ರೈತರು ಮುಂಗಾರು ಹಂಗಾಮಿನಲ್ಲಿ ಪ್ರತಿ ವರ್ಷದಂತೆ ಒಂದೇ ಬೆಳೆಗೆ ಅಂಟಿಕೊಳ್ಳದೆ ಮಳೆ ಕೊರತೆ ಹಾಗೂ ಹವಾಮಾನ ವೈಪರೀತ್ಯದ ಸಮಯದಲ್ಲಿ ಪರ್ಯಾಯ ಬೆಳೆ ಬೆಳೆಯುವುದು ಸೂಕ್ತ
ಯಲಬುರ್ಗಾ: ಪ್ರಸಕ್ತ ಸಾಲಿನ ಮುಂಗಾರು ಮಳೆ ಆರಂಭದಲ್ಲಿಯೇ ಸಂಪೂರ್ಣ ವಿಫಲವಾಗಿದೆ. ಹೀಗಾಗಿ ಬಿತ್ತನೆಗೊಂಡ ನಾನಾ ಬೆಳೆಗಳು ತೇವಾಂಶ ಕೊರತೆಯಿಂದ ಬಾಡುತ್ತಿದೆ. ಇದರಿಂದ ರೈತ ಸಮೂಹ ಕಂಗಾಲಾಗಿದೆ. ಆದರೆ ಮಳೆ ಕೊರತೆಯಾದಾಗ ರೈತರು ಪರ್ಯಾಯ ಬೆಳೆ ಬೆಳೆಯಲು ಕೃಷಿ ವಿಜ್ಞಾನಿಗಳು ಸಲಹೆ ನೀಡಲು ಮುಂದಾಗಿದ್ದಾರೆ.
ರೈತರು ಮುಂಗಾರು ಹಂಗಾಮಿನಲ್ಲಿ ಪ್ರತಿ ವರ್ಷದಂತೆ ಒಂದೇ ಬೆಳೆಗೆ ಅಂಟಿಕೊಳ್ಳದೆ ಮಳೆ ಕೊರತೆ ಹಾಗೂ ಹವಾಮಾನ ವೈಪರೀತ್ಯದ ಸಮಯದಲ್ಲಿ ಪರ್ಯಾಯ ಬೆಳೆ ಬೆಳೆಯುವುದು ಸೂಕ್ತ. ಇದರಿಂದ ಮಣ್ಣಿನ ಫಲವತ್ತತೆ ಹೆಚ್ಚಲು ಸಹಕಾರಿಯಾಗುತ್ತದೆ. ಇದರಿಂದ ನಷ್ಟದ ಬದಲು ಹೆಚ್ಚಿನ ಲಾಭ ಗಳಿಸಲು ಅನುಕೂಲವಾಗುತ್ತದೆ. ನೀರಿನ ಮಿತ ಬಳಕೆಯಿಂದ ಅಥವಾ ಕಡಿಮೆ ಮಳೆಗೆ ಬೆಳೆಯುವ ಸಜ್ಜೆ, ಜೋಳ, ರಾಗಿ, ಎಳ್ಳು ಹಾಗೂ ಸೂರ್ಯಕಾಂತಿ ಬೆಳೆಗೆ ಹೆಚ್ಚು ನೀರು ಬೇಕಾಗಿಲ್ಲ. ಅಲ್ಲದೆ ಬೇರೆ ಬೇರೆ ಬೆಳೆಗಳನ್ನು ಬೆಳೆಯುವುದರಿಂದ ಮಣ್ಣಿನಲ್ಲಿ ಪೋಷಕಾಂಶ ಹೆಚ್ಚುತ್ತವೆ ಎನ್ನುತ್ತಾರೆ ಕೊಪ್ಪಳ ಕೃಷಿ ವಿಸ್ತರಣಾ ಕೇಂದ್ರದ ಮುಖ್ಯಸ್ಥ ಹಾಗೂ ಕೃಷಿ ವಿಜ್ಞಾನಿ ಡಾ.ಪಿ.ಆರ್.ಬದರಿಪ್ರಸಾದ.
