ಹಾವೇರಿ: ಹಿರಿಯ ನಾಗರಿಕರು ಹಾಗೂ ವಿಶೇಷಚೇತನರ ಸಮಸ್ಯೆಗಳಿಗೆ ಸರ್ಕಾರ ಸದಾ ಸ್ಪಂದಿಸಲಿದೆ. ಪಿಂಚಣಿ ಸೇರಿದಂತೆ ವಿವಿಧ ಸೌಲಭ್ಯಗಳಿಗೆ ಸಂಬಂಧಿಸಿದ ಸಮಸ್ಯೆಗಳಿದ್ದಲ್ಲಿ ಅಧಿಕಾರಿಗಳ ಗಮನಕ್ಕೆ ತಂದರೆ ಅವುಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ವಿಧಾನಸಭೆ ಸಭಾಧ್ಯಕ್ಷ, ಶಾಸಕ ರುದ್ರಪ್ಪ ಲಮಾಣಿ ಹೇಳಿದರು.
ಹಿರಿಯ ನಾಗರಿಕರು ಹಾಗೂ ವಿಶೇಷಚೇತನರಿಗೆ ಕೇಂದ್ರ ಸರ್ಕಾರದ ವತಿಯಿಂದ ಕನ್ನಡಕ, ವೀಲ್‌ಚೇರ್, ಕಮೋಡ್ ಹೊಂದಿದ ವೀಲ್‌ಚೇರ್, ವಾಕಿಂಗ್ ಸ್ಟಿಕ್ ಸೇರಿದಂತೆ ಅಗತ್ಯ ಸಹಾಯಕ ಸಾಧನಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಇಂತಹ ಯೋಜನೆಗಳು ಫಲಾನುಭವಿಗಳ ಜೀವನಮಟ್ಟವನ್ನು ಉತ್ತಮಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದರು.
ವಿಶೇಷಚೇತನರ ಪ್ರಮಾಣಪತ್ರ ಪಡೆಯಲು ಹಾವೇರಿಯ ಜನರು ಹುಬ್ಬಳ್ಳಿ ಅಥವಾ ದಾವಣಗೆರೆಗೆ ತೆರಳಬೇಕಾಗಿರುವ ತೊಂದರೆಯನ್ನು ನಿವಾರಿಸುವ ಉದ್ದೇಶದಿಂದ ಹಾವೇರಿಯಲ್ಲಿಯೇ ಪ್ರಮಾಣಪತ್ರ ನೀಡಲು, ಕೇಂದ್ರದ ಅನುಮತಿ ದೊರೆತರೆ ಈ ಸೇವೆಯನ್ನು ಹಾವೇರಿಯಲ್ಲೇ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು. ಹಿರಿಯರು ಆರೋಗ್ಯ ಕಾಪಾಡಿಕೊಂಡು ವ್ಯಾಯಾಮ ಹಾಗೂ ಸಕ್ರಿಯ ಜೀವನಶೈಲಿಯನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ಸಮಾಜದ ಪ್ರಗತಿಯಲ್ಲಿ ಹಿರಿಯ ನಾಗರಿಕರ ಪಾತ್ರ ಅಮೂಲ್ಯವಾಗಿದೆ. ಹಿರಿಯರನ್ನು ಗೌರವಿಸುವುದು ಭಾರತೀಯ ಸಂಸ್ಕೃತಿಯ ವೈಶಿಷ್ಟ್ಯವಾಗಿದ್ದು, ಕುಟುಂಬ ವ್ಯವಸ್ಥೆ ಮತ್ತು ಮಾನವೀಯ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಉಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹೇಳಿದರು.
ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಆರ್. ಪಾಟೀಲ ಮಾತನಾಡಿ, ಇಂದಿನ ಬದಲಾಗುತ್ತಿರುವ ಜೀವನಶೈಲಿಯಲ್ಲಿ ಹಿರಿಯರ ಆರೈಕೆ ಮತ್ತು ಗೌರವಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗದ ನಿಮಿತ್ತ ಮಕ್ಕಳು ನಗರಗಳಿಗೆ ತೆರಳುತ್ತಿರುವ ಹಿನ್ನೆಲೆಯಲ್ಲಿ ಹಿರಿಯರ ಆರೈಕೆಗೆ ಕುಟುಂಬ ಸದಸ್ಯರು ಹೆಚ್ಚಿನ ಕಾಳಜಿ ವಹಿಸಬೇಕು. ಹಿರಿಯರ ಆಶೀರ್ವಾದ ಹಾಗೂ ಮಾರ್ಗದರ್ಶನ ಸಮಾಜಕ್ಕೆ ಅತ್ಯಂತ ಅಗತ್ಯವಾಗಿದ್ದು, ಅವರ ಕಲ್ಯಾಣಕ್ಕಾಗಿ ಸರ್ಕಾರ ತನ್ನ ಕರ್ತವ್ಯವನ್ನು ನಿರಂತರವಾಗಿ ನಿರ್ವಹಿಸುತ್ತಿದೆ ಎಂದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಹುಟ್ಟಿನಿಂದ ವೃದ್ಧಾಪ್ಯದವರೆಗೆ ಪ್ರತಿಯೊಂದು ಹಂತಕ್ಕೂ ಕೇಂದ್ರ ಸರ್ಕಾರ ವಿವಿಧ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು, ರಾಷ್ಟ್ರೀಯ ವಯೋಶ್ರೀ ಯೋಜನೆಯೂ ಅದರಲ್ಲಿ ಪ್ರಮುಖವಾಗಿದೆ. ಯೋಜನೆಯಡಿ ಸುಮಾರು 1,364 ಫಲಾನುಭವಿಗಳಿಗೆ ಸುಮಾರು 80 ಲಕ್ಷ ರು. ಮೌಲ್ಯದ ವಿವಿಧ ಸಹಾಯಕ ಸಾಧನ-ಸಲಕರಣೆಗಳನ್ನು ವಿತರಿಸಲಾಗುತ್ತಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.