ಅನುಮತಿ ಇಲ್ಲದೇ 102 ಹೆಕ್ಟೇರ್‌ನಲ್ಲಿ ಸೋಲಾರ್ ಪ್ಯಾನಲ್‌ ಅಳವಡಿಕೆ!

KannadaprabhaNewsNetwork |  
Published : May 08, 2026, 02:15 AM IST
ನೀರಾವರಿ ನಿಗಮ ಪೈಪ್‌ಲೈನ್ ಅಳವಡಿಸಿರುವ ಹೊಲಗಳಲ್ಲಿಯೇ ಖಾಸಗಿ ಕಂಪನಿ ಸೋಲಾರ್ ಅಳವಡಿಸಿರುವುದು. | Kannada Prabha

ಸಾರಾಂಶ

ಸಿಂಗಟಾಲೂರು ಏತ ನೀರಾವರಿ ಯೋಜನೆಯನ್ನು ಸರ್ಕಾರ ಸೂಕ್ಷ್ಮ ನೀರಾವರಿ ಯೋಜನೆಯನ್ನಾಗಿ ರೂಪಿಸಿದ್ದು, ಮುಂಡರಗಿ ತಾಲೂಕಿನಾದ್ಯಂತ ಕಾಲುವೆ ಮೂಲಕ ನೀರು ತಲುಪಿಸಲು ಆಗದೇ ಇರುವ ರೈತರ ಜಮೀನುಗಳಿಗೆ ಹನಿ ನೀರಾವರಿ ಮೂಲಕ ನೀರಾವರಿ ಸೌಲಭ್ಯ ಕಲ್ಪಿಸುವ ಮಹತ್ವದ ಯೋಜನೆ ಇದಾಗಿದೆ.

ಶಿವಕುಮಾರ ಕುಷ್ಟಗಿ

ಗದಗ: ಜಿಲ್ಲೆಯಲ್ಲಿ ಗಾಳಿ ವಿದ್ಯುತ್ ಉತ್ಪಾದನಾ ಕಂಪನಿಗಳು, ಸೋಲಾರ್ ವಿದ್ಯುತ್‌ ಕಂಪನಿಗಳು ಜಿಲ್ಲಾಡಳಿತವನ್ನು ತನ್ನ ಇಚ್ಛೆಯಂತೆ ಕುಣಿಸುತ್ತಿದ್ದು, ಇದಕ್ಕೆ ಪರೋಕ್ಷವಾಗಿ ಜಿಲ್ಲಾಧಿಕಾರಿ, ಜಿಲ್ಲೆಯ ಜನಪ್ರತಿನಿಧಿಗಳು ಸಾಥ್ ನೀಡುತ್ತಿರುವ ಹಿನ್ನೆಲೆ ಮುಂಡರಗಿ ತಾಲೂಕಿನ ಡಂಬಳ ಹೋಬಳಿಯಲ್ಲಿ ನೀರಾವರಿ ಇಲಾಖೆಯ ಅನುಮತಿ ಇಲ್ಲದೇ ಖಾಸಗಿ ಕಂಪನಿಯೊಂದು 102 ಹೆಕ್ಟೇರ್ ಪ್ರದೇಶದಲ್ಲಿ ಸೋಲಾರ್ ಪ್ಯಾನಲ್‌ ಅಳವಡಿಸಿದ ಪ್ರಕರಣ ಬೆಳಕಿಗೆ ಬಂದಿದೆ.

ಸಿಂಗಟಾಲೂರು ಏತ ನೀರಾವರಿ ಯೋಜನೆಯನ್ನು ಸರ್ಕಾರ ಸೂಕ್ಷ್ಮ ನೀರಾವರಿ ಯೋಜನೆಯನ್ನಾಗಿ ರೂಪಿಸಿದ್ದು, ಮುಂಡರಗಿ ತಾಲೂಕಿನಾದ್ಯಂತ ಕಾಲುವೆ ಮೂಲಕ ನೀರು ತಲುಪಿಸಲು ಆಗದೇ ಇರುವ ರೈತರ ಜಮೀನುಗಳಿಗೆ ಹನಿ ನೀರಾವರಿ ಮೂಲಕ ನೀರಾವರಿ ಸೌಲಭ್ಯ ಕಲ್ಪಿಸುವ ಮಹತ್ವದ ಯೋಜನೆ ಇದಾಗಿದೆ.