ಬರ ಪರಿಸ್ಥಿತಿ ಎದುರಿಸಲು ಸಜ್ಜಾಗಿ: ಮುಂಗಾರು ಮಳೆ ಸಂಪೂರ್ಣ ವಿಫಲವಾದ ಹಿನ್ನೆಲೆ ಬರ ಪರಿಸ್ಥಿತಿ ಎದುರಾಗುವ ಸಂಭವ ಹೆಚ್ಚಿದೆ. ಹೀಗಾಗಿ ರೈತರು ಬರ ಪರಿಸ್ಥಿತಿ ಎದುರಿಸಲು ಸಜ್ಜಾಗಬೇಕೆಂದು ಕೃಷಿ ವಿಜ್ಞಾನಿ ಡಾ. ಪಿ.ಆರ್. ಬದರಿಪ್ರಸಾದ ಕಳವಳ ವ್ಯಕ್ತಪಡಿಸಿದ್ದಾರೆ.
ಮಣ್ಣಿನಲ್ಲಿ ಸಾವಯವ ಅಂಶ ಹೆಚ್ಚಿಸಿದರೆ ತೇವಾಂಶ ಹಿಡಿದುಕೊಳ್ಳುವ ಶಕ್ತಿ ಹೆಚ್ಚುತ್ತದೆ. ಇದಕ್ಕಾಗಿ ಸಗಣಿಗೊಬ್ಬರ, ಎರೆಹುಳು ಗೊಬ್ಬರ ಅಥವಾ ಕಾಂಪೋಸ್ಟ್ ಗೊಬ್ಬರ ಬಳಸಬೇಕು. ಬೆಳೆ ತ್ಯಾಜ್ಯ ಸುಡದೇ ಮಣ್ಣಿನಲ್ಲಿ ಕೊಳೆಯುವಂತೆ ಮಾಡಬೇಕು ಎಂದು ತಿಳಿಸಿದ್ದಾರೆ.
ಬೆಳೆವಿಮೆ ತುಂಬಲು ಮುಂದಾಗಿ: ಪ್ರತಿಯೊಬ್ಬ ರೈತರು ಮುಂಗಾರಿನಲ್ಲಿ ಬಿತ್ತಿದ ಸಜ್ಜೆ, ಜೋಳ, ಹೆಸರು, ತೊಗರಿ, ಸೂರ್ಯಕಾಂತಿ, ಅಲಸಂದಿ, ಹತ್ತಿ, ಜೋಳ, ಎಳ್ಳು ಸೇರಿದಂತೆ ನಾನಾ ಬೆಳೆಗಳಿಗೆ ಬೆಳೆವಿಮೆ ತುಂಬಲು ಮುಂದಾಗಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಪ್ರಮೋದ ತುಂಬಳ ತಿಳಿಸಿದ್ದಾರೆ.
ಬೀಜ ಬಿತ್ತುವ ಪೂರ್ವದಲ್ಲಿ ಬೀಜಗಳನ್ನು ನೀರು ಅಥವಾ ಶೇ. ೨ರಷ್ಟು ಕ್ಯಾಲ್ಸಿಯಂ ಕ್ಲೋರೈಡ್ ದ್ರಾವಣದಲ್ಲಿ ಕಠಿಣಗೊಳಿಸಿ ಬಿತ್ತಬೇಕು. ಕೇವಲ ಮೆಕ್ಕೆಜೋಳ, ಸೂರ್ಯಕಾಂತಿಯ ಬದಲು ಕಡಿಮೆ ನೀರು ಕೇಳುವ ಸಿರಿಧಾನ್ಯ ಹಾಗೂ ಜವಾರಿ ಬೀಜ ಬಳಸಬೇಕು. ತೋಟಗಾರಿಕೆ ಬೆಳೆಗಳಾದ ನೇರಳೆ, ಬೇಲ, ಹುಣಸೆ ಮುಂತಾದ ಬರ ತಡೆಯುವ ಬೆಳೆಗಳಿಗೆ ಪ್ರೋತ್ಸಾಹ ಕೊಡಬೇಕು. ಬದುಗಳಲ್ಲಿ ಬೇವು, ಬಿಲ್ವ ಮುಂತಾದ ಅರಣ್ಯ ಸಸಿಗಳಿಗೆ ಮೀಸಲಿರಿಸಬೇಕು ಎಂದು ಕೃಷಿ ವಿಜ್ಞಾನಿ ಬದರಿಪ್ರಸಾದ ಸಲಹೆ ನೀಡಿದ್ದಾರೆ. ಈ ವೇಳೆ ಉಪ ಕೃಷಿ ನಿರ್ದೇಶಕ ಸಿದ್ದೇಶ್ವರ, ಕೃಷಿ ಅಧಿಕಾರಿ ಬಾಲಪ್ಪ ಜಲಗೇರಿ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.