- ಪೊಲೀಸ್ ಪರೇಡ್ ಮೈದಾನದಲ್ಲಿ ಹುತಾತ್ಮರ ದಿನಾಚರಣೆ ಕನ್ನಡಪ್ರಭ ವಾರ್ತೆ ಮಂಡ್ಯ ಕಾರ್ಯಾಂಗ ನ್ಯಾಯಾಂಗ, ಶಾಸಕಾಂಗದ ಜೊತೆಗೆ ಸೈನಿಕ, ಕೃಷಿಕ, ಶಿಕ್ಷಕ, ಆರಕ್ಷಕ ಇವು ದೇಶದ ನಾಲ್ಕೂ ಆಧಾರ ಸ್ತಂಭಗಳಂತಿವೆ. ಸೈನಿಕರು ಗಡಿಯಲ್ಲಿ ದೇಶಕ್ಕಾಗಿ ಹೋರಾಟ ಮಾಡಿದರೆ. ಆರಕ್ಷಕ ದೇಶದ ಒಳಗೆ ನಿಂತು ನಮಗೆ ರಕ್ಷಣೆ ಕೊಡುತ್ತಾರೆ ಎಂದು ಜಿಲ್ಲಾಧಿಕಾರಿ ಡಾ. ಕುಮಾರ ತಿಳಿಸಿದರು. ಜಿಲ್ಲಾ ಪೊಲೀಸ್ ಇಲಾಖೆಯಿಂದ ನಗರದ ಪೊಲೀಸ್ ಪೆರೇಡ್ ಮೈದಾನಲ್ಲಿ ನಡೆದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿ, ಪೊಲೀಸರು ಸಹ ಸಮಾಜವನ್ನು ಶಾಂತಿ ಸುವ್ಯವಸ್ಥಿತಯತ್ತ ಕೊಂಡೊಯ್ಯುತ್ತಾರೆ ಹಾಗಾಗಿ ಸೈನಿಕನಷ್ಟೇ ಆರಕ್ಷಕರ ಪಾತ್ರವೂ ಕೂಡ ಗೌರವ ಸೂಚಕವಾಗಿದೆ ಎಂದು ಅಭಿಪ್ರಾಯಿಸಿದರು. ದೇಶಕ್ಕಾಗಿ ಸೇವೆ ಸಲ್ಲಿಸುವುದರ ಮೂಲಕ ತಮ್ಮ ಪ್ರಾಣತೆತ್ತ ಪ್ರತಿಯೊಬ್ಬರಿಗೂ ಗೌರವ ಸಲ್ಲಿಸುವುದು ನಮ್ಮಕರ್ತವ್ಯವಾಗಿದೆ. ಇದರಿಂದ ನಮ್ಮ ದೇಶ ಹಾಗೂ ಸಂವಿಧಾನದ ಗೌರವ ಹೆಚ್ಚಾಗುತ್ತದೆ ಎಂದರು. ಸಮವಸ್ತ್ರ ಧರಿಸಿ ಸಮಯದ ಇತಿಮಿತಿ ಇಲ್ಲದೇ, ಕುಟುಂಬವನ್ನು ಲೆಕ್ಕಿಸದೇ ಸಮಾಜಕ್ಕಾಗಿ ಕೆಲಸ ಮಾಡುವ ಪೊಲೀಸ್ ಅಧಿಕಾರಿಗಳ ಸೇವೆ ನಿಜಕ್ಕೂ ಶ್ಲಾಘನೀಯ. ಪೊಲೀಸರು ಸಮಾಜವನ್ನೇ ತಮ್ಮ ಕುಟುಂಬ ಎಂದು ಕೆಲಸ ನಿರ್ವಹಿಸುತ್ತಾರೆ. ಕರ್ತವ್ಯ ನಿಷ್ಠೆ ಹಾಗೂ ಸಮಯಪಾಲತೆ, ಶಿಸ್ತು, ವಿನಯತೆ, ಬದ್ಧತೆಯಿಂದ ಕೆಲಸ ನಿರ್ವಹಿಸುತ್ತಾರೆ. ಪೊಲೀಸ್ ಅಕಾರಿಗಳು ನಿಮ್ಮ ವೈಯಕ್ತಿಕ ಬದುಕಿಗೂ ಗಮನಕೊಟ್ಟು ಆರೋಗ್ಯ ಕಾಪಾಡಿಕೊಳ್ಳಿ ಎಂದು ಕಿವಿಮಾತು ಹೇಳಿದರು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆಬಿ.ಜಿ ರಮಾ ಮಾತನಾಡಿ, ಪೊಲೀಸರ ಕರ್ತವ್ಯ ನಿಷ್ಠೆಯಿಂದ ಸಮಾಜದಲ್ಲಿ ಪ್ರತಿಯೊಬ್ಬರೂ ಶಾಂತಿಯುತ ಮತ್ತು ನೆಮ್ಮದಿ ಜೀವನ ನಡೆಸಲು ಸಾಧ್ಯವಾಗಿದೆ ಎಂದರು. ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ಯತೀಶ್, ಅಪರ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ ಸೇರಿದಂತೆ ಇತರೆ ಪೊಲೀಸ್ ಅಧಿಕಾರಿಗಳು ಹುತಾತ್ಮರಾದ ಸಿಬ್ಬಂದಿಗೆ ಗೌರವ ನಮನ ಸಲ್ಲಿಸಿದರು.