ಕನ್ನಡಪ್ರಭ ವಾರ್ತೆ ಮೂಡಲಗಿ
ಸಾವನ್ನು ಬೆನ್ನಿಗೆ ಕಟ್ಟಿ ಕೊಂಡು ದೇಶ ರಕ್ಷಣೆ ಮಾಡುವ ಯೋಧರು ಇರುವುದರಿಂದಾಗಿ ದೇಶದ ಪ್ರಜೆಗಳು ನೆಮ್ಮದಿಯಿಂದ ಜೀವನ ಸಾಗಿಸಲು ಸಾಧ್ಯವಾಗಿದೆ ಎಂದು ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಹೇಳಿದರು.ಭಾರತೀಯ ಸೇನೆಯಲ್ಲಿ ಸುಧೀರ್ಘ 22 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಯಾಗಿ ಮರಳಿ ತವರೂರಿಗೆ ಆಗಮಿಸಿದ ಗಣಪತಿ ಮಲ್ಲಪ್ಪ ರಡರಟ್ಟಿ ಅವರಿಗೆ ಮೂಡಲಗಿ-ಶಿವಾಪುರ ಗ್ರಾಮಸ್ಥರು ಏರ್ಪಡಿಸಿದ್ದ ಸ್ವಾಗತ ಮತ್ತು ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಸ್ವಂತ ಊರು, ತಂದೆ, ತಾಯಿ, ಕುಟುಂಬ ಎಲ್ಲವನ್ನೂ ತ್ಯಾಗ ಮಾಡಿ ದೇಶ ಕಾಯುವ ಯೋಧರಿಗೆ ಸರ್ವಕಾಲಿಕ ಗೌರವ ಸಲ್ಲಬೇಕು. ಯೋಧರನ್ನು ಗೌರವಿಸುವುದರಿಂದ ಯುವ ಜನತೆಗೆ ಸೇನೆಯನ್ನು ಸೇರಲು ಪ್ರೇರಣೆಯಾಗುತ್ತದೆ ಎಂದರು.ಸಾಹಿತಿ ಬಾಲಶೇಖರ ಬಂದಿ ಮಾತನಾಡಿ, ದೇಶಕ್ಕೆ ಅನ್ನ ನೀಡುವ ರೈತ, ದೇಶ ಕಾಯುವ ಯೋಧ ಹಾಗೂ ಅಕ್ಷರ ಕಲಿಸುವ ಶಿಕ್ಷಕ ಇವರು ಸಮಾಜದ ಕಣ್ಮಣಿಗಳು. ಸಮಾಜವು ಗೌರವಿಸಲ್ಪಡಬೇಕು. ಮೂಡಲಗಿ-ಶಿವಾಪುರ ಗ್ರಾಮಸ್ಥರು ನಿವೃತ್ತಯೋಧನ ಬರಮಾಡಿಕೊಳ್ಳುವ ಮೂಲಕ ಯೋಧರಿಗೆ ಬಹುದೊಡ್ಡ ಗೌರವ ನೀಡಿರುವುದು ಶ್ಲಾಘನೀಯ ಎಂದರು.ಭಾಗೋಜಿಕೊಪ್ಪ, ಮುನ್ಯಾಳ, ರಂಗಾಪುರದ ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸಿಪಿಐ ಶ್ರೀಶೈಲ್ ಬ್ಯಾಕೂಡ, ಮಂಜುನಾಥ ಸೈನಿಕ ಕೇಂದ್ರ ಅಧ್ಯಕ್ಷ ಹಾಗೂ ನ್ಯಾಯವಾದಿ ಲಕ್ಷ್ಮಣ ಅಡಿಹುಡಿ, ಬೆಳಗಾವಿ ಮಾಜಿ ಸೈನಿಕರ ಸಂಘಟನೆಗಳ ಮಹಾ ಒಕ್ಕೂಟದ ಜಿಲ್ಲಾ ಅಧ್ಯಕ್ಷ್ಷ ಜಗದಯ್ಯಾ ಪೂಜೇರಿ, ಅಖಿಲ ಕರ್ನಾಟಕ ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘ ಮೂಡಲಗಿ ತಾಲೂಕದ ಘಟಕದ ಅಧ್ಯಕ್ಷ ಚರಂತಯ್ಯ ಮಳ್ಳಿಮಠ ಮಾತನಾಡಿದರು.ಸಮಾರಂಭದಲ್ಲಿ ಶಿರೋಳದ ಬಸವರಾಜ ಮಹಾಲಿಂಗಪುರ, ಸಂತ ಕೃಷ್ಣಾಜೀ, ಶಿವಾಪೂರ ಗ್ರಾಪಂ ಅಧ್ಯಕ್ಷೆಯ ಮನವ್ವ ಗಿಡ್ಡವ್ವಗೋಳ, ಮೂಡಲಗಿ ಪುರಸಭೆ ಅಧ್ಯಕ್ಷೆ ಖುರ್ಷದ ನದಾಫ, ಉಪಾಧ್ಯಕ್ಷೆ ಭೀಮವ್ವ ಪೂಜೇರಿ, ತಾಲೂಕು ಪಂಚಾಯತಿ ಸಿಇಒ ಎಫ್.ಜಿ.ಚಿನ್ನನವರ, ಉಪತಹಸೀಲ್ದಾರ್ ರಾಜಶೇಖರ ಯಳಸಂಗ, ಶಿಕ್ಷಣ ಇಲಾಖೆಯ ವಿ.ಆರ್.ಯರಗಟ್ಟಿ, ಯೋಧನ ತಾಯಿ ಕೆಂಚವ್ವ, ಪತ್ನಿ ಚಂದ್ರಿಕಾ, ಕರುನಾಡು ಸೈನಿಕ ತಬೇತಿ ಕೇಂದ್ರದ ಸವಿತಾ ತುಕ್ಕನ್ನವರ, ಅಖಿಲ ಕರ್ನಾಟಕ ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘ ಮೂಡಲಗಿ ತಾಲೂಕದ ಗೌರವಾಧ್ಯಕ್ಷ ಶಿವಪ್ಪ ಮಾಲಗಾರ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಕೃಷ್ಣಾ ಗಿರೆಣ್ಣವರ, ಮಾಜಿ ಮಾಲಗಾರ, ಅಧ್ಯಕ್ಷ ಚರಂತಯ್ಯ ಮಳ್ಳಿಮಠ ಹಾಗೂ ಬಂಧು ಬಾಂಧವರು ಮತ್ತಿತರರು ಭಾಗವಹಿಸಿದ್ದರು. ಸಿದ್ದು ದುರದುಂಡಿ ನಿರೂಪಿಸಿದರು ಹಾಗೂ ಶಿಕ್ಷಕ ಎನ್.ಜಿ.ಹೆಬ್ಬಳ್ಳಿ ಸ್ವಾಗತಿಸಿ, ನಿರೂಪಿಸಿದರು.ಗಮನೆಸೆಳೆದ ಮೆರವಣಿಗೆ
ಮೂಡಲಗಿ ಪಟ್ಟಣದ ಪೊಲೀಸ್ ಠಾಣೆ ಬಳಿಯಲ್ಲಿ ಆಗಮಿಸಿದ್ದ ಗಣಪತಿ ರಡರಟ್ಟಿ ಅವರನ್ನು ಶಾಲು, ಹೂ ಮಾಲೆಗಳನ್ನು ಹಾಕಿ ಜೈಕಾರ ಘೋಷಣೆಗಳನ್ನು ಹಾಕಿ ಗಣ್ಯರು, ತಾಲೂಕು ಅಧಿಕಾರಿಗಳು ಮತ್ತು ಗ್ರಾಮಸ್ಥರು ಸಂಭ್ರಮದಿಂದ ಬರಮಾಡಿಕೊಂಡರು. ಅಲ್ಲಿಂದ ಹೂವಿನಿಂದ ಅಲಂಕೃತಗೊಳಿಸಿದ್ದ ತೆರೆದ ಜೀಪದಲ್ಲಿ ಗಣಪತಿ ಮತ್ತು ಆತನ ಪತ್ನಿ ಹಾಗೂ ಇಬ್ಬುರ ಮಕ್ಕಳೊಂದಿಗೆ ಮೆರವಣಿಗೆಯ ಮೂಲಕ ಅವರ ಮನೆಯ ವರೆಗೆ ಕರೆ ತರಲಾಯಿತು. ಮೆರವಣಿಗೆಯ ದಾರಿಯುದ್ದಕ್ಕೂ ಸ್ಥಳೀಯ ಮಂಜುನಾಥ ಸೈನಿಕ ತರಬೇತಿಕೇಂದ್ರದ ಪ್ರಶಿಕ್ಷಣಾರ್ಥಿಗಳು ಪಥ ಸಂಚಲನದೊಂದಿಗೆ ನಿವೃತ್ತ ಯೋಧನಿಗೆ ಹೂ ಮಳೆಗೈದು ಗೌರವ ಸಲ್ಲಿಸುವ ದೃಶ್ಯವು ಎಲ್ಲರ ಗಮನ ಸೆಳೆಯಿತು. ಧ್ವನಿವರ್ದಕದಲ್ಲಿ ದೇಶ ಭಕ್ತಿ ಹಾಡುಗಳು, ದೇಶಾಭಿಮಾನದ ಘೋಷಣೆಗಳು ಮೆರವಣಿಗೆಯಲ್ಲಿ ಮೊಳಗಿದವು. ಮೆರವಣಿಗೆಯು ಮೂಡಲಗಿ-ಶಿವಾಪೂರದಿಂದ ರೇಣುಕಾ ನಗರದಕ್ಕೆ ಆಗಮಿಸುತ್ತಿದ್ದಂತೆ ಮಹಿಳೆಯರು ಆರತಿ ಬೆಳಗಿ ಯೋಧನ ಹಣೆಗೆ ತಿಲಕವನ್ನಿಟ್ಟು ಹೂ ಮಳೆಗೈದು ಬರಮಾಡಿಕೊಂಡರು. ಪೂಜ್ಯರು, ರೇಣುಕಾನಗರ ಗೆಳೆಯರ ಬಳಗ, ತಾಲೂಕು ಆಡಳಿತದ ಅಧಿಕಾರಿಗಳು, ಮಾಜಿಯೋಧರ ಸಂಘದ ಪದಾಧಿಕಾರಿಗಳು, ಗ್ರಾಮದ ಗೆಳೆಯರ ಬಳಗ ಮತ್ತು ಯುವಕ ಸಂಘಗಳ ಪದಾಧಿಕಾರಿಗಳು ಸೇರಿದಂತೆ ಯೋಧನ ಪರಿವಾರದ ಸದಸ್ಯರು ಸನ್ಮಾನಿಸಿ ಗೌರವಿಸಿದರು.