ಕನ್ನಡಪ್ರಭ ವಾರ್ತೆ ಮಡಿಕೇರಿಇಂದಿನ ಯುವಪೀಳಿಗೆಗೆ ಚಿತ್ರತಾರೆಯರು, ಕ್ರಿಕೆಟಿಗರು, ಭ್ರಷ್ಟ ರಾಜಕಾರಣಿಗಳೇ ಆದರ್ಶಪ್ರಾಯರಾಗುತ್ತಿದ್ದಾರೆಯೇ ವಿನಃ ದೇಶಕ್ಕಾಗಿ ಹೋರಾಡುವ ಸೈನಿಕರನ್ನು ಯುವಜನಾಂಗ ಮರೆಯುತ್ತಿದೆ ಎಂದು ನಿವೃತ್ತ ಏರ್ ಮಾರ್ಷಲ್ ಕೆ.ಸಿ. ನಂದಕಾರ್ಯಪ್ಪ ವಿಷಾದಿಸಿದ್ದಾರೆ.
ಮಡಿಕೇರಿಯಲ್ಲಿನ ಫೀಲ್ಡ್ ಮಾರ್ಷಲ್ ಕೆ.ಸಿ.ಕಾರ್ಯಪ್ಪ ಅವರ ನಿವಾಸ ರೋಶನಾರದಲ್ಲಿರುವ ಕಾರ್ಯಪ್ಪ ಸಮಾಧಿ ಸ್ಥಳದಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ 125ನೇ ಹುಟ್ಟು ಹಬ್ಬದ ಸಂದರ್ಭ ಅವರ ಮಗ ನಂದ ಕಾರ್ಯಪ್ಪ ಮಾತನಾಡಿದರು.ಯುವಪೀಳಿಗೆಗೆ ಸೈನಿಕರ ದೇಶಸೇವೆಯನ್ನು ಪರಿಣಾಮಕಾರಿಯಾಗಿ ತಿಳಿಹೇಳುವ ಅನಿವಾರ್ಯತೆ ಹಿಂದೆಂದಿಗಿಂತ ಹೆಚ್ಚಾಗಿದೆ. ದೇಶಕ್ಕಾಗಿ ಹಗಲಿರುಳು ಹೋರಾಡುವ ಸೈನಿಕರು ಇಂದಿನ ಯುವಪೀಳಿಗೆಗೆ ಮಾದರಿಯಾಗಬೇಕು. ಆದರ್ಶವಾಗಬೇಕು, ಸ್ಫೂರ್ತಿಯಾಗಬೇಕೆಂದು ಅವರು ಕರೆ ನೀಡಿದರು.
ತನ್ನ ತಂದೆಯ ಪುಣ್ಯಸ್ಮರಣೆಯನ್ನು ಕೊಡಗು ವಿದ್ಯಾಲಯ ಶಿಕ್ಷಣ ಸಂಸ್ಥೆಯು ಮಕ್ಕಳ ಸಮ್ಮುಖದಲ್ಲಿ ವರ್ಷಂಪ್ರತಿ ಆಚರಿಸುತ್ತಾ ಬರುತ್ತಿರುವುದು ಶ್ಲಾಘನೀಯ ಎಂದು ಕಾರ್ಯಪ್ಪ ಹೇಳಿದರು.ಮಾದಾಪುರದ ಶ್ರೀಮತಿ ಡಿ.ಚೆನ್ನಮ್ಮ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಿವೃತ್ತ ಕರ್ನಲ್ ಬಿ.ಜಿ.ವಿ. ಕುಮಾರ್ ಮಾತನಾಡಿ, ದೇಶಕ್ಕಾಗಿ ಕಾರ್ಯಪ್ಪ ಅವರ ಕರ್ತವ್ಯಪರತೆಯನ್ನು ಕೊಂಡಾಡಿದರು. ಕಾರ್ಯಪ್ಪ ಅವರು ಸದಾ ದೇಶದ ಬಗ್ಗೆ ಚಿಂತಿಸುತ್ತಿದ್ದರು. ಅನೇಕ ಮಾನವೀಯ ಗುಣಗಳು ಕೂಡ ಅವರಲ್ಲಿ ಹಾಸುಹೊಕ್ಕಾಗಿದ್ದವು. ಬಡವಿದ್ಯಾರ್ಥಿಗಳೂ ಸೇರಿದಂತೆ ಆರ್ಥಿಕ ಅಗತ್ಯವುಳ್ಳವರಿಗೆ ಕಾರ್ಯಪ್ಪ ನೆರವು ನೀಡುತ್ತಿದ್ದರು ಎಂದು ಕುಮಾರ್ ಸ್ಮರಿಸಿದರು.ಫೀಲ್ಡ್ ಮಾರ್ಷಲ್ ಕೆ.ಸಿ.ಕಾರ್ಯಪ್ಪ ಅವರ ಮಕ್ಕಳಾದ ನಿವೃತ್ತ ಏರ್ ಮಾರ್ಷಲ್ ನಂದಾಕಾರ್ಯಪ್ಪ, ನಳಿನಿ ಕಾರ್ಯಪ್ಪ ಸಮಾಧಿ ಸ್ಥಳದಲ್ಲಿ ದೀಪ ಬೆಳಗಿ ಗೌರವ ನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಬಹುಮಾನ ವಿತರಣೆ: ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ನಾಪೋಕ್ಲುವಿನ ಅಂಕುರ್ ಪಬ್ಲಿಕ್ ಶಾಲಾ ವಿದ್ಯಾರ್ಥಿನಿ ಅಮ್ ಅಬೀಬಾ ಪಿ.ಎಂ. ಅವರಿಗೆ ಏರ್ ಮಾರ್ಷಲ್ ಕಾರ್ಯಪ್ಪ ಮತ್ತು ಮೀನಾ ಕಾರ್ಯಪ್ಪ ಟ್ರೋಫಿ ವಿತರಿಸಿದರು. ವಿದ್ಯಾರ್ಥಿನಿ ಅಕ್ಷರ ಟಿ.ಅಪ್ಪಣ್ಣ ಈ ಸಂದರ್ಭ ಫೀಲ್ಡ್ ಮಾರ್ಷಲ್ ಜೀವನ ಕುರಿತಾಗಿ ಮಾತನಾಡಿದರು.ನಿವೃತ್ತ ಸೇನಾಧಿಕಾರಿಗಳು, ಎನ್‌ಸಿಸಿ, ಪೊಲೀಸ್, ಕೂಡಿಗೆ ಸೈನಿಕ ಶಾಲೆಯ ಕೆಡೆಟ್‌ಗಳು, ಕೊಡಗು ವಿದ್ಯಾಲಯದ ಆಡಳಿತ ಮಂಡಳಿ ನಿರ್ದೇಶಕರು, ಶಿಕ್ಷಕ ವೃಂದ, ವಿದ್ಯಾರ್ಥಿಗಳು, ಕೊಡಗು ವಿದ್ಯಾಲಯದ ಆಪಚ್ಯುನಿಟಿ ಶಾಲೆಯ ಶಿಕ್ಷಕರು, ನಾಗರಿಕ ಪ್ರಮುಖರು ಸೇರಿದಂತೆ ಅನೇಕರು ಪಾಲ್ಗೊಂಡು ರೋಶನಾರದಲ್ಲಿರುವ ಕಾರ್ಯಪ್ಪ ಸಮಾಧಿ ಸ್ಥಳಕ್ಕೆ ಪುಷ್ಪನಮನ ಸಲ್ಲಿಸಿದರು.ಕೊಡಗು ವಿದ್ಯಾಲಯದ ಶಿಕ್ಷಕಿಯರಾದ ಅಲೆಮಾಡ ಚಿತ್ರನಂಜಪ್ಪ, ಪ್ರತಿಭಾಶೇಟ್ ನೇತೖತ್ವದಲ್ಲಿ ವಿದ್ಯಾರ್ಥಿಗಳು ಕಾರ್ಯಪ್ಪ ಅವರಿಗೆ ಪ್ರಿಯವಾಗಿದ್ದ ಭಜನೆ, ದೇಶಭಕ್ತಿಗೀತೆಗಳನ್ನು ಹಾಡಿದರು. ಕೊಡಗು ವಿದ್ಯಾಲಯದ ಆಡಳಿತ ವ್ಯವಸ್ಥಾಪಕ ರವಿ ಹಾಜರಿದ್ದರು.