ಕುಂದಗೋಳ:
ಮಳೆ-ಗಾಳಿ, ಚಳಿ-ಬಿಸಿಲು ಎನ್ನದೇ ನಮ್ಮೆಲ್ಲರನ್ನು ಸುರಕ್ಷಿತವಾಗಿ ಇಟ್ಟು ಗಡಿ ಕಾಯುವ ಸೈನಿಕರೇ ನಿಜವಾದ ಹೀರೋಗಳು ಎಂದು ಲೇಖಕ ಆದರ್ಶ ಗೋಖಲೆ ಹೇಳಿದರು.ಪಟ್ಟಣದ ಸವಾಯಿ ಗಂಧರ್ವ ಸ್ಮಾರಕ ಭವನದಲ್ಲಿ ನಿರಾಯಮ್ ಫೌಂಡೇಶನ್ ವತಿಯಿಂದ ನಡೆದ ಕಾರ್ಗಿಲ್ ವಿಜಯ ರಜತ ಮಹೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಗಿಲ್ ಯುದ್ಧದ ಸಮಯದಲ್ಲಿ 21 ಜನ ಪರಮವೀರ ಚಕ್ರ ಪಡೆದವರಲ್ಲಿ ಸೋಮನಾಥ ಶರ್ಮಾ, ವಿಕ್ರಮ ಬಾದ್ರಾ, ಯೋಗೀಂದ್ರಸಿಂಗ್ ಯಾದವ್ ಅವರ ಜೀವ ಬಲಿದಾನ, ಶೌರ್ಯ, ಯಶೋಗಾಥೆಯನ್ನು ಸ್ಮರಿಸಿದರು. ಇಂದು ಸಿನಿಮಾನಟ, ರೀಲ್ಸ್ ಮಾಡುವವನು ಹೀರೋ ಎಂದು ಭಾವಿಸಿಕೊಳ್ಳಲಾಗುತ್ತಿದೆ. ಆದರೆ ಪಾಕಿಸ್ತಾನದ ಚಿತ್ರ-ವಿಚಿತ್ರ ಆಕ್ರಮಣ ಅನುಭವಿಸಿ ಅವರಿಗೆ ತಕ್ಕ ಉತ್ತರ ನೀಡುವ ನಮ್ಮ ಸೈನಿಕರು ನಮ್ಮ ಹೀರೋಗಳು ಎಂದರು.ನಿರಾಯಮ್ ಫೌಂಡೇಶನ್ ಸಂಸ್ಥಾಪಕ ಹಾಗೂ ಬಿಜೆಪಿ ರಾಜ್ಯ ಯುವ ಘಟಕದ ಉಪಾಧ್ಯಕ್ಷ ಮಲ್ಲಿಕಾರ್ಜುನ ಬಾಳಿಕಾಯಿ ಮಾತನಾಡಿ, ಸೈನಿಕರಿಗೆ ಹಾಗೂ ತೋಪಗೆ ಮಾಲಿ ಹಾಕಿ ವಾಟ್ಸ್‌ಆ್ಯಪ್, ಫೇಸ್‌ಬುಕ್‌ನಲ್ಲಿ ಸ್ಟೇಟಸ್ ಇಟ್ಟುಕೊಳ್ಳುವುದಲ್ಲ. ಭಾರತ ಮಾತೆಗಾಗಿ ಕಾರ್ಗಿಲ್ ಯುದ್ಧದಲ್ಲಿ ರಕ್ತ ಹರಿಸಿದ 538 ಹೆಚ್ಚು ಸೈನಿಕರಿಗೆ ನಾವು ಇಂದಿನ ರಕ್ತದಾನದ ಮೂಲಕ ನಮನ ಸಲ್ಲಿಸಬೇಕು ಎಂದು ಹೇಳಿದರು.
ಶಿವಾನಂದ ಮಠದ ಶ್ರೀಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನಿರಾಯಮ್ ಫೌಂಡೇಶನ್ ಅಧ್ಯಕ್ಷ ಗುರು ಬನ್ನಿಕೊಪ್ಪ, ಮಾಜಿ ಯೋಧ, ಅಂತಾರಾಷ್ಟ್ರೀಯ ಶೂಟರ್ ರವಿಚಂದ್ರ ಬಾಳೆಹೊಸೂರು ಮಾತನಾಡಿದರು. ಈ ವೇಳೆ ಲ್ಯಾನ್ಸ್ ನಾಯಕ ಹನುಮಂತಪ್ಪ ಕೊಪ್ಪದ ಅವರ ತಾಯಿ ಬಸಮ್ಮ ಕೊಪ್ಪದ ಸೇರಿದಂತೆ 25 ಕ್ಕೂ ಹೆಚ್ಚು ಸೈನಿಕರನ್ನು ಸನ್ಮಾನಿಸಲಾಯಿತು. ರಾಷ್ಟ್ರೋತ್ಥಾನ ರಕ್ತಕೇಂದ್ರ ವತಿಯಿಂದ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. ಇದರಲ್ಲಿ ಮಾಜಿ ಸೈನಿಕರು, ಯುವ ಮಿತ್ರರು, ರೈತರು ಸೇರಿದಂತೆ 90ಕ್ಕೂ ಅಧಿಕ ಜನ ರಕ್ತದಾನ ಮಾಡಿದರು.ಈ ವೇಳೆ ದಂತಮೂರ್ತಿ ಕುಲಕರ್ಣಿ, ಹನುಮಂತಗೌಡ ಪಾಟೀಲ್, ಬಸವರಾಜ ಸಿಎಂ, ಗುರುಭದ್ರಾಪೂರ, ವಿಕಾಸ ಕಿರೇಸೂರ, ಸಾಗರ ಕಿರೇಸೂರ, ಪ್ರವೀಣ ಕಿರೇಸೂರ, ವೀರೇಶ ಭಂಡಿವಾಡ, ಪ್ರವೀಣ ಮುದ್ದೆಣ್ಣವರ, ಕಿರಣ ಕಲಾಲ್, ಪಾಂಡು ಕುಂಕೂರ್, ರಾಘು ಕಾಕಡೆ, ಅನಿಲ ಮಾವಿನಕಾಯಿ, ವಿಶಾಲ್ ಕುಲಕರ್ಣಿ, ಮಂಜು ಛಲವಾದಿ, ಮಂಜು ಅಣ್ಣಿಗೇರಿ ಸೇರಿದಂತೆ ವಿವಿಧ ಗ್ರಾಮಗಳ ಯುವಕರು ಉಪಸ್ಥಿತರಿದ್ದರು.