ಭೂಮಿಯ ಸಂಪನ್ಮೂಲಗಳಲ್ಲಿ ಮಣ್ಣು ಶ್ರೇಷ್ಠವಾದ ಸಂಪತ್ತು: ಅತೀಫ ಮುನೆವ್ವರಿ

KannadaprabhaNewsNetwork |  
Published : Jul 19, 2024, 12:48 AM IST
18ಕೆಎಂಎನ್ ಡಿ24 | Kannada Prabha

ಸಾರಾಂಶ

ಆಧುನಿಕ ಜೀವನಶೈಲಿಗೆ ಹೊಂದಿಕೊಳ್ಳುತ್ತಿರುವ ನಾವು ವಿಷಯುಕ್ತ ಆಹಾರ ಪದಾರ್ಥ ಬಳಸುವ ದುಸ್ಥಿತಿಗೆ ತಲುಪಿದ್ದೇವೆ. ಅದರಿಂದ ಆಚೆ ಬಂದು ಪೋಷಕಾಂಶ ಭರಿತ ಆಹಾರ ಕ್ರಮ ರೂಢಿಸಿಕೊಳ್ಳಬೇಕಾದಲ್ಲಿ ಪ್ರತಿಯೊಬ್ಬರೂ ಮೊದಲು ಮಣ್ಣಿನ ಸಂರಕ್ಷಣೆ ಮಾಡುವ ಮೂಲಕ ಮುಂದಿನ ಪೀಳಿಗೆಯನ್ನೂ ಕೂಡ ರಕ್ಷಿಸಬೇಕಿದೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಭೂಮಿ ಮೇಲಿರುವ ಸಂಪನ್ಮೂಲಗಳಲ್ಲಿ ಮಣ್ಣು ಅತ್ಯಂತ ಶ್ರೇಷ್ಠವಾದ ಸಂಪತ್ತು. ಮಣ್ಣಿನ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಬೇಕು ಎಂದು ಮಂಡ್ಯ ವಿ.ಸಿ.ಫಾರ್ಮ್ ಕೃಷಿ ವಿಜ್ಞಾನಿ ಅತೀಫ ಮುನೆವ್ವರಿ ಹೇಳಿದರು.

ತಾಲೂಕಿನ ನರಗನಹಳ್ಳಿಯಲ್ಲಿ ಕೃಷಿ ಇಲಾಖೆಯಿಂದ ರಾಷ್ಟ್ರೀಯ ಪೌಷ್ಟಿಕ ಮತ್ತು ಆಹಾರ ಭದ್ರತಾ ಯೋಜನೆಯಡಿ ಆಯೋಜಿಸಿದ್ದ ನ್ಯೂಟ್ರಿಸಿರಿಯಲ್ಸ್ ರಾಗಿ ಬೆಳೆ ಪ್ರಾತ್ಯಕ್ಷಿಕೆ ಹಾಗೂ ಬೀಜೋಪಚಾರ ಆಂದೋಲನ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಆಧುನಿಕ ಜೀವನಶೈಲಿಗೆ ಹೊಂದಿಕೊಳ್ಳುತ್ತಿರುವ ನಾವು ವಿಷಯುಕ್ತ ಆಹಾರ ಪದಾರ್ಥ ಬಳಸುವ ದುಸ್ಥಿತಿಗೆ ತಲುಪಿದ್ದೇವೆ. ಅದರಿಂದ ಆಚೆ ಬಂದು ಪೋಷಕಾಂಶ ಭರಿತ ಆಹಾರ ಕ್ರಮ ರೂಢಿಸಿಕೊಳ್ಳಬೇಕಾದಲ್ಲಿ ಪ್ರತಿಯೊಬ್ಬರೂ ಮೊದಲು ಮಣ್ಣಿನ ಸಂರಕ್ಷಣೆ ಮಾಡುವ ಮೂಲಕ ಮುಂದಿನ ಪೀಳಿಗೆಯನ್ನೂ ಕೂಡ ರಕ್ಷಿಸಬೇಕಿದೆ ಎಂದರು.

ರಾಗಿ ಬೆಳೆಯ ಇಳುವರಿ ಪ್ರಮಾಣ ಹೆಚ್ಚಿಸಲು ರೈತರು ಕೊಟ್ಟಿಗೆ ಗೊಬ್ಬರದ ಜೊತೆಗೆ ಪೊಟ್ಯಾಷ್ ಮತ್ತು ಲಘು ಪೋಷಕಾಂಶಗಳನ್ನು ಬಳಸಬೇಕು ಎಂದರು.

