ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ಚನ್ನಪಟ್ಟಣ ಉಪಚುನಾವಣೆಯ ಎನ್‌ಡಿಎ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದು, ಅವರ ಈ ನಡೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ಚನ್ನಪಟ್ಟಣ : ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ಚನ್ನಪಟ್ಟಣ ಉಪಚುನಾವಣೆಯ ಎನ್‌ಡಿಎ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದು, ಅವರ ಈ ನಡೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ಚನ್ನಪಟ್ಟಣದ ಉಪಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ಜೆಡಿಎಸ್ ಚಿಹ್ನೆಯಡಿ ಸ್ಪರ್ಧಿಸುವಂತೆ ನೀಡಿದ್ದ ಆಫರ್ ಅನ್ನು ನಿರಾಕರಿಸಿರುವ ಅವರು, ಸೋಮವಾರ ದಿಢೀರ್ ಎಂದು ಹುಬ್ಬಳ್ಳಿಗೆ ತೆರಳಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ.
ಜೆಡಿಎಸ್ ಟಿಕೆಟ್ ನಿರಾಕರಿಸಿದ ಸೈನಿಕ!:
ಯೋಗೇಶ್ವರ್ ಚನ್ನಪಟ್ಟಣ ಉಪಚುನಾವಣೆಯ ಎನ್‌ಡಿಎ ಟಿಕೆಟ್‌ನ ಪ್ರಬಲ ಆಕ್ಷಾಂಕ್ಷಿಯಾಗಿದ್ದರು. ಎನ್‌ಡಿಎ ಟಿಕೆಟ್ ಪಡೆಯಲೇಬೇಕು ಎಂದು ಅವರು ಕಳೆದ ಕೆಲ ತಿಂಗಳಿನಿಂದ ಸಾಕಷ್ಟು ಕಸರತ್ತು ನಡೆಸಿದ್ದರು. ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ- ಜೆಡಿಎಸ್ ನಡುವೆ ಸಾಕಷ್ಟು ಹಗ್ಗ- ಜಗ್ಗಾಟ ನಡೆದಿತ್ತು. ಕೊನೆಗೆ ಜೆಡಿಎಸ್‌ನಿಂದ ಸ್ಪರ್ಧಿಸುವಂತೆ ಯೋಗೇಶ್ವರ್‌ಗೆ ಆಫರ್ ಸಹ ನೀಡಲಾಗಿತ್ತು. ಆದರೆ, ಇದನ್ನು ನಿರಾಕರಿಸಿರುವ ಅವರು ಬಿಜೆಪಿಯಿಂದಲೇ ಟಿಕೆಟ್ ನೀಡುವಂತೆ ಪಟ್ಟು ಹಿಡಿದಿದ್ದರು.
ಆಫರ್‌ಗೆ ಸಮ್ಮತಿಸದ ಸಿಪಿವೈ ಬೆಂಬಲಿಗರು?:
ಇನ್ನು ಉಪಚುನಾವಣೆಯಲ್ಲಿ ಜೆಡಿಎಸ್ ಚಿಹ್ನೆಯಡಿ ಸ್ಪರ್ಧಿಸುವಂತೆ ನೀಡಲಾಗಿರುವ ಆಫರ್ ಕುರಿತು ಯೋಗೇಶ್ವರ್ ಕಳೆದ ಎರಡು ದಿನಗಳಿಂದ ತಮ್ಮ ಬೆಂಬಲಿಗರೊಂದಿಗೆ ಸತತ ಸಭೆ ನಡೆಸಿದ್ದರು. ಯೋಗೇಶ್ವರ್ ಅವರ ಬಹುತೇಕ ಬೆಂಬಲಿಗರು ಜೆಡಿಎಸ್‌ನ ಈ ಆಫರ್ ಕುರಿತು ಸಹಮತ ವ್ಯಕ್ತಪಡಿಸಿಲ್ಲ. ಈ ಹಿನ್ನೆಲೆಯಲ್ಲಿ ಬೆಂಬಲಿಗರನ್ನು ಕಳೆದುಕೊಳ್ಳಲು ಸಿದ್ಧರಿಲ್ಲದ ಸಿಪಿವೈ ಜೆಡಿಎಸ್‌ನಿಂದ ಸ್ಪರ್ಧಿಸುವ ಅವಕಾಶವನ್ನು ನಿರಾಕರಿಸಿದ್ದಾರೆ ಎನ್ನಲಾಗಿದೆ.