ಅಂದಾಜು ₹480 ಕೋಟಿ ವೆಚ್ಚದ ಏತ ನೀರಾವರಿ ಯೋಜನೆ ಇದಾಗಿದೆ. ಇದರ ಭಾಗವಾಗಿ ಈಗಾಗಲೇ ಡಂಬಳ ಹೋಬಳಿ ವ್ಯಾಪ್ತಿಯಲ್ಲಿನ ರೈತ ಜಮೀನುಗಳಲ್ಲಿ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ಹನಿ ನೀರಾವರಿಯ ಪೈಪ್‌ಲೈನ್‌ಗಳನ್ನು ಅ‍ಳವಡಿಸಿದ್ದಾರೆ. ಆದರೆ ಸೋಲಾರ್ ವಿದ್ಯುತ್ ಉತ್ಪಾದನೆ ಮಾಡುವ ಕಂಪನಿಯೊಂದು ಅದೇ ಜಮೀನುಗಳಲ್ಲಿ (102 ಹೆಕ್ಟೇರ್‌) ನೀರಾವರಿ ಇಲಾಖೆಯ ಅನುಮತಿ ಪಡೆಯದೇ ಸೋಲಾರ್ ಪ್ಯಾನಲ್‌ ಅಳವಡಿಕೆ ಮಾಡಲು ಹನಿ ನೀರಾವರಿಯ ಪೈಪ್‌ಲೈನ್‌ಗಳನ್ನು ಸಂಪೂರ್ಣವಾಗಿ ತೆಗೆದು ಹಾಕಿ ಇಲಾಖೆಗೆ ಅಪಾರ ನಷ್ಟ ಉಂಟು ಮಾಡಿದ್ದಾರೆ. ಅನುಮತಿ ಪಡೆದಿಲ್ಲ: ಡಂಬಳ ಹೋಬಳಿ ವ್ಯಾಪ್ತಿಯ 102 ಹೆಕ್ಟೇರ್‌ನಲ್ಲಿ ಎರಡನೇ ಹಂತದ ಯೋಜನೆಯಲ್ಲಿ ಕರ್ನಾಟಕ ನೀರಾವರಿ ನಿಗಮ ಪೈಪ್‌ಲೈನ್ ಅಳವಡಿಸಿದೆ. ಎರಡನೇ ಹಂತದ ಯೋಜನೆ ಮುಕ್ತಾಯಗೊಂಡ ನಂತರ ಪೈಪ್‌ಲೈನ್ ಮೂಲಕ ನೀರು ಪೂರೈಸುವ ಉದ್ದೇಶ ಹೊಂದಲಾಗಿತ್ತು. ಈ ನಡುವೆ ಖಾಸಗಿ ಸೋಲಾರ್ ಕಂಪನಿಯು ಸೋಲಾರ್ ವಿದ್ಯುತ್ ಉತ್ಪಾದನೆಗೆ ಸ್ಥಳಿಯ ಮಧ್ಯಸ್ಥಿಕೆದಾರರಿಂದ ಡಂಬಳ ಹೋಬಳಿ ವ್ಯಾಪ್ತಿಯಲ್ಲಿ 102 ಹೆಕ್ಟೇರ್ ಜಮೀನು ಖರೀದಿಸಿ, ನೀರಾವರಿ ನಿಗಮ ಈಗಾಗಲೇ ಅಳವಡಿಸಿದ್ದ ಪೈಪ್‌ಲೈನ್ ಅನುಮತಿ ಪಡೆಯದೇ ಕಿತ್ತೆಸೆದು ಸೋಲಾರ್ ಅಳವಡಿಸಿದೆ.

ನೋಟಿಸ್‌ಗೂ ಉತ್ತರವಿಲ್ಲ: ಈ ವಿಷಯ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಗಮನಕ್ಕೆ ಬಂದ ನಂತರ ಖಾಸಗಿ ಕಂಪನಿಗೆ ಜನವರಿಯಲ್ಲೇ ನೋಟಿಸ್ ನೀಡಿ ಯೋಜನೆಯನ್ನು ತುರ್ತು ಸ್ಥಗಿತಗೊಳಿಸುವಂತೆ ಸೂಚಿಸಿತ್ತು. ನೋಟಿಸ್‌ಗೆ ಖಾಸಗಿ ಕಂಪನಿ ಉತ್ತರಿಸದ ಕಾರಣ ಈ ಭಾಗದಲ್ಲಿ ಅಳವಡಿಸಿದ್ದ ಪೈಪ್‌ಲೈನ್ ನಷ್ಟಕ್ಕೆ ₹4.62 ಕೋಟಿ ನಷ್ಟ ಭರಿಸುವಂತೆ ಸೋಲಾರ್ ವಿದ್ಯುತ್‌ ಕಂಪನಿಗೆ ಪತ್ರ ಬರೆದಿದೆ. ಜಿಲ್ಲೆಯ ಇತರೆ ಭಾಗದಲ್ಲಿ ಯೋಜನೆ ಆರಂಭಿಸುವ ಮುನ್ನ ನೀರಾವರಿ ಇಲಾಖೆಯನ್ನು ಸಂಪರ್ಕಿಸುವಂತೆ ಸೂಚಿಸಿದೆ. ಇದಾವುದಕ್ಕೂ ಖಾಸಗಿ ಸೋಲಾರ್ ಕಂಪನಿ ಪ್ರತಿಕ್ರಿಯೆ ನೀಡದ ಕಾರಣ ಕರ್ನಾಟಕ ನೀರಾವರಿ ನಿಗಮವು ಖಾಸಗಿ ಕಂಪನಿ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದೆ.

ಜಿಲ್ಲಾಡಳಿತವೇ ಕಾರಣ:

ಖಾಸಗಿ ಸೋಲಾರ್ ವಿದ್ಯುತ್ ಉತ್ಪಾದನಾ ಕಂಪನಿಗೆ ಈಗಾಗಲೇ ಹನಿ ನೀರಾವರಿ ಸೌಲಭ್ಯ ಹೊಂದಿರುವ ಜಮೀನುಗಳ ಮಾಹಿತಿಯನ್ನು ನೀಡುವ ಮೂಲಕ ಪರೋಕ್ಷವಾಗಿ ಜಿಲ್ಲಾಡಳಿತವೇ ಕಾರಣವಾಗಿದೆ. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿಯೇ ಇದು ಅಂತಿಮವಾಗುತ್ತದೆ. ಆ ಸಂದರ್ಭದಲ್ಲಿ ಮಾಹಿತಿ ನೀಡಬೇಕಾದ ಹಿರಿಯ ಅಧಿಕಾರಿಗಳು ಮಾಡಿದ ತಪ್ಪಿನಿಂದಾಗಿ ನೀರಾವರಿ ಇಲಾಖೆಯ ಅಧಿಕಾರಿಗಳು ಪೇಚಾಡುವಂತಾಗಿದೆ.

ಪ್ರತಿಕ್ರಿಯೆ ನೀಡಿಲ್ಲ: ಮುಂಡರಗಿ ತಾಲೂಕಿನ ಹಲವೆಡೆ ಪೈಪ್‌ಲೈನ್ ಅಳವಡಿಸುವ ಕಾಮಗಾರಿ ನಡೆಯುತ್ತಿದೆ. ಇನ್ನೂ ಕಾಮಗಾರಿ ನಡೆಯುತ್ತಿರುವ ಸಂದರ್ಭದಲ್ಲೇ ಸೋಲಾರ್ ವಿದ್ಯುತ್‌ ಕಂಪನಿ ಅನುಮತಿ ಇಲ್ಲದೇ ಅಳವಡಿಸಿದ ಪೈಪ್‌ಲೈನ್ ಹೊರತೆಗೆದು ಸೋಲಾರ್ ಪ್ಯಾನಲ್ ಅಳವಡಿಸಿದ್ದಾರೆ. ಈಗಾಗಲೇ ಕಂಪನಿಗೆ 102 ಹೆಕ್ಟೇರ್‌ ವ್ಯಾಪ್ತಿಯಲ್ಲಿ ಆಗಿರುವ ₹4.62 ಕೋಟಿ ನಷ್ಟ ಭರಿಸುವಂತೆ ಪತ್ರ ಬರೆದರೂ ಪ್ರತಿಕ್ರಿಯೆ ನೀಡಿಲ್ಲ. ಕರ್ನಾಟಕ ನೀರಾವರಿ ನಿಗಮದದಿಂದ ಕಂಪನಿಯ ವಿರುದ್ಧ ದಾವೆ ಹೂಡಲು ತೀರ್ಮಾನಿಸಲಾಗಿದೆ ಎಂದು ಸಿಂಗಟಾಲೂರು ಏತ ನೀರಾವರಿಯ ಇಇ ಐ. ಪ್ರಕಾಶ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರಾಣಿ, ಪಕ್ಷಿ ನಿರ್ಲಕ್ಷಿಸಿದರೆ ಪರಿಸರ ನಾಶ: ಈಶ್ವರಪ್ಪ ಹಂಚಿನಾಳ
ಶಿಕ್ಷಕರ ಕೈಯಲ್ಲಿದೆ ಸರ್ಕಾರಿ ಶಾಲೆಗಳ ಭವಿಷ್ಯ: ಆನಂದಗೌಡ ಪಾಟೀಲ