇಕು ಎಂದರು.ಅತಿಯಾದ ರಾಸಾಯನಿಕ ಗೊಬ್ಬರ, ಅತಿ ನೀರು ಬಳಸುವುದರಿಂದ ಮಣ್ಣಿನ ಆರೋಗ್ಯ ಹಾಳಾಗುತ್ತದೆ. ಮನುಷ್ಯರ ಹಾಗೆ ಮಣ್ಣಿಗೂ ಜೀವ ಇದೆ. ಮಳೆ ನೀರನ್ನು ಇಂಗಿಸುವುದರಿಂದ ಅಂತರ್ಜಲ ಹೆಚ್ಚಳವಾಗುತ್ತದೆ. ಗಿಡ ಮರಗಳನ್ನು ಬೆಳೆಸುವುದರಿಂದ ಮಳೆ ನೀರನ್ನು ಸಂರಕ್ಷಣೆ ಮಾಡುತ್ತದೆ. ಆದ್ದರಿಂದ ಹೊಲದಲ್ಲಿ ನೀರು ಇಂಗುವಂತೆ ಮಾಡಬೇಕು. ಉತ್ತಮ ಮಣ್ಣು ಮತ್ತು ನೀರಿನ ಸಂಪನ್ಮೂಲಗಳು ಒಂದು ದೇಶದ ಏಳಿಗೆಗೆ ಬಹಳ ಮುಖ್ಯ ಎಂದರು.ಬೆಳ್ಳಟ್ಟಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮೋಹನ್ ಗುತ್ತೆಮ್ಮನವರ ಮಾತನಾಡಿ, ರೈತರು ರಾಸಾಯನಿಕ ಗೊಬ್ಬರಗಳ ಮೇಲೆ ಅವಲಂಬಿತರಾಗದೇ ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ ನೀಡಬೇಕು. ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆಯಿಂದ ಮಣ್ಣಿನ ಫಲವತ್ತತೆ ಕುಗ್ಗುವುದು. ನೀರಿನ ಮಾಲಿನ್ಯ ಹೆಚ್ಚುವುದು. ಹಾಗೂ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇದೆ ಎಂದರು.
ಹುಲಕೋಟಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಎನ್.ಎಚ್. ಬಂಡಿ, ಬಸವರಾಜ ನಾವಿ, ತಾಲೂಕು ಕೃಷಿ ನಿರ್ದೇಶಕ ಶಿವಕುಮಾರ ಕಾಶಪ್ಪನವರ ಮಾತನಾಡಿದರು. ಚಂದ್ರಶೇಖರಗೌಡ ಎಸ್.ಎನ್., ಮಂಜುನಾಥ ಭರಮಗೌಡ್ರ, ಆರ್.ಸಿ. ಚಾಕಲಬ್ಬಿ, ಎಂ.ಎಸ್. ಪೂಜಾರ, ಡಿ.ಕೆ. ಅಚಲಕರ, ನೀಲನಗೌಡ ಪಾಟೀಲ, ಶ್ರೀನಿವಾಸ ಅಳವಂಡಿ, ಅಶೋಕ ಕಪ್ಲಿ, ಮಹೇಶ ಬಡ್ನಿ ಇತರರು ಕಾರ್ಯಕ್ರಮದಲ್ಲಿ ಇದ್ದರು.