ಈ ಹಿಂದೆ ಬಿಜೆಪಿ ಅಥವಾ ಜೆಡಿಎಸ್‌ನಿಂದ ಯಾವ ಪಕ್ಷದಿಂದ ಬೇಕಾದರೂ ಸ್ಪರ್ಧಿಸಲು ಸಿದ್ಧ ಎನ್ನುತ್ತಿದ್ದ ಯೋಗೇಶ್ವರ್ ಜೆಡಿಎಸ್ ಟಿಕೆಟ್ ಆಫರ್ ಅನ್ನು ನಿರಾಕರಿಸಲು ಕಾರ್ಯಕರ್ತರ ಸಮ್ಮತಿ ದೊರೆಯದೇ ಇದ್ದದ್ದೆ ಕಾರಣ ಎನ್ನಲಾಗಿದೆ. ಕಳೆದ ಎರಡು ದಶಕಕ್ಕೂ ಹೆಚ್ಚಿನ ಕಾಲ ಕ್ಷೇತ್ರದಲ್ಲಿ ಜೆಡಿಎಸ್ ವಿರುದ್ಧ ರಾಜಕಾರಣ ಮಾಡಿಕೊಂಡು ಬಂದಿದ್ದು, ಈಗ ಆ ಪಕ್ಷದ ಚಿಹ್ನೆಯಡಿ ಸ್ಪರ್ಧಿಸಲು ಬೆಂಬಲಿಗರು ಸಿದ್ಧರಿಲ್ಲದ ಕಾರಣ ಸಿಪಿವೈ ಯೋಗೇಶ್ವರ್ ರಾಜೀನಾಮೆ ನಿರ್ಧಾರ ಕೈಗೊಂಡರು ಎನ್ನಲಾಗಿದೆ.
ಸೈನಿಕನ ಮುಂದಿನ ನಡೆಯೇನು?:
ವಿಧಾನಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಯೋಗೇಶ್ವರ್ ಮುಂದಿನ ನಡೆ ಏನು ಎಂಬುದು ನಿಗೂಢವಾಗಿದೆ. ಇಷ್ಟು ದಿನ ಎನ್‌ಡಿಎ ಟಿಕೆಟ್‌ಗಾಗಿ ತೀವ್ರ ಹೋರಾಟ ನಡೆಸಿದ್ದ ಯೋಗೇಶ್ವರ್ ದಿಢೀರ್ ಎಂದು ರಾಜೀನಾಮೆ ನೀಡಿರುವುದು ಕ್ಷೇತ್ರದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಸಿಪಿವೈ ಮುಂದಿನ ರಾಜಕೀಯ ನಡೆಯ ಕುರಿತು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿದೆ.
ಕೈಹಿಡಿಯುವರೇ ಸೈನಿಕ?:
ಯೋಗೇಶ್ವರ್ ಕಾಂಗ್ರೆಸ್‌ಗೆ ಸೇರ್ಪಡೆಗೊಂಡು ಕಾಂಗ್ರೆಸ್ ಟಿಕೆಟ್‌ನಿಂದ ಸ್ಪರ್ಧಿಸಲಿದ್ದಾರೆ ಎನ್ನುವ ವದಂತಿ ಚನ್ನಪಟ್ಟಣದಲ್ಲಿ ವ್ಯಾಪಕವಾಗಿ ಹರಡಿದೆ. ಇದೇ ವೇಳೆ ಅವರು ಪಕ್ಷೇತರರಾಗಿ, ಬಿಎಸ್‌ಪಿಯಿಂದ ಇಲ್ಲವೇ ಬೇರೆ ಯಾವುದಾದರೂ ಪಕ್ಷದ ಚಿಹ್ನೆ ಪಡೆದು ಸ್ಪರ್ಧೆಗೆ ಇಳಿಯಲಿದ್ದಾರೆ ಎಂಬ ಮಾತುಗಳೂ ಸಹ ಕೇಳಿಬರುತ್ತಿವೆ. ಸೋಮವಾರ ರಾತ್ರಿ ಅವರು ಹುಬ್ಬಳಿಯಿಂದ ಬೆಂಗಳೂರಿಗೆ ವಾಪಸ್ ಬರಲಿದ್ದು, ಸೈನಿಕ ಮುಂದಿನ ನಡೆಯ ಕುರಿತು ಮಂಗಳವಾರ ಒಂದು ನಿರ್ಧಾರ ಪ್ರಕಟಗೊಳ್ಳುವ ಸಾಧ್ಯತೆ ಇದೆ.
‘ಇಂದು ಜೆ.ಪಿ.ಭವನದಲ್ಲಿ ಜೆಡಿಎಸ್ ಸಭೆ’
ಚನ್ನಟಪ್ಟಣ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆಯ್ಕೆ ಸಂಬಂಧ ಬೆಂಗಳೂರಿನ ಜೆ.ಪಿ.ಭವನದಲ್ಲಿ ಚನ್ನಪಟ್ಟಣ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯನ್ನು ಮಂಗಳವಾರ ಕರೆಯಲಾಗಿದೆ. ಪಕ್ಷದ ವರಿಷ್ಠರಾದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಸಭೆ ಆಯೋಜಿಸಲಾಗಿದ್ದು, ನಿಖಿಲ್ ಕುಮಾರಸ್ವಾಮಿ ಹಾಗೂ ತಾಲೂಕಿನ ಜೆಡಿಎಸ್ ಮುಖಂಡರು ಪಾಲ್ಗೊಳ್ಳಲಿದ್ದು, ಪಕ್ಷದ ಅಭ್ಯರ್ಥಿ ವಿಚಾರದಲ್ಲಿ ಒಂದು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.