ಸಹಾಯಕ ಕೃಷಿ ನಿರ್ದೇಶಕ ಆರ್.ಹರೀಶ್ ಮಾತನಾಡಿ, ರೈತರು ತಾವು ಮಾಡುವ ಕೃಷಿ ಚಟುವಟಿಕೆಗಳಲ್ಲಿ ಅಗತ್ಯಕ್ಕೂ ಮೀರಿ ರಸಗೊಬ್ಬರ ಬಳಕೆ ಮಾಡುವುದರಿಂದ ಮಣ್ಣಿನ ಸ್ವಾಸ್ತ್ಯ ಹಾಳಾಗುತ್ತಿದೆ. ಕೃಷಿ ಭೂಮಿ ಫಲವತ್ತತೆ ಮತ್ತು ಬೆಳೆಯ ಇಳುವರಿ ಪ್ರಮಾಣ ಹೆಚ್ಚು ಮಾಡಲು ಹಸಿರೆಲೆಗೊಬ್ಬರವನ್ನು ಹೆಚ್ಚು ಬಳಕೆ ಮಾಡಬೇಕು. ಸಾವಯವ ಗೊಬ್ಬರದಿಂದ ಬೆಳೆಯುವ ಬೆಳೆಗಳೂ ಸಹ ಪೌಷ್ಟಿಕಾಂಶ ಭರಿತವಾಗಿರುತ್ತವೆ ಎಂದರು.

ರಾಗಿ ಬೆಳೆಯ ಬೇಸಾಯಕ್ರಮದಲ್ಲಿ ರೈತರು ಕೂರಿಗೆ ತಾಂತ್ರಿಕತೆ ಅಳವಡಿಕೆ ಮಾಡಿಕೊಂಡಲ್ಲಿ ರಾಗಿ ಬೆಳೆಗೆ ಯಾವುದೇ ರೋಗಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ. ಅಲ್ಲದೇ, ಕಟಾವಿನ ಸಮಯದಲ್ಲಿ ತೆನೆಗಳೂ ಕೂಡ ಬಾಗುವುದಿಲ್ಲ ಎಂದರು.

ಇಲಾಖೆ ಯೋಜನೆಗಳಾದ ಕೃಷಿ ಭಾಗ್ಯ, ಬೆಳೆ ವಿಮೆ ಹಾಗೂ 2024-25ನೇ ಸಾಲಿನ ಕೃಷಿ ಪ್ರಶಸ್ತಿ ಕುರಿತು ಮಾಹಿತಿ ನೀಡಿದ ಬಳಿಕ ರೈತರ ಜಮೀನಿನಲ್ಲಿ ಪ್ರಾಯೋಗಿಕವಾಗಿ ಕೂರಿಗೆ ಬಿತ್ತನೆ ಮಾಡಿ ತೋರಿಸಲಾಯಿತು. ಬೀಜೋಪಚಾರದ ಪ್ರಾಮುಖ್ಯತೆ, ಬೀಜ ಹದಗೊಳಿಸುವಿಕೆ ಕುರಿತು ನಿವೃತ್ತ ಕೃಷಿ ಅಧಿಕಾರಿ ಮಂಜುನಾಥ ವಿ.ಪಟಗಾರ್ ಮಾಹಿತಿ ನೀಡಿ, ಬಿತ್ತನೆಗೂ ಮುನ್ನ ಬೀಜೋಪಚಾರ ಮಾಡುವ ಕುರಿತು ರೈತರಿಗೆ ಪ್ರಾತ್ಯಕ್ಷಿತೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಕೃಷಿ ಅಧಿಕಾರಿ ರಾಜೇಶ್, ತಾಂತ್ರಿಕ ಅಧಿಕಾರಿ ಯುವರಾಜ್, ತಾಂತ್ರಿಕ ವ್ಯವಸ್ಥಾಪಕಿ ನಂದಿನಿ, ಎಂಪಿಸಿಎಸ್‌ಮಾಜಿ ಅಧ್ಯಕ್ಷ ಬೆಟ್ಟಸ್ವಾಮಿಗೌಡ, ಮುಖಂಡ ರಾಜು, ಇಲಾಖೆಯ ಆತ್ಮ ಸಿಬ್ಬಂದಿ ಹಾಗೂ ಗ್ರಾಮದ ಮುಖ್ಯಸ್ಥರು ಉಪಸ್ಥಿತರಿದ್ದರು.

PREV

Recommended Stories

ಶಾಸಕರ ಭರವಸೆಗೆ ಧರಣಿ ಹಿಂಪಡೆದ ಚಲವಾದಿ ಸಮಾಜ
ರಾಜ್ಯಾದ್ಯಂತ ಏಕರೂಪ ಬೆಲೆ ನಿಗದಿಗೊಳಿಸಲು ಒತ್ತಾಯ