ಹಾವೇರಿ: ಹೃದಯ ಸಂಬಂಧಿ ಕಾಯಿಲೆಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡಲು ಸರ್ಜಿ ರೇಣುಕಾ ದೇವಧರ ಆಸ್ಪತ್ರೆಯಲ್ಲಿ ಜಿಲ್ಲೆಯಲ್ಲಿಯೇ ಮೊದಲ ಕ್ಯಾತ್‌ಲ್ಯಾಬ್ ಸೌಲಭ್ಯ ಕಲ್ಪಿಸಲಾಗಿದೆ. ರೋಗಿಗಳಿಗೆ ಕಡಿಮೆ ವೆಚ್ಚದಲ್ಲಿ ಆಂಜಿಯೋಗ್ರಾಮ್ ಹಾಗೂ ಆಂಜಿಯೋಪ್ಲಾಸ್ಟಿ ಸೇರಿದಂತೆ ಅತ್ಯಾಧುನಿಕ ಚಿಕಿತ್ಸೆ ಸ್ಥಳೀಯವಾಗಿಯೇ ದೊರೆಯಲಿದೆ ಎಂದು ವಿಧಾನ ಪರಿಷತ್ ಸದಸ್ಯ, ಸರ್ಜಿ ಗ್ರೂಪ್ಸ್ ಮುಖ್ಯಸ್ಥ ಡಾ. ಧನಂಜಯ ಸರ್ಜಿ ತಿಳಿಸಿದರು.
ಜಿಲ್ಲೆಯ ಆರೋಗ್ಯ ಸೇವೆಗಳು ಇನ್ನೂ ಹಲವು ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದಬೇಕಿದೆ. ಸಾಮಾನ್ಯ ವೈದ್ಯಕೀಯ, ಶಸ್ತ್ರಚಿಕಿತ್ಸೆ, ಸ್ತ್ರೀರೋಗ, ಅಸ್ಥಿರೋಗ ಸೇರಿದಂತೆ ಸೂಪರ್ ಸ್ಪೆಷಾಲಿಟಿ ವಿಭಾಗಗಳಾದ ನೆಫ್ರಾಲಜಿ, ಹೃದಯ ಚಿಕಿತ್ಸೆ, ನ್ಯೂರೋಸರ್ಜರಿ ಮುಂತಾದ ಉನ್ನತ ಮಟ್ಟದ ಚಿಕಿತ್ಸಾ ಸೌಲಭ್ಯಗಳ ಕೊರತೆ ಜಿಲ್ಲೆಯಲ್ಲಿ ಕಂಡುಬರುತ್ತಿದೆ. ಮೂರು ತಿಂಗಳ ಹಿಂದೆ ಸೇವೆಗೆ ಸೇರ್ಪಡೆಯಾದ ಡಾ. ದೀಪಕ್ ಈಗಾಗಲೇ ಅನೇಕ ಹೃದಯ ರೋಗಿಗಳ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸುಮಾರು 42 ಹೃದಯ ರೋಗಿಗಳನ್ನು ಶಿವಮೊಗ್ಗಕ್ಕೆ ಸುರಕ್ಷಿತವಾಗಿ ಕರೆದೊಯ್ದು ಸ್ಟೆಂಟ್ ಅಳವಡಿಕೆ ಸೇರಿದಂತೆ ಅಗತ್ಯ ಚಿಕಿತ್ಸೆ ಕೊಡಿಸಿ ಜೀವ ಉಳಿಸಿರುವುದು ಗಮನಾರ್ಹ ಸಾಧನೆಯಾಗಿದೆ ಎಂದರು.
ಹೃದಯಾಘಾತದ ಸಂದರ್ಭದಲ್ಲಿ ಸಾಧ್ಯವಾದಷ್ಟು ಬೇಗ ಚಿಕಿತ್ಸೆ ನೀಡುವುದು ಅತ್ಯಂತ ಮುಖ್ಯ. ಹೃದಯದ ಸ್ನಾಯುಗಳಿಗೆ ರಕ್ತ ಪೂರೈಕೆ ಸ್ಥಗಿತಗೊಂಡರೆ ಅದರ ಪಂಪಿಂಗ್ ಸಾಮರ್ಥ್ಯ ಕುಂಠಿತವಾಗುತ್ತದೆ. ಆದ್ದರಿಂದ ಗೋಲ್ಡನ್ ಅವರ್‌ನಲ್ಲೇ ಚಿಕಿತ್ಸೆ ದೊರೆತರೆ ರೋಗಿಯ ಜೀವ ಉಳಿಸುವ ಸಾಧ್ಯತೆ ಹೆಚ್ಚಾಗುತ್ತದೆ. ಎಲ್ಲ ಮೆಡಿಕಲ್ ಕಾಲೇಜುಗಳಲ್ಲಿ ಕ್ಯಾತ್ ಲ್ಯಾಬ್ ಆರಂಭಿಸುವಂತೆ ಸದನದಲ್ಲಿ ಒತ್ತಾಯಿಸಿದ್ದೇನೆ. ಇದು ಎಲ್ಲ ಜಿಲ್ಲೆಗಳಲ್ಲಿ ಆಗಬೇಕಿದೆ ಎಂದರು.ಹೃದಯ ತಜ್ಞ ಡಾ. ದೀಪಕ್ ಮಾತನಾಡಿ, ಚಿಕಿತ್ಸೆಗಾಗಿ ದೂರದ ಊರುಗಳಿಗೆ ಪ್ರಯಾಣಿಸುವಾಗಲೇ ಜಿಲ್ಲೆಯ ಅನೇಕರು ಜೀವ ಕಳೆದುಕೊಂಡಿದ್ದಾರೆ. ಕಳೆದ ಮೂರು ತಿಂಗಳಲ್ಲಿ 114 ಹೃದಯ ರೋಗಿಗಳನ್ನು ಪರೀಕ್ಷಿಸಿ, ಎಂಜಿಯೋಗ್ರಾಮ್‌ಗೆ ಗುರುತಿಸಿದೆ. ಕ್ಯಾಥ್ ಲ್ಯಾಬ್ ನಿರ್ಮಾಣ ಹಂತದಲ್ಲಿದ್ದ ಕಾರಣ ಸ್ವತಃ ಶಿವಮೊಗ್ಗಕ್ಕೆ ತೆರಳಿ 45 ರೋಗಿಗಳಿಗೆ ಚಿಕಿತ್ಸೆ ವ್ಯವಸ್ಥೆ ಮಾಡಿದ್ದು, ಅವರಲ್ಲಿ 42 ಮಂದಿಗೆ ಯಶಸ್ವಿಯಾಗಿ ಸ್ಟೆಂಟ್ ಅಳವಡಿಸಲಾಗಿದೆ. ಇದೇ ಅವಧಿಯಲ್ಲಿ ಬೇರೆ ಆಸ್ಪತ್ರೆಗಳಿಗೆ ತೆರಳುವ ವೇಳೆ ಐವರು ರೋಗಿಗಳು ದಾರಿಮಧ್ಯೆ ಮೃತಪಟ್ಟಿರುವುದು ನೋವು ತಂದಿದೆ. ಆಸ್ಪತ್ರೆಯ ವೈದ್ಯರು, ತಜ್ಞರು ಮತ್ತು ಸಿಬ್ಬಂದಿ ಎಲ್ಲರೂ ಒಗ್ಗಟ್ಟಿನಿಂದ ಜನಸೇವೆಗೆ ಬದ್ಧರಾಗಿದ್ದು, ಹಾವೇರಿ ಜಿಲ್ಲೆಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ಗುರಿಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದೇವೆ ಎಂದರು.