ಸೋಲಾರ್ ಘಟಕಗಳಿಂದ ಹಗಲು ರೈತರಿಗೆ 7 ಗಂಟೆ ವಿದ್ಯುತ್ ಪೂರೈಕೆ

KannadaprabhaNewsNetwork |  
Published : Jun 14, 2025, 02:31 AM ISTUpdated : Jun 14, 2025, 11:43 AM IST
ಸೋಲಾರ್ ಘಟಕಗಳಿಂದ ಹಗಲು ರೈತರಿಗೆ 7ಗಂಟೆ ವಿದ್ಯುತ್ ಪೂರೈಕೆ : ಕೆ. ಷಡಕ್ಷರಿ | Kannada Prabha

ಸಾರಾಂಶ

ರೈತರಿಗೆ ವಿದ್ಯುತ್ ಮತ್ತು ನೀರು ಅತ್ಯವಶ್ಯಕವಾಗಿದ್ದು ಈ ನಿಟ್ಟಿನಲ್ಲಿ ಸರ್ಕಾರಗಳು ಸಾಕಷ್ಟು ಒತ್ತು ನೀಡುತ್ತಿದ್ದು ಕುಸುಮ್ ಸಿ ಯೋಜನೆಯಡಿ ನೂತನವಾಗಿ ನಿರ್ಮಿಸಿರುವ ಸೋಲಾರ್ ಘಟಕಗಳ ಮೂಲಕ ರೈತರಿಗೆ ಹಗಲು ವೇಳೆ ಸಮರ್ಪಕ ವಿದ್ಯುತ್ ಪೂರೈಕೆಗೆ ವ್ಯವಸ್ಥೆ ಕಲ್ಪಿಸಲಾಗುವುದು 

  ತಿಪಟೂರು : ರೈತರಿಗೆ ವಿದ್ಯುತ್ ಮತ್ತು ನೀರು ಅತ್ಯವಶ್ಯಕವಾಗಿದ್ದು ಈ ನಿಟ್ಟಿನಲ್ಲಿ ಸರ್ಕಾರಗಳು ಸಾಕಷ್ಟು ಒತ್ತು ನೀಡುತ್ತಿದ್ದು ಕುಸುಮ್ ಸಿ ಯೋಜನೆಯಡಿ ನೂತನವಾಗಿ ನಿರ್ಮಿಸಿರುವ ಸೋಲಾರ್ ಘಟಕಗಳ ಮೂಲಕ ರೈತರಿಗೆ ಹಗಲು ವೇಳೆ ಸಮರ್ಪಕ ವಿದ್ಯುತ್ ಪೂರೈಕೆಗೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಶಾಸಕ ಕೆ. ಷಡಕ್ಷರಿ ತಿಳಿಸಿದರು.

ತಾಲೂಕಿನ ಹೊನ್ನವಳ್ಳಿ ಹೋಬಳಿ ಹಾಲ್ಕುರಿಕೆ ಗ್ರಾಮದ ಸಮೀಪವಿರುವ ಶ್ರೀ ರೇವಣಸಿದ್ದೇಶ್ವರ ಬೆಟ್ಟದಲ್ಲಿ ಬುಧವಾರ ಇಂಧನ ಇಲಾಖೆ ಸಂಯುಕ್ತಾಶ್ರಯದಲ್ಲಿ ಕುಸುಮ್-ಸಿ ಯೋಜನೆಯಡಿ ನೂತನವಾಗಿ ನಿರ್ಮಿಸಿರುವ ನಾಲ್ಕು ಮೆಗಾವ್ಯಾಟ್ ಸೋಲಾರ್ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬೇಸಿಗೆ ಸಮಯದಲ್ಲಿ ರೈತರಿಂದ ಹಾಗೂ ಸಾರ್ವಜನಿಕರಿಗೆ ನೀರು ಮತ್ತು ವಿದ್ಯುತ್ ಬೇಡಿಕೆ ಹೆಚ್ಚಾಗಲಿದೆ. ಈ ಸಮಸ್ಯೆ ನಿವಾರಣೆಗಾಗಿ ಸೋಲಾರ್ ಘಟಕಗಳ ಮೂಲಕ ಉಚಿತ ವಿದ್ಯುತ್ ಸರಬರಾಜು ಮಾಡಲಾಗುವುದು. 

ತಾಲೂಕಿನ ಹಾಲ್ಕುರಿಕೆಯಲ್ಲಿ ಸೋಲಾರ್ ಘಟಕ ಸ್ಥಾಪನೆಯಾಗಿದ್ದು ಮುಂದಿನ ದಿನಗಳಲಿ ಇಲ್ಲಿನ ಕರಡಿ, ಗುಂಗರಮಳೆ, ಕೆರೆಗೋಡಿ ಗ್ರಾಮಗಳಲ್ಲಿ ಸೋಲಾರ್ ಘಟಕಗಳ ಸ್ಥಾಪನೆಗೆ ಈಗಾಗಲೇ ಹಣ ಬಿಡುಗಡೆಯಾಗಿದೆ. ವಿದ್ಯುತ್ ಉಪ ಕೇಂದ್ರಗಳ ಬಳಿ ಕುಸುಮ್-ಸಿ ಯೋಜನೆಯಡಿ ಸೋಲಾರ್ ಘಟಕಗಳನ್ನು ಸ್ಥಾಪಿಸಲಾಗುವುದು. ಸರ್ಕಾರಿ ಭೂಮಿ ಲಭ್ಯವಿದ್ದರೆ ಅನುಕೂಲ, ಇಲ್ಲದಿದ್ದರೆ ಖಾಸಗಿಯವರಿಂದ ಜಮೀನು ತೆಗೆದುಕೊಂಡು ಅದಕ್ಕೆ ನಿರ್ದಿಷ್ಟ ಪರಿಹಾರ ಕಲ್ಪಿಸಲಾಗುವುದು. 

ಸೋಲಾರ್ ವಿದ್ಯುತ್ ಅಳವಡಿಸಿಕೊಳ್ಳಲು ಕೇಂದ್ರ ಶೇ.50 ಹಾಗೂ ರಾಜ್ಯ ಸರ್ಕಾರ ಶೇ. 30ರಷ್ಟು ಸಬ್ಸಿಡಿ ನೀಡಲಾಗುತ್ತಿದ್ದು ಸದ್ಬಳಕೆ ಮಾಡಿಕೊಳ್ಳಬೇಕು. ನಮ್ಮ ಜಿಲ್ಲೆಗೆ ಈಗಾಗಲೆ ಹೇಮಾವತಿ, ಭದ್ರ ಹಾಗೂ ಎತ್ತಿನಹೊಳೆ ಯೋಜನೆಯಿಂದ ನೀರು ಲಭ್ಯವಾಗುವ ಕಾರಣ ನೀರಿನ ಸಮಸ್ಯೆ ಇರುವುದಿಲ್ಲ. ಮುಂದಿನ ದಿನಗಳಲ್ಲಿ ತಾಲೂಕಿಗೆ ನೀರು ಮತ್ತು ವಿದ್ಯುತ್ ಕೊರತೆಯಾಗದಂತೆ ಒದಗಿಸಲಾಗುವುದು ಎಂದರು. 

ತಿಪಟೂರು ವಿಭಾಗದ ಕಾರ್ಯನಿರ್ವಹಣಾಧಿಕಾರಿ ಜಿ. ಸೋಮಶೇಖರ್‌ಗೌಡ ಮಾತನಾಡಿ, ರೇವಣಸಿದ್ದೇಶ್ವರ ಬೆಟ್ಟದಲ್ಲಿ ಸುಮಾರು 17ಎಕರೆ ಜಾಗದಲ್ಲಿ 18ಕೋಟಿ ರೂ ವೆಚ್ಚದಲ್ಲಿ ಸೋಲಾರ್ ಘಟಕ ಸ್ಥಾಪನೆಯಾಗಿದ್ದು 4 ಮೆಗಾವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಉತ್ಪಾದನೆಯಾಗಲಿದೆ. ಕುಸುಮ್ ಎ.ಬಿ.ಸಿ. ಯೋಜನೆಗಳಿದ್ದು ಇವು ರೈತಗರಿಗೆ ವರದಾನವಾಗಿದ್ದು ಜೊತೆಗೆ ಸೂರ್ಯಘರ್ ಯೋಜನೆಯೂ ಚಾಲ್ತಿಯಲ್ಲಿದ್ದು ರೈತರೇ ಸೋಲಾರ್ ಮೂಲಕ ವಿದ್ಯುತ್ ಉತ್ಪಾದಿಸಿ ಕೊಡುವ ಯೋಜನೆಯಾಗಿದ್ದು ಇದಕ್ಕೆ ಆಸಕ್ತ ರೈತರು ಅರ್ಜಿ ಸಲ್ಲಿಸಬಹುದಾಗಿದೆ ಎಂದರು.

ಅಧೀಕ್ಷಕ ಎಂಜಿನಿಯರ್ ನರಸಿಂಹಮೂರ್ತಿ ಮಾತನಾಡಿ, ಜಿಲ್ಲೆಯಲ್ಲಿ ಸೋಲಾರ್ ಪ್ಲಾಂಟ್‌ನ 6 ಪ್ರಾಜೆಕ್ಟ್‌ಗಳು ಮುಗಿದಿದ್ದು 6 ಕಾಮಗಾರಿಗಳು ಚಾಲ್ತಿಯಲ್ಲಿವೆ. ಕುಸುಮ್-ಸಿ ಯೋಜನೆಯಡಿ ಜಿಲ್ಲೆಯಲ್ಲಿ ನೂತನವಾಗಿ 39 ಸೋಲಾರ್ ಉಪ ಘಟಕಗಳಿಗೆ ಟೆಂಡರ್ ಆಗಿದ್ದು ಈ ಪ್ರಾಜೆಕ್ಟ್‌ಗಳು ಚಾಲ್ತಿಯಲ್ಲಿವೆ. ಈ ಘಟಕಗಳಿಗೆ 1300ಎಕರೆ ಜಾಗ ಬೇಕಿದ್ದು ಈಗ 600 ಎಕರೆ ಜಮೀನನ್ನು ಜಿಲ್ಲಾಧಿಕಾರಿಗಳು ಜಾಗ ಗುರ್ತಿಸಿ ನೀಡಿದ್ದಾರೆ.

 ಈ ಎಲ್ಲಾ ಸೋಲಾರ್ ಪ್ರಾಜೆಕ್ಟ್ ಪೂರ್ಣಗೊಂಡರೆ ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಇಲ್ಲದೆ ಪ್ರತಿದಿನ ರೈತರಿಗೆ ಹಗಲಿನಲ್ಲಿ 7ಗಂಟೆ ವಿದ್ಯುತ್ ನೀಡಲಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಸಪ್ತಶ್ರೀ, ತಹಸೀಲ್ದಾರ್ ಪವನ್‌ಕುಮಾರ್, ತಾ.ಪಂ ಇಓ ಸುದರ್ಶನ್, ವಿಭಾಗೀಯ ಕಚೇರಿಯ ಎಇಇ ಜಯಪ್ಪ, ಬೆಸ್ಕಾಂ ಎಇಇ ಮನೋಹರ್, ಗ್ರಾ.ಪಂ ಅಧ್ಯಕ್ಷ ಸೋಮಶೇಖರ್ ಸೇರಿದಂತೆ ಬೆಸ್ಕಾಂ ಅದಿಕಾರಿಗಳು, ಸಿಬ್ಬಂದಿ ವರ್ಗದವರು, ಸ್ಥಳೀಯ ರೈತರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