ಹಾವೇರಿ ಜಿಲ್ಲೆಯ ವಿವಿಧೆಡೆ ಸುರಿದ ಮಳೆ

KannadaprabhaNewsNetwork |  
Published : May 08, 2026, 02:00 AM IST
ಹಾವೇರಿ ನಗರದಲ್ಲಿ ಗುರುವಾರ ಸಂಜೆ ಸುರಿದ ಮಳೆಗೆ ಎಲ್‌ಬಿಎಸ್ ತರಕಾರಿ ಮಾರುಕಟ್ಟೆ ಅಸ್ತವ್ಯಸ್ತವಾಯಿತು. | Kannada Prabha

ಸಾರಾಂಶ

ಹಾವೇರಿ ಜಿಲ್ಲೆಯ ವಿವಿಧೆಡೆ ಮೇ 7ರಂದು ಉತ್ತಮ ಮಳೆ ಸುರಿದಿದೆ. ಲಾಲ್ ಬಹದ್ದೂರ ಶಾಸ್ತ್ರಿ ತರಕಾರಿ ಮಾರುಕಟ್ಟೆಯಲ್ಲಿ ತರಕಾರಿ, ಹಣ್ಣು ತೇಲಿಹೋಯಿತು.

ಹಾವೇರಿ: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಗುರುವಾರ ನಸುಕಿನಲ್ಲಿ ನಾಲ್ಕು ಹನಿ ಚೆಲ್ಲಿ ಹೋಗಿದ್ದ ಮಳೆ ಮಧ್ಯಾಹ್ನ ಅರ್ಧ ಗಂಟೆಗೂ ಹೆಚ್ಚು ಕಾಲ ಜೋರಾಗಿ ಸುರಿದು, ವಾತಾವರಣ ಸ್ವಲ್ಪ ತಂಪಾಗುವಂತೆ ಮಾಡಿತು.

ಕಳೆದ ಹಲವು ದಿನಗಳಿಂದ ಬಿರು ಬಿಸಿಲಿನ ತಾಪ, ಸೆಕೆ ಹೆಚ್ಚಳವಾಗಿದ್ದು, ಗುರುವಾರ ಮಧ್ಯಾಹ್ನ ಸುರಿದ ಮಳೆ ಧರೆಗೆ ತಂಪೆರೆಯಿತು. ಜಿಲ್ಲಾ ಕೇಂದ್ರ ಹಾವೇರಿ ನಗರದ ಕೆಲವು ಭಾಗಗಳಲ್ಲಿ ಬೆಳಗ್ಗೆಯೂ ಸ್ವಲ್ಪ ಮಳೆಯಾದರೆ, ಇನ್ನೂ ಕೆಲಭಾಗಗಳಲ್ಲಿ ತುಂತುರು ಮಳೆಯಾಯಿತು. ಮಧ್ಯಾಹ್ನ 12 ಗಂಟೆಯಿಂದ ಬಿಸಿಲಿನ ಝಳ ಹೆಚ್ಚಳವಾಗಿ, ಸಂಜೆ ನಾಲ್ಕು ಗಂಟೆ ಹೊತ್ತಿಗೆ ಮೋಡ ಕವಿದು, ಅರ್ಧ ಗಂಟೆಗಳ ಕಾಲ ಗುಡುಗು, ಗಾಳಿ ಸಹಿತ ಜೋರಾದ ಮಳೆ ಸುರಿಯಿತು. ಬಿಸಿಲ ಬೇಗೆಗೆ ಬಸವಳಿದಿದ್ದ ನಗರದ ಜನತೆಗೆ ತಂಪೆರೆಯಿತು.

ಬೀದಿ ಪಾಲಾದ ತರಕಾರಿ: ಜಿಲ್ಲಾ ಕೇಂದ್ರ ಹಾವೇರಿ ನಗರದಲ್ಲಿ ಸಂತೆ ದಿನವಾಗಿದ್ದ ಗುರುವಾರ ಲಾಲ್ ಬಹದ್ದೂರ ಶಾಸ್ತ್ರಿ ತರಕಾರಿ ಮಾರುಕಟ್ಟೆಯಲ್ಲಿ ಮಧ್ಯಾಹ್ನ ಸುರಿದ ಮಳೆ ಕೆಲಕಾಲ ಫಜೀತಿ ಸೃಷ್ಟಿಸಿತು. ತರಕಾರಿ ಮಾರುಕಟ್ಟೆಗೆ ವಿವಿಧ ಭಾಗಗಳಿಂದ ಆಗಮಿಸಿದ್ದ ವ್ಯಾಪಾರಸ್ಥರು ತರಕಾರಿ, ಬೀದಿ ಬದಿ ವ್ಯಾಪಾರಿಗಳು, ಹಣ್ಣು ಮಾರಾಟಗಾರರು ವ್ಯಾಪಾರ ವಹಿವಾಟು ನಡೆಸಲು ತಾಡಪತ್ರಿ ಕಟ್ಟಿಕೊಂಡಿದ್ದರೂ ಜೋರಾದ ಗಾಳಿಗೆ ತಾಡಪತ್ರಿ ಕಿತ್ತುಕೊಂಡವು, ಕೆಲವು ಗಾಳಿಗೆ ಹಾರಿ ಹೋದವು. ಬಳಿಕ ಸುರಿದ ಮಳೆಗೆ ತರಕಾರಿ, ಸೊಪ್ಪ್ಪು ಮಳೆಯಲ್ಲಿ ತೊಯ್ದು ರಸ್ತೆಯಲ್ಲಿ ತೇಲಾಡಿದವು. ಟೊಮೆಟೋ, ಬದನೆಕಾಯಿ, ಮೆಣಸಿನಕಾಯಿ, ಈರುಳ್ಳಿ ಸೇರಿದಂತೆ ಹಲವು ತರಕಾರಿಗಳು ರಸ್ತೆ ಮೇಲೆ ತೇಲಿ ಚರಂಡಿ ಸೇರಿದವು.

ತುಂತುರು ಮಳೆ: ಇನ್ನೂ ಜಿಲ್ಲೆಯ ಕೆಲವು ಗ್ರಾಮೀಣ ಪ್ರದೇಶದಲ್ಲಿ ಮೋಡ ಮುಸುಕಿದ ವಾತಾವರಣ ಕಂಡು ಬಂದಿದ್ದು, ಬೆಳಗ್ಗೆ ಮತ್ತು ಸಂಜೆ ತುಂತುರು ಮಳೆಯಾಗಿದೆ. ಬೇಸಿಗೆಯಲ್ಲಿ ಕಟಾವು ಮಾಡಿಕೊಂಡು ಬಂದಿದ್ದ ಮೆಕ್ಕೆಜೋಳ ತೆನೆಯ ರಾಶಿಗಳಿಗೆ, ಮೇವಿನ ಬಣವಿಗಳಿಗೆ ತಾಡಪಾತ್ರಿ ಹೊದಿಸಿ ರಕ್ಷಣೆ ಮಾಡಿಕೊಳ್ಳುತ್ತಿದ್ದ ದೃಶ್ಯಗಳು ಕಂಡಬಂದವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡೊನೇಶನ್ ಹಾವಳಿ ವಿರೋಧಿಸಿ ಹಾವೇರಿಯಲ್ಲಿ ಎಸ್‌ಎಫ್‌ಐ ಪ್ರತಿಭಟನೆ
ಹಾವೇರಿ ಜಿಲ್ಲೆಯಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಗೆ ವೇಗ