ಕನ್ನಡಪ್ರಭ ವಾರ್ತೆ ಆಲೂರು
ದೇಶ ಸೇವೆ ಮಾಡುವ ಕನಸು ಹೊತ್ತಿದ್ದ ಮಧು ಸೇನೆಗೆ ನೇಮಕಗೊಂಡು ಸುಮಾರು 15 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಇನ್ನು ಕೇವಲ ಮೂರು ತಿಂಗಳಲ್ಲಿ ನಿವೃತ್ತಿಹೊಂದುವ ನಿರೀಕ್ಷೆಯಲ್ಲಿದ್ದ ಮಧು ಗುರುವಾರ ಸಂಜೆ ನಿಧನ ಹೊಂದಿರುವುದು ಅವರ ಕುಟುಂಬಸ್ಥರಿಗೆ ಮತ್ತು ಇಡೀ ಗ್ರಾಮಸ್ಥರಿಗೆ ತೀವ್ರ ಅಘಾತ ಉಂಟುಮಾಡಿದೆ. ಕಳೆದ ಮೂರು ದಿನಗಳ ಹಿಂದಷ್ಟೇ ರಜೆಯ ಮೇಲೆ ಗ್ರಾಮಕ್ಕೆ ಆಗಮಿಸಿ, ಮತ್ತೆ ಅಸ್ಸಾಂ ರಾಜ್ಯದಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದರು. ಗುರುವಾರ ಸಂಜೆ ಪ್ರತಿನಿತ್ಯದಂತೆ ಸಹೋದ್ಯೋಗಿಗಳೊಂದಿಗೆ ಸೇವೆ ಸಲ್ಲಿಸುತ್ತಿರುವ ವೇಳೆ ನಿಧನ ಹೊಂದಿದ್ದಾರೆಂದು ಸೇನಾ ಕಚೇರಿಯ ಮೂಲಗಳು ತಿಳಿಸಿವೆ. ಅವರ ಅಕಾಲಿಕ ನಿಧನದ ಸುದ್ದಿ ಇಡೀ ಗ್ರಾಮಸ್ಥರಲ್ಲಿ ಶೋಕ ಉಂಟು ಮಾಡಿದೆ. ಮೃತ ಯೋಧನಿಗೆ ತಂದೆ, ತಾಯಿ, ಸಹೋದರಿ, ಸಹೋದರ ಸೇರಿದಂತೆ ಪತ್ನಿ ಹಾಗೂ ಎರಡು ತಿಂಗಳ ಗಂಡು ಮಗು, ಅಪಾರ ಬಂಧು ಬಳಗವಿದೆ.ಸೈನಿಕನ ಪಾರ್ಥಿವ ಶರೀರವು ಅಸ್ಸಾಂನಿಂದ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಲಿದೆ. ಭಾರತೀಯ ಸೇನೆಯ ವಾಹನದಲ್ಲಿ ಹಾಂಜಿಹಳ್ಳಿ ಗ್ರಾಮಕ್ಕೆ ಸಂಜೆ ಗ್ರಾಮಕ್ಕೆ ತಲುಪಲಿದೆ ಎಂದು ಸೇನಾ ಮೂಲಗಳಿಂದ ತಿಳಿದುಬಂದಿದೆ, ಪಾರ್ಥಿವ ಶರೀರ ಆಗಮಿಸಿದ ನಂತರ ಅಂತಿಮ ದರ್ಶನ ಹಾಗೂ ಸಕಲ ಗೌರವದೊಂದಿಗೆ ಅಂತ್ಯ ಸಂಸ್ಕಾರ ಜರಗಲಿದೆ. ದೇಶಕ್ಕಾಗಿ ಸೇವಿ ಸಲ್ಲಿಸುವ ವೇಳೆ ನಿಧನ ಹೊಂದಿದ ಯೋಧನಿಗೆ ಗೌರವ ಸಲ್ಲಿಸಲು ಗ್ರಾಮಸ್ಥರು ಸಿದ್ಧತೆ ನಡೆಸಿದ್ದಾರೆ